ಪರಿಶಿಷ್ಟರಿಗೆ ಕೆಎಂಎಫ್, ಡಿಸಿಸಿ ಬ್ಯಾಂಕ್‍ಗಳಲ್ಲಿ ಮೀಸಲಾತಿ ಕಲ್ಪಿಸಬೇಕು: ಶಿಫಾರಸು
ಬೆಳಗಾವಿ: ʼರಾಜ್ಯದಲ್ಲಿ ಪರಿಶಿಷ್ಟ ಜಾತಿ(ಎಸ್‍ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‍ಟಿ) ಅಭಿವೃದ್ಧಿ ದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಾರ್ವಜನಿಕ ವಲಯಗಳಲ್ಲಿ, ಕೆಎಂಎಫ್, ಡಿಸಿಸಿ ಬ್ಯಾಂಕ್‍ಗಳಲ್ಲಿ ಮೀಸಲಾತಿ ಕಲ್ಪಿಸಬೇಕು’ ಎಂದು ಕಾಂಗ್ರೆಸ್ ಸದಸ್ಯ ಪಿ.ಎಂ. ನರೇಂದ್ರ ಸ್ವಾಮಿ ಅಧ್ಯಕ್ಷತೆಯ ‘ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ’ ಮಹತ್ವದ ಶಿಫಾರಸು ಮಾಡಿದೆ.
‘ಹಿಂದುಳಿದ ವರ್ಗಗಳ ತಾಲೂಕುಗಳ ಅಭಿವೃದ್ಧಿಗೆ ಸಂಬಂಧಿಸಿದ ಡಾ.ನಂಜುಂಡಪ್ಪ ವರದಿಯು ಹಳೆ ವರದಿಯಾಗಿರುವುದರಿಂದ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿರುವ ಎಸ್‍ಸಿ-ಎಸ್‍ಟಿ ಸಮುದಾಯದ ಸ್ಥಿತಿಗತಿಗಳ ಆಧಾರದ ಮೇಲೆ ಕಾರ್ಯಕ್ರಮಗಳನ್ನು ಪರಿಷ್ಕರಣೆ ಮಾಡಬೇಕು’ ಎಂದು ಬುಧವಾರ ನರೇಂದ್ರ ಸ್ವಾಮಿ, ಅಧಿವೇಶನ ಕಲಾಪದಲ್ಲಿ ಸದನದಲ್ಲಿ ಸಮಿತಿಯ ಮೊದಲನೆ ಹಾಗೂ ಮಧ್ಯಂತರ ವರದಿ ಮಂಡಿಸಿದರು.
ರಾಜ್ಯದಲ್ಲಿ ಎಸ್‍ಸಿ-ಎಸ್‍ಟಿ ಸಮುದಾಯಗಳು ಸ್ಮಶಾನ ಜಾಗಕ್ಕಾಗಿ ಸ್ಥಳ ಇಲ್ಲ. ಹೀಗಾಗಿ ತಕ್ಷಣವೇ ಎಲ್ಲ ಕಡೆಗಳಲ್ಲಿ ಸ್ಮಶಾನಕ್ಕಾಗಿ ಸ್ಥಳವನ್ನು ನಿಗದಿಗೊಳಿಸಲು ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಬೇಕು. ಎಲ್ಲ್ಲ ಇಲಾಖೆಗಳಲ್ಲಿ ಬ್ಯಾಕ್‍ಲಾಗ್ ಹುದ್ದೆಗಳನ್ನು ಭರ್ತಿ ಮಾಡದೇ, ಹೊರಗುತ್ತಿಗೆಯಲ್ಲಿ ಪಡೆಯುತ್ತಿರುವುದರಿಂದ ಎಸ್‍ಸಿ/ಎಸ್‍ಟಿ ವರ್ಗದವರಿಗೆ ಅನ್ಯಾಯವಾಗುತ್ತಿದೆ. ಹೊರಗುತ್ತಿಗೆ ಏಜೆನ್ಸಿಯವರು ಸ್ಥಳೀಯ ಎಸ್‍ಸಿ/ಎಸ್‍ಟಿ ಅಭ್ಯಥಿಗಳಿಂದ ಭರ್ತಿ ಮಾಡಿಕೊಳ್ಳಲು ಪ್ರತ್ಯೇಕ ಕಾಯ್ದೆ ಮತ್ತು ನಿಯಮಗಳನ್ನು ರೂಪಿಸಿಕೊಳ್ಳಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
ಮಲೆನಾಡು ಮತ್ತು ಕರಾವಳಿ ಭಾಗದ ಜಿಲ್ಲೆಗಳನ್ನೊಳಗೊಂಡಂತೆ ರಾಜ್ಯದ ಎಲ್ಲ್ಲ ಜಿಲ್ಲೆಗಳಲ್ಲಿ ನೆಲೆಸಿರುವ ಬುಡಕಟ್ಟು ಜನಾಂಗಕ್ಕೆ ಅರಣ್ಯ ಹಕ್ಕು ಕಾಯ್ದೆ 2006ರ ಅನ್ವಯ ಸಿಗಬೇಕಾದ ಹಕ್ಕು ಪತ್ರಗಳು ಈವರೆಗೂ ಸಿಕ್ಕಿಲ್ಲದಿರುವುದರಿಂದ ತಕ್ಷಣ ಹಕ್ಕುಪ್ರತಿಗಳನ್ನು ನೀಡಲು ಕ್ರಮ ಕೈಗೊಳ್ಳಬೇಕು. ರಾಜ್ಯದ ಯಾವ ಯಾವ ಇಲಾಖೆಗಳು ಎಸಿಎಸ್‍ಪಿ/ಟಿಎಸ್‍ಪಿ ಅನುದಾನವನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಂಡಿರುವುದಿಲ್ಲವೋ, ಅಂತಹ ಅನುದಾನ ಹಿಂಪಡೆಯಬೇಕು ಎಂದು ಸಮಿತಿ ತಿಳಿಸಿದೆ.
ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಎಸ್‍ಸಿಎಸ್‍ಪಿ/ಟಿಎಸ್‍ಪಿ ಅನುದಾನವನ್ನು ಬಳಕೆ ಮಾಡುತ್ತಿರುವುದು ಕಾಯ್ದೆಗೆ ಪೂರಕವಲ್ಲ. ಇಲಾಖಾ ಭಡ್ತಿ ಸಮಿತಿಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ನಿಯಮಾವಳಿಗಳನ್ನು ತಪ್ಪದೇ ಪಾಲಿಸಬೇಕಾಗಿದ್ದು, ಸಾಮಾನ್ಯ ನೇರ ನೇಮಕಾತಿ, ಬ್ಯಾಕ್‍ಲಾಗ್ ನೇರ ನೇಮಕಾತಿಗಳಿಗೆ ಸಂಬಂಧಿಸಿದಂತೆ ಒಗ್ಗೂಡಿಸದೇ, ಪ್ರತ್ಯೇಕ ಅಧಿಸೂಚನೆಯನ್ನು ಹೊರಡಿಸಬೇಕು. ನ್ಯಾಯಾಲಯದ ಆದೇಶದಂತೆ 6 ತಿಂಗಳಿಗೊಮ್ಮೆ ಬ್ಯಾಕ್‍ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಶಿಫಾರಸು ಮಾಡಿದೆ.