ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಮಾನಹಾನಿ ಸುದ್ದಿ ಪ್ರಕಟಿಸದಂತೆ ನಿರ್ಬಂಧ
Photo:fb.com/basavarajbommai
ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಯಾವುದೇ ತೆರನಾದ ಮಾನಹಾನಿ ಹೇಳಿಕೆ, ಸುದ್ದಿ ಪ್ರಕಟ/ಪ್ರಸಾರ ಮಾಡದಂತೆ ವಕೀಲ ಕೆ.ಎನ್.ಜಗದೀಶ್ ಮತ್ತು ಮಾಧ್ಯಮ ಸಂಸ್ಥೆಗಳ ವಿರುದ್ಧ ಬೆಂಗಳೂರಿನ ಸತ್ರ ನ್ಯಾಯಾಲಯ ಮಧ್ಯಂತರ ನಿರ್ಬಂಧಕಾಜ್ಞೆ ವಿಧಿಸಿ ಆದೇಶಿದೆ.
ಈ ಕುರಿತು ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಸಲ್ಲಿಸಿರುವ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ 8ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾ.ವಾಣಿ ಶೆಟ್ಟಿ ಅವರು ಈ ಆದೇಶ ನೀಡಿದ್ದಾರೆ.
ಪ್ರತಿವಾದಿಗಳಿಗೆ ಸಂಬಂಧಿಸಿದ ಯಾವುದೇ ವ್ಯಕ್ತಿಗಳು ಮುಂದಿನ ವಿಚಾರಣೆಯವರೆಗೆ ಫಿರ್ಯಾದಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಮಾನಹಾನಿ ಉಂಟು ಮಾಡುವ ಸುದ್ದಿ ಪ್ರಸಾರ, ಪ್ರಕಟ ಮತ್ತು ಹಂಚಿಕೆ ಮಾಡಬಾರದು. 48ನೇ ಪ್ರತಿವಾದಿಯಾಗಿರುವ ʼಎಕ್ಸ್ʼ ಬೊಮ್ಮಾಯಿ ಅವರಿಗೆ ಸಂಬಂಧಿಸಿದ ಎರಡು ಟ್ವೀಟ್ಗಳನ್ನು 24 ಗಂಟೆಯ ಒಳಗೆ ತೆಗೆದು ಹಾಕಬೇಕು. ಫಿರ್ಯಾದಿ ಬೊಮ್ಮಾಯಿ ಅವರು ನಾಗರಿಕ ಪ್ರಕ್ರಿಯಾ ಸಂಹಿತೆ ನಿಯಮಗಳನ್ನು ಅನುಪಾಲಿಸಬೇಕು. ಏಕಪಕ್ಷೀಯ ಮಧ್ಯಂತರ ಪ್ರತಿಬಂಧಕಾದೇಶ ಮಾಡಲಾಗಿದ್ದು, ಮಧ್ಯಂತರ ಅರ್ಜಿಗೆ ಸಂಬಂಧಿಸಿದಂತೆ ಪ್ರತಿವಾದಿಗಳಿಗೆ ನೋಟಿಸ್ ಮತ್ತು ಸಮನ್ಸ್ ಜಾರಿ ಮಾಡಲಾಗಿದೆ ಎಂದು ಆದೇಶದಲ್ಲಿ ದಾಖಲಿಸಲಾಗಿದೆ. ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಲಾಗಿದೆ.