ಆರ್ಡಿಪಿಆರ್ʼಗೆ 269 ಕೋಟಿ ರೂ.ನಷ್ಟ: ನಿವೃತ್ತ ಐಎಎಸ್ ಅಧಿಕಾರಿಗಳ ವಿರುದ್ಧದ ಪ್ರಕರಣ ರದ್ದು
ಬೆಂಗಳೂರು, ಸೆ.13: ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯಡಿ ಮಂಜೂರಾದ ಹಣವನ್ನು ನಕಲಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿ ರಾಜ್ಯದ ಬೊಕ್ಕಸಕ್ಕೆ 269 ಕೋಟಿ ನಷ್ಟ ಉಂಟು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಸೇರಿದಂತೆ ಮೂವರು ಐಎಎಸ್ ಅಧಿಕಾರಿಗಳ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಈ ಹಿಂದೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ(ಆರ್‍ಡಿಪಿಆರ್) ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿರುವ ಅಮಿತಾ ಪ್ರಸಾದ್(ನಿವೃತ್ತ ಐಎಎಸ್), ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಹಾಗೂ ಆರ್‍ಡಿಪಿಆರ್ ಅಂದಿನ ಪ್ರಧಾನ ಕಾರ್ಯದರ್ಶಿಯಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಎನ್.ವಿ.ರಮಣರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ಪುರಸ್ಕರಿಸಿದೆ.
ಅರ್ಜಿದಾರರಾದ ಅಮಿತಾ ಪ್ರಸಾದ್, ರಮಣ ರೆಡ್ಡಿ, ವಿಜಯ್ ಭಾಸ್ಕರ್ ಅವರ ವಿರುದ್ಧ 23ನೆ ಹೆಚ್ಚುವರಿ ಸಿಟಿ ಸಿವಿಲ್ ಹಾಗೂ ಸೆಷನ್ಸ್ ನ್ಯಾಯಾಲಯದಲ್ಲಿ(ಭ್ರಷ್ಟಾಚಾರ ತಡೆ ಕಾಯಿದೆ ವಿಶೇಷ ನ್ಯಾಯಾಲಯ) ನಡೆಯುತ್ತಿರುವ ವಿಚಾರಣೆಯ ಸಂಪೂರ್ಣ ಪ್ರಕ್ರಿಯೆ ರದ್ದುಗೊಳಿಸಲಾಗಿದೆ. ಆದರೆ, ಈ ಆದೇಶವು ಅರ್ಜಿದಾರರನ್ನು ಹೊರತುಪಡಿಸಿ ಪ್ರಕರಣದ ಇತರ ಆರೋಪಿಗಳ ವಿಚಾರಣೆಗೆ ಅನ್ವಯವಾಗುವುದಿಲ್ಲ ಎಂದು ಪೀಠ ಆದೇಶದಲ್ಲಿ ಹೇಳಿದೆ.
ಮೂವರು ಅಧಿಕಾರಿಗಳ ವಿರುದ್ಧ ತನಿಖೆಗೆ ಸಕ್ಷಮ ಪ್ರಾಧಿಕಾರದಿಂದ ಅಗತ್ಯ ಪೂರ್ವಾನುಮತಿ ಪಡೆದುಕೊಂಡಿಲ್ಲ. ವಿಜಯ್ ಭಾಸ್ಕರ್ ಅವರು ಹುದ್ದೆಯಿಂದ ನಿರ್ಗಮಿಸಿದ ಬಳಿಕ ಗ್ರಾಮೀಣ ನೀರು ಸರಬರಾಜು ಯೋಜನೆಯ ಆಯುಕ್ತರು ವರದಿ ಸಲ್ಲಿಸಿದ್ದು, ಅದರಲ್ಲಿ ‘ಹಣ ದುರ್ಬಳಕೆ’ ಆಗಿದೆ ಎಂದಷ್ಟೇ ಹೇಳಿದ್ದಾರೆ.
ಆದರೆ, ಯಾವ ಅಧಿಕಾರಿಯ ಹೆಸರನ್ನೂ ಹೇಳಿಲ್ಲ. ಈ ವರದಿಯ ಆಧಾರದಲ್ಲಿ ಲೆಕ್ಕಪರಿಶೋಧನೆ ನಡೆಸಲಾಗಿದ್ದು, 2015ರ ಅ.1ರಂದು ಸಲ್ಲಿಸಲಾದ ಆ ಲೆಕ್ಕಪರಿಶೋಧನಾ ವರದಿಯಲ್ಲಿ ಹಣ ದುರ್ಬಳಕೆಗೆ ಪಿ.ಬೋರೇಗೌಡ ಹಾಗೂ ರಾಮಕೃಷ್ಣ ಎಂಬುವರು ಹೊಣೆ ಎಂದು ಹೇಳಲಾಗಿತ್ತು.
ಆ ವರದಿಯ ಆಧಾರದಲ್ಲಿ ದೂರು ದಾಖಲಿಸಲಾಗಿದ್ದು, ಆ ದೂರಿನಲ್ಲಿ ಮೂವರು ಅರ್ಜಿದಾರ ಅಧಿಕಾರಿಗಳ ವಿರುದ್ಧ ಆರೋಪ ಮಾಡಿಲ್ಲ. ಹೀಗಾಗಿ, ಅರ್ಜಿದಾರರ ವಿರುದ್ಧ ದೂರು ಇಲ್ಲ, ಆರೋಪವೂ ಇಲ್ಲ. 2019ರ ಜ.9ರಂದು ಪೊಲೀಸರು ಬಿ ರಿಪೋರ್ಟ್ ಸಹ ಹಾಕಿದ್ದಾರೆ. ಪೊಲೀಸರು ಹಾಕಿದ್ದ ಆರೋಪಪಟ್ಟಿಯಲ್ಲೂ ಮೂವರು ಅರ್ಜಿದಾರರ ಹೆಸರು ಇಲ್ಲ ಎಂದು ಪೀಠ ಆದೇಶದಲ್ಲಿ ಪ್ರಸ್ತಾಪಿಸಿದೆ.