ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಪದ್ಮರಾಜ್ ನಿಧನ
ಬಿ.ಪದ್ಮರಾಜ್
ಬೆಂಗಳೂರು: ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಪದ್ಮರಾಜ (80) ಶುಕ್ರವಾರ (ನ.8) ಮುಂಜಾನೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
1944ರ ಅಕ್ಟೋಬರ್ 6ರಂದು ಚಿತ್ರದುರ್ಗದಲ್ಲಿ ಜನಿಸಿದ ಪದ್ಮರಾಜ ಅವರು ಪ್ರಾಥಮಿಕ ಹಂತದಿಂದ ಕಾಲೇಜು ವರೆಗಿನ ಶಿಕ್ಷಣವನ್ನು ಚಿತ್ರದುರ್ಗದಲ್ಲಿಯೇ ಪೂರೈಸಿದರು. ಚಿತ್ರದುರ್ಗದ ಸರಸ್ವತಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು.
1969ರ ಜುಲೈ 26ರಂದು ವಕೀಲರಾಗಿ ಸನ್ನದು ಸ್ವೀಕರಿಸಿದ ಅವರು, 1983ರವರೆಗೆ ವಕೀಲಿಕೆ ನಡೆಸಿದರು.1983ರಲ್ಲಿ ಜಿಲ್ಲಾ ನ್ಯಾಯಾಧೀಶರಾದ ಅವರು ಕಲಬುರಗಿ, ಬೆಂಗಳೂರು, ಕೋಲಾರ, ಧಾರವಾಡ, ಮಂಗಳೂರಿನಲ್ಲಿ ಜಿಲ್ಲಾ ಪ್ರಧಾನ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಿದರು. ನಂತರ 1994ರಿಂದ 2006ರವರೆಗೆ ಹೈಕೋರ್ಟ್ ನ್ಯಾಯಮೂರ್ತಿ ಆಗಿದ್ದರು.
ನಿವೃತ್ತಿಯ ನಂತರ 2007ರಿಂದ 2009ರವರೆಗೆ ರೈಲ್ವೆ ಕ್ಲೇಮು ನ್ಯಾಯಮಂಡಳಿ ಅಧ್ಯಕ್ಷರಾಗಿ ದೆಹಲಿಯಲ್ಲಿದ್ದ ಅವರು, ನಂತರ ಶಿಕ್ಷಣ ಇಲಾಖೆಯ ಶುಲ್ಕ ನಿಯಂತ್ರಣ ಸಮಿತಿ ಅಧ್ಯಕ್ಷರಾಗಿದ್ದರು.
ಮೃತರು ಪತ್ನಿ, ಒಬ್ಬ ಪುತ್ರ ಮತ್ತು ಪುತ್ರಿಯ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.