‘ತೈಲ ಬೆಲೆ ಏರಿಕೆʼ ಹಿಂಪಡೆಯಲು ಆಗ್ರಹಿಸಿ ನಾಳೆ(ಜೂ.20) ಬಿಜೆಪಿಯಿಂದ ರಸ್ತೆ ತಡೆ
ScreenGrab : x/@BJP4Karnataka
ಬೆಂಗಳೂರು: ಡೀಸೆಲ್-ಪೆಟ್ರೋಲ್ ದರ ಏರಿಕೆ ವಿರೋಧಿಸಿ ಮತ್ತು ಈ ದರ ಏರಿಕೆಯನ್ನು ವಾಪಸ್ ಪಡೆಯಲು ಆಗ್ರಹಿಸಿ ನಾಳೆ(ಜೂ.20) ಎರಡನೆ ಹಂತದ ಹೋರಾಟ ನಡೆಸಲಾಗುವುದು ಎಂದು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ತಿಳಿಸಿದರು.
ಬುಧವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ನಮ್ಮ ಕಾರ್ಯಕರ್ತರು ಸೇರಿ ರಸ್ತೆ ತಡೆ ಆಂದೋಲನ ನಡೆಸಲಿದ್ದೇವೆ ಎಂದು ವಿವರಿಸಿದರು.
ವಿಪರೀತ ತೆರಿಗೆ ಶುಲ್ಕ ಹೆಚ್ಚಳದ ಅಭಿಯಾನವನ್ನೇ ರಾಜ್ಯ ಸರಕಾರ ನಡೆಸುತ್ತಿದೆ. ಹಲವಾರು ಕ್ಷೇತ್ರಗಳ ತೆರಿಗೆಯನ್ನು ಈ ಸರಕಾರ ಹೆಚ್ಚಿಸಿದೆ. ಜನರ ಜೀವನವನ್ನೆ ಕಷ್ಟದಾಯಕವನ್ನಾಗಿ ಮಾಡಿದೆ. ಆಸ್ತಿ ತೆರಿಗೆಯನ್ನು ಶೇ.20ರಿಂದ ಶೇ.120ರವರೆಗೆ, ಮೋಟಾರು ವಾಹನ ತೆರಿಗೆಯನ್ನು ಶೇ.40ರಿಂದ ಶೇ.80ರಷ್ಟು, ಅಬಕಾರಿ ತೆರಿಗೆ(ಮದ್ಯ) ಶೇ.20ರಿಂದ ಶೇ. 400ವರೆಗೆ ಹೆಚ್ಚಳ ಮಾಡಿದ್ದಾರೆ ಎಂದು ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುತ್ ದರವನ್ನೂ ಹೆಚ್ಚಿಸಿದ್ದಾರೆ. ಇದರಿಂದ ಕೈಗಾರಿಕಾ ಉತ್ಪನ್ನಗಳ ದರ ಏರಿದೆ. ರೈತರಿಗೆ ಕೊಡುತ್ತಿದ್ದ ಹಾಲಿನ ಪ್ರೋತ್ಸಾಹಧನವನ್ನು ಕಡಿಮೆ ಮಾಡಿದ್ದಾರೆ. ಪ್ರತಿ ಲೀಟರ್ ಹಾಲಿನ ದರ ಏರಿಸಿದ್ದಾರೆ. ಇದರಿಂದ ಹಾಲು, ಮೊಸರು, ತುಪ್ಪ ಮತ್ತಿತರ ಉತ್ಪನ್ನಗಳ ದರ ಏರಿದೆ ಎಂದು ಅವರು ತಿಳಿಸಿದರು.
ಸರಕಾರವು ಕೂಡಲೇ ಡೀಸೆಲ್- ಪೆಟ್ರೋಲ್ ದರ ಏರಿಕೆಯನ್ನು ಇಳಿಸಬೇಕು ಎಂದು ರವಿಕುಮಾರ್ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಬಿಜೆಪಿ ಎಸ್.ಟಿ.ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು, ಬೆಂಗಳೂರು ಜಿಲ್ಲಾಧ್ಯಕ್ಷರಾದ ಹರೀಶ್, ಸಪ್ತಗಿರಿ ಗೌಡ ಉಪಸ್ಥಿತರಿದ್ದರು.
ಸೈಕಲ್ ಜಾಥಾ: ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಜೂ.20ರಂದು ಬೆಳಗ್ಗೆ 9 ಗಂಟೆಗೆ ಬಿಜೆಪಿ ಕಚೇರಿಯಿಂದ ವಿಧಾನಸೌಧದವರೆಗೆ ಸೈಕಲ್ ಜಾಥಾ ಹಮ್ಮಿಕೊಂಡಿದ್ದು, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಪರಿಷತ್ ಸದಸ್ಯ ಸಿ.ಟಿ.ರವಿ ನೇತೃತ್ವ ವಹಿಸಲಿದ್ದಾರೆ. ಜಾಥಾ ಬಳಿಕ ಮಹಾತ್ಮ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಗುವುದು. ಸುಮಾರು 250-300 ಸೈಕಲ್ಗಳ ಜಾಥಾ ಇದಾಗಿರಲಿದೆ.
-ಎಸ್.ಹರೀಶ್, ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಅಧ್ಯಕ್ಷ