‘ತುಳು ಭಾಷೆ’ಗೆ ಅಧಿಕೃತ ಭಾಷೆಯ ಸ್ಥಾನಮಾನ ನೀಡಲು ಪರಿಶೀಲನೆ: ಸಚಿವ ಶಿವರಾಜ ತಂಗಡಗಿ
ಬೆಂಗಳೂರು, ಜು.18: ತುಳು ಭಾಷೆಗೆ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ಸಂಬಂಧ ಅಧ್ಯಯನ ನಡೆಸಲು ಪ್ರಸಕ್ತ ಸಾಲಿನ ಜನವರಿ 12ರಂದು ಮೋಹನ್ ಆಳ್ವ ನೇತೃತ್ವದ ಸಮಿತಿಯನ್ನು ರಚನೆ ಮಾಡಲಾಗಿತ್ತು. ಫೆ.14ರಂದು ಆ ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಶಿವರಾಜ ತಂಗಡಗಿ ತಿಳಿಸಿದರು.
ಮಂಗಳವಾರ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಅಶೋಕ್ ಕುಮಾರ್ ರೈ ಗಮನ ಸೆಳೆದ ಸೂಚನೆಗೆ ಉತ್ತರಿಸಿದ ಅವರು, ಮೋಹನ್ ಆಳ್ವ ವರದಿಯಲ್ಲಿ ವಿವಿಧ ಇಲಾಖೆಗಳ ಅಭಿಪ್ರಾಯ ಪಡೆಯುವಂತೆ ತಿಳಿಸಲಾಗಿದೆ. ನಾವು ಈಗಾಗಲೆ ಇಲಾಖೆಗಳ ಅಭಿಪ್ರಾಯವನ್ನು ಕೋರಿದ್ದೇವೆ ಎಂದರು.
ವರದಿಯಲ್ಲಿ ಸೂಚಿಸುವಂತೆ ಇಲಾಖೆಗಳ ಅಭಿಪ್ರಾಯ ಬಂದ ಬಳಿಕ ಪರಿಶೀಲಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು. ನಮ್ಮ ಸರಕಾರಕ್ಕೂ ತುಳು ಭಾಷೆಯ ಬಗ್ಗೆ ಕಾಳಜಿ ಇದೆ. ಇದೀಗ ಸದನದ ಅಧ್ಯಕ್ಷರಾಗಿ ತುಳು ಭಾಷೆ ಮಾತನಾಡುವ ತಾವು ಇರುವುದು ಮತ್ತೊಂದು ವಿಶೇಷ ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ವಿಷಯ ಪ್ರಸ್ತಾವಿಸಿದ ಅಶೋಕ್ ಕುಮಾರ್ ರೈ, ಸುಮಾರು ಒಂದು ಕೋಟಿ ಜನ ತುಳು ಭಾಷೆಯನ್ನು ಮಾತನಾಡುತ್ತಾರೆ. 1994ರಲ್ಲಿ ವೀರಪ್ಪ ಮೊಯ್ಲಿ ತುಳು ಅಕಾಡೆಮಿ ಆರಂಭಿಸಿದರು. 2007ರಲ್ಲಿ ಕೇರಳ ಸರಕಾರ ತುಳು ಅಕಾಡೆಮಿ ಆರಂಭಿಸಿತು. ಅಮೆರಿಕದ ವಿಶ್ವವಿದ್ಯಾಲಯದಲ್ಲಿ 133 ಜಾಗತಿಕ ಭಾಷೆಗಳ ಪೈಕಿ 17 ಭಾರತೀಯ ಭಾಷೆಗಳಿವೆ. ಅದರಲ್ಲಿ ತುಳು ಭಾಷೆ ಇದೆ ಎಂದರು.
ಆದುದರಿಂದ, ತುಳು ಭಾಷೆಗೆ ಎರಡನೆ ಅಧಿಕೃತ ಭಾಷೆಯ ಸ್ಥಾನಮಾನ ನೀಡಬೇಕು ಎಂದು ಅಶೋಕ್ ಕುಮಾರ್ ರೈ ಆಗ್ರಹಿಸಿದರು. ಅಲ್ಲದೆ, ಇದೇ ವೇಳೆ ಅವರು ತುಳು ಭಾಷೆಯಲ್ಲಿ ಮಾತನಾಡಲು ಆರಂಭಿಸಿದರು. ಅವರಿಗೆ ಬಿಜೆಪಿ ಸದಸ್ಯ ವೇದವ್ಯಾಸ ಕಾಮತ್ ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಸದಸ್ಯ ಬಸವರಾಜರಾಯರೆಡ್ಡಿ ಎದ್ದು ನಿಂತು, ತುಳು ಭಾಷೆ ಸಂವಿಧಾನದ ಶೆಡ್ಯೂಲ್‍ನಲ್ಲಿ ಇಲ್ಲ. ಸದಸ್ಯರು ಇಲ್ಲಿ ತುಳು ಭಾಷೆಯಲ್ಲಿ ಮಾತನಾಡಿದರೆ ದಾಖಲೆಗೂ ಹೋಗುವುದಿಲ್ಲ ಎಂದರು.
ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಯು.ಟಿ.ಖಾದರ್, ‘ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ’ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.