ಆರೆಸ್ಸೆಸ್ ಎಂದರೆ ‘ರೂಮರ್ಸ್ ಸ್ಪ್ರೆಡ್ಡಿಂಗ್ ಸಂಘ’: ಬಿ.ಕೆ. ಹರಿಪ್ರಸಾದ್
"ಅಮಾಯಕರನ್ನು ಧರ್ಮದ ಹೆಸರಲ್ಲಿ ದಾರಿ ತಪ್ಪಿಸುತ್ತಾರೆ"
ಬೆಂಗಳೂರು: ‘ರಾಷ್ಟ್ರೀಯ ಸ್ವಯಂ ಸೇವಕರ ಸಂಘ’ (ಆರೆಸ್ಸೆಸ್) ಎಂದರೆ ‘ರೂಮರ್ಸ್ ಸ್ಪ್ರೆಡ್ಡಿಂಗ್ ಸಂಘ’ ಆಗಿದ್ದು, ಅವರು ಕಳ್ಳನನ್ನು ಸುಳ್ಳ ಮಾಡುತ್ತಾರೆ, ಸುಳ್ಳನನ್ನು ಸತ್ಯವಂತ ಮಾಡುತ್ತಾರೆ. ಬಡವರು, ಅಮಾಯಕರನ್ನು ಧರ್ಮದ ಹೆಸರಲ್ಲಿ ದಾರಿ ತಪ್ಪಿಸುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಟೀಕಿಸಿದ್ದಾರೆ.
ಗುರುವಾರ ಇಲ್ಲಿನ ಗಾಂಧಿ ಭವನದಲ್ಲಿ ಅಹರ್ನಿಶಿ ಪ್ರಕಾಶನ ವತಿಯಿಂದ ಎಂ.ಜಿ. ಹೆಗಡೆ ಮಂಗಳೂರು ಅವರ ‘ಆತ್ಮಕತೆ ಚಿಮಣಿ ಬೆಳಕಿನಿಂದ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶಭಕ್ತರು ಎಂದು ಬಿಂಬಿಸಿಕೊಳ್ಳುವ ಆರೆಸ್ಸೆಸ್‍ನವರು ತ್ರಿವರ್ಣ ಧ್ವಜಕ್ಕೆ ಗೌರವ ಕೊಡುವುದಿಲ್ಲ. 52 ವರ್ಷದಿಂದ ಇರುವ ಆರೆಸ್ಸೆಸ್ ಕಚೇರಿ ಮೇಲೆ ಇದುವರೆಗೂ ತ್ರಿವರ್ಣ ಧ್ವಜ ಹಾರಿಸಿಲ್ಲ ಎಂದರು.
ಆರೆಸ್ಸೆಸ್‍ನವರು ಬಡವರೇ ಆಗಿದ್ದು, ಅಲ್ಲಿ ಅಧಿಕಾರ, ಸಂಪತ್ತು ಪಡೆಯುವವರು ಬೇರೆ, ಜೈಲಿಗೆ ಹೋಗುವವರು ಬೇರೆಯೇ ಇದ್ದಾರೆ. ಇನ್ನು ಸಂಘ ಪರಿವಾರದ ಸಹವಾಸದಿಂದ ಹೋರಾಟ ಮಾಡಿದವರು ಒಂದೋ ಜೈಲಿಗೆ ಹೋಗಬೇಕು, ಇಲ್ಲ ಸ್ಮಶಾನ ಸೇರಬೇಕು. ಬೊಮ್ಮಾಯಿ ಮಗ, ಯಡಿಯೂರಪ್ಪ ಮಗ ಏನಾದರೂ ಬೀದಿಯಲ್ಲಿ ಹೋರಾಟ ಮಾಡುತ್ತಾರೆ? ಹೋರಾಟ ಮಾಡುವುದೆಲ್ಲ ಪುನೀತ್ ಕೆರೆಹಳ್ಳಿ ಥರದವರು ಎಂದು ಅವರು ತಿಳಿಸಿದರು.
ಆರೆಸ್ಸೆಸ್‍ನವರು ಹಿಂದೂ ರಾಷ್ಟ್ರ ಕಟ್ಟುವ ಬಗ್ಗೆ ಮಾತುಗಳನ್ನಾಡುತ್ತಾರೆ. ಈಗ ದೇಶದ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ನಾನು ಎಬಿವಿಪಿ, ಆರೆಸ್ಸೆಸ್ ವಿರುದ್ಧ ವಿದ್ಯಾರ್ಥಿ ದೆಸೆಯಿಂದಲೇ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಕಾಂಗ್ರೆಸ್‍ನಲ್ಲಿ ದೇವರಾಜ ಅರಸು, ಗುಂಡೂರಾವ್ ಹಾಗೂ ಮತ್ತೊಂದು ಎಂಬಂತೆ ಒಟ್ಟು ಮೂರು ಗುಂಪುಗಳಿದ್ದವು. ಆದರೆ ಯಾರೂ ಕೂಡ ನಿಯಮ, ಸಿದ್ಧಾಂತ ಬಿಟ್ಟು ಹೋಗಲಿಲ್ಲ ಎಂದರು.
ಪ್ರಸ್ತುತ ದಿನಗಳಲ್ಲಿ ಸುಳ್ಳು ಹೇಳಿಕೊಂಡು ತಿರುಗಾಡಲಾಗುತ್ತಿದೆ. ಎಬಿವಿಪಿ ಈಗಿನಷ್ಟು ಮೊದಲು ಕಟ್ಟಿರಲಿಲ್ಲ. ಇತ್ತೀಚಿನ ಸಂದರ್ಭಗಳಲ್ಲಿ ಹಿಂದೂ, ಮುಸ್ಲಿಂ ನಡುವೆ ಬೇಧಭಾವ ಸೃಷ್ಟಿಸಲಾಗಿದೆ. ಸಂಘ ಪರಿವಾರದ ಗೋಲ್ವಾಲ್ಕರ್ ಪಂಚ್ ಆಫ್ ಥಾಟ್ಸ್ ಬರೆದಿದ್ದು, ಚಿಂತನಾ ಗಂಗಾ ಎಂಬ ಅದರ ಭಾಷಾಂತರ ಪುಸ್ತಕದ 175ನೆ ಪುಟದಲ್ಲಿ ಹಿಂದೂ ಮತ್ತು ಅಲ್ಪಸಂಖ್ಯಾತರ ನಡುವಿನ ದ್ವೇಷದ ಬಗ್ಗೆ ಹಾಗೂ ಜಾತಿ ವ್ಯವಸ್ಥೆಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಸ್ವಾತಂತ್ರ ಸಂಗ್ರಾಮದಲ್ಲಿ ಮುಸ್ಲಿಮರೂ ಹೆಚ್ಚು ತ್ಯಾಗ ಮಾಡಿದ್ದಾರೆ. ಅದನ್ನು ಮರಮಾಚಲಾಗುತ್ತಿದೆ ಎಂದು ತಿಳಿಸಿದರು.
ನಾವು ಮೃದು ಹಿಂದುತ್ವವಾದಿಗಳಲ್ಲ, ಹಿಂದೂಗಳೇ ಆದರೂ, ರಾಜಕೀಯಕ್ಕಾಗಿ ಹಿಂದುತ್ವವನ್ನು ಬಳಸುವುದಿಲ್ಲ. ಕೇಂದ್ರದಲ್ಲಿ 10 ವರ್ಷದಿಂದ ಆಡಳಿತ ನಡೆಸುತ್ತಿರುವವರು ವ್ಯವಸ್ಥೆಯನ್ನು ಹದಗೆಡಿಸಿದ್ದಾರೆ. ಸುಭಾಶ್ಚಂದ್ರ ಬೋಸ್ ಅವರ ಸಾವಿಗೆ ಕಾರಣ ಯಾರು? ಲಾಲ್ ಬಹದ್ದೂರು ಶಾಸ್ತ್ರಿ ಸಾವಿಗೆ ಕಾರಣ ಯಾರು? ದೀನ ದಯಾಳ್ ಉಪಾಧ್ಯರನ್ನು ಕೊಂದವರು ಯಾರು? ಹೀಗೆ ಪ್ರಶ್ನೆಗಳನ್ನು ಹರಡಿ, ಜನರ ತಲೆ ಕೆಡಿಸಿ ಆಮೇಲೆ ಕಾಂಗ್ರೆಸ್ ಕಡೆ ಕೈ ತೋರಿಸುವುದನ್ನು ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದಾರೆ ಎಂದು ಅವರು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮಾತನಾಡಿ, ಹಲವು ವಿಚಾರಗಳನ್ನು ಬಚ್ಚಿಟ್ಟು, ತಮ್ಮನ್ನು ವೈಭವೀಕರಿಸಲು ಬರೆಯುವ ಆತ್ಮಕಥೆಗಳು ಪ್ರಯೋಜನವಿಲ್ಲ. ನಮ್ಮ ನೆನಪಿನಲ್ಲಿ ಉಳಿಯುವ ವಿಚಾರಗಳನ್ನು ಯಾಕೆ ಉಳಿಯಿತು ಎಂಬ ನೋಟದೊಂದಿಗೆ ಕಟ್ಟಿಕೊಡಬೇಕು. ಅಂಥ ಆತ್ಮಚರಿತ್ರೆಗಳಲ್ಲಿ ಚಿಮಿಣಿ ಬೆಳಕು ಒಂದು. ಆರೆಸ್ಸೆಸ್ ನಾಯಕರಿಂದ ಕಾಲಾಳುವರೆಗೆ ಎಲ್ಲರೂ ಈ ಪುಸ್ತಕವನ್ನು ಓದಬೇಕು’ ಎಂದರು.
ಲೇಖಕ ಎಂ.ಜಿ.ಹೆಗಡೆ ಮಾತನಾಡಿ, ನಾನೊಬ್ಬ ಬ್ರಾಹ್ಮಣ. ಹಿಂದೂ ಆಗಿಯೇ ಇರುತ್ತೇನೆ. ಆದರೆ ಬಿಳಿಮಲೆ ಹಾಗೂ ಉಮರ್ ಅವರ ಜೊತೆಯಲ್ಲೂ ಇರುತ್ತೇನೆ. ನಮಗೆ ದರ್ಗಾವೂ ಒಂದೇ, ದೇವಸ್ಥಾನವೂ ಒಂದೇ. ಧರ್ಮ ಮತ್ತು ದಾರಿ ಎರಡರ ಬಗ್ಗೆಯೂ ಸ್ಪಷ್ಟತೆ ಇದೆ ಎಂದು ಹೇಳಿದರು. ಸನಾತನ ಧರ್ಮ ಎಂದರೆ ವಿವೇಕಾನಂದರು ಕಾಣಬೇಕು. ಆದರೆ ಜ್ಯೋತಿಷಿಗಳ ರಾಯಭಾಗವೇ ಹೆಚ್ಚಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೆ ಪಿ ಕೃಷ್ಣ ಸೇರಿದಂತೆ ಮತ್ತಿತರರು ಇದ್ದರು.