ಕಾರಿನಲ್ಲಿ ಲಿಫ್ಟ್ ಕೊಡುವ ನೆಪದಲ್ಲಿ ದರೋಡೆ: ಮೂವರು ಆರೋಪಿಗಳನ್ನು ಬಂಧಿಸಿದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು
ಬೆಂಗಳೂರು, ಸೆ.9: ಲಿಫ್ಟ್ ಕೊಡುವ ನೆಪದಲ್ಲಿ ದರೋಡೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಇಲ್ಲಿನ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.
ನಂಜುಂಡ, ಗಿರೀಶ್ ಹಾಗೂ ನವೀನ್ ಬಂಧಿತ ಆರೋಪಿಗಳು. ಗೊರಗುಂಟೆಪಾಳ್ಯ-ನಾಯಂಡಹಳ್ಳಿಯ ಹೊರವರ್ತುಲ ರಸ್ತೆಯಲ್ಲಿ ಕೃತ್ಯ ಎಸಗುತ್ತಿದ್ದ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ.
ಚಾಲಕ ವೃತ್ತಿ ಮಾಡಿಕೊಂಡಿದ್ದ ಆರೋಪಿಗಳು ರಾತ್ರಿ ವೇಳೆ ಬಸ್ಸಿಗಾಗಿ ಕಾಯುವವರನ್ನು ಗುರಿಯಾಗಿಸಿಕೊಂಡು ‘ಲಿಫ್ಟ್ ಕೊಡುವುದಾಗಿ' ಕಾರು ಹತ್ತಿಸಿಕೊಳ್ಳುತ್ತಿದ್ದರು. ಸ್ವಲ್ಪ ದೂರ ಹೋಗುತ್ತಿದ್ದಂತೆ ಹಿಂಬದಿ ಸೀಟಿನಲ್ಲಿದ್ದ ಇನ್ನಿಬ್ಬರು ಆರೋಪಿಗಳು ಕತ್ತಿನ ಬಳಿ ಡ್ರಾಗರ್ ಇಟ್ಟು ಬೆದರಿಸುತ್ತಿದ್ದರು. ಬೆದರಿಸುವಾಗ ಪ್ರಯಾಣಿಕರು ಕಿರುಚಿದರೆ ಯಾರಿಗೂ ತಿಳಿಯಬಾರದು ಎಂದು ಮ್ಯೂಸಿಕ್ ಸಿಸ್ಟಂ ಸೌಂಡ್ ಹೆಚ್ಚಿಸುತ್ತಿದ್ದರು.
ನಂತರ ಪ್ರಯಾಣಿಕನ ಜೇಬಿನಲ್ಲಿರುವ ಹಣ ಮಾತ್ರವಲ್ಲದೇ ಗೂಗಲ್ ಪೇ, ಫೋನ್ ಪೇ ಮೂಲಕವೂ ಹಣ ವರ್ಗಾವಣೆ ಮಾಡಿಕೊಂಡು ಮೊಬೈಲ್ ಫೋನ್ ಕಸಿದುಕೊಂಡು ಕಾರಿನಿಂದ ಇಳಿಸಿ ಪರಾರಿಯಾಗುತ್ತಿದ್ದರು.
ಯೆಲ್ಲೋ ಬೋರ್ಡ್ ಕಾರನ್ನು ಬಳಸಿಕೊಂಡು ಗೊರಗುಂಟೆಪಾಳ್ಯ ಸಿಗ್ನಲ್, ಸುಮ್ಮನಹಳ್ಳಿ ಮತ್ತು ಅನ್ನಪೂರ್ಣೇಶ್ವರಿ ನಗರದಲ್ಲಿ ಮೂರು ಕೃತ್ಯ ಎಸಗಿದ್ದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣದ ಆಧಾರದ ಮೇಲೆ ವಿಶೇಷ ಕಾರ್ಯಾಚರಣೆ ಕೈಗೊಂಡು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಕಾರು, ಮೊಬೈಲ್ ಫೋನ್, ಡ್ಯಾಗರ್, ದರೋಡೆಗೈದಿದ್ದ ಸ್ವಲ್ಪ ಹಣ ವಶಕ್ಕೆ ಪಡೆಯಲಾಗಿದೆ. ಓರ್ವ ಆರೋಪಿ ಇತ್ತೀಚಿಗೆ ಟ್ರಾವೆಲ್ಸ್ ಕಂಪೆನಿಯೊಂದರಲ್ಲಿ ಚಾಲಕನಾಗಿ ಕೆಲಸಕ್ಕೆ ಸೇರಿದ್ದು ಅದೇ ಕಾರಿನಲ್ಲೇ ಕೃತ್ಯ ಎಸಗುತ್ತಿದ್ದದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.