ಶಿವಮೊಗ್ಗ: ಆರ್ ಟಿಐ ಅಡಿ ಮಾಹಿತಿ ನೀಡದ ಪಿಡಿಒಗೆ 15,000 ರೂ. ದಂಡ
ಶಿವಮೊಗ್ಗ, ಜೂ. 28 : ಮಾಹಿತಿ ಹಕ್ಕು ಕಾಯಿದೆಯ ಪ್ರಕಾರ ಮಾಹಿತಿ ಕೇಳಿ ಅರ್ಜಿ ಸಲ್ಲಿಸಿದ ಅರ್ಜಿದಾರನಿಗೆ ಸೂಕ್ತ ಮಾಹಿತಿ ನೀಡದಿರುವುದು ಮತ್ತು ತಪ್ಪು ಹಿಂಬರಹ ನೀಡಿರುವ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ಹಾರೋಗೂಳಿಗೆ ಗ್ರಾಮ ಪಂಚಾಯತ್ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿ ವಿನಾಯಕ ಅವರಿಗೆ ಕರ್ನಾಟಕ ಮಾಹಿತಿ ಆಯೋಗ 15,000 ರೂ. ದಂಡ ವಿಧಿಸಿದೆ.
ಶಿವಮೊಗ್ಗದ ತೀರ್ಥಹಳ್ಳಿ ತಾಲೂಕು, ಹಾರೋಗೊಳಿಗೆ ಗ್ರಾಮ ಪಂಚಾಯತಿಯ 2021-22 ರಲ್ಲಿ ನಡೆದ ಸಾಮಾಜಿಕ ಲೆಕ್ಕ ಪರಿಶೋಧನೆ ವರದಿಗಳು ಮತ್ತು ವರ್ಗ-1ರ ಸ್ಥಳೀಯ ಆಡಿಟ್ ವರದಿಯ ದೃಡೀಕೃತ ದಾಖಲೆಗಳನ್ನು ಕೇಳಿ ಬೆಂಗಳೂರಿನ ಎಚ್ ಎಂ ವೆಂಕಟೇಶ್ ಅವರು ಸಲ್ಲಿಸಿರುವ ಅರ್ಜಿಗೆ ಸಾರ್ವಜನಿಕ ಮಾಹಿತಿ ಅಧಿಕಾರಿಯು ಮಾಹಿತಿಯನ್ನು ನೀಡಿಲ್ಲದಿರುವುದರಿಂದ ಮಾಹಿತಿ ಹಕ್ಕು ಕಾಯ್ದೆ ಕಲಂ 19(1) ರನ್ವಯ ದಿನಾಂಕ ಸೆಪ್ಟೆಂಬರ್ 13ರಂದು ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
ನಂತರ ಮೇಲ್ಮನವಿದಾರರಿಗೆ ಪ್ರಥಮ ಮೇಲ್ಮನವಿ ಪ್ರಾಧಿಕಾರವು ಕೂಡ ಮಾಹಿತಿಯನ್ನು ಕೊಡಿಸುವುದರಲ್ಲಿ ವಿಫಲರಾಗಿರುವುದರಿಂದ ಮಾಹಿತಿ ಹಕ್ಕು ಕಾಯ್ದೆ ಕಲಂ 19(3) ರನ್ವಯ ದಿನಾಂಕ 14.12.2022 ರಂದು ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
ಪ್ರಕರಣವನ್ನು ಅವಲೋಕಿಸಿದ ಆಯೋಗವು ದಿನಾಂಕ 04 ಮೇ 2023 ರಂದು ಪ್ರಕರಣದ ವಿಚಾರಣೆ ನಡೆದ ಸಂದರ್ಭದಲ್ಲಿ ಮೇಲ್ಮನವಿದಾರರಿಗೆ ಕೋರಿರುವ ಮಾಹಿತಿಯನ್ನು ಒದಗಿಸಿ, ವರದಿಯನ್ನು ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 18(3)(ಎ)&(ಡಿ)ರನ್ವಯ ಆಯೋಗದ ವಿಚಾರಣೆಗೆ ಖುದ್ದು ಹಾಜರಿದ್ದು ಸಲ್ಲಿಸುವಂತೆ ಮತ್ತು ಆಯೋಗದ ಆದೇಶವನ್ನು ಪಾಲನೆ ಮಾಡದೇ ಇರುವುದರಿಂದ ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 20(1)ರ ಅಡಿಯಲ್ಲಿ ಕ್ರಮವನ್ನು ಜರುಗಿಸಲಾಗುವುದೆಂದು ಪ್ರತಿವಾದಿಯಾದ ವಿನಾಯಕ, ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಪಂಚಾಯಿತಿ ಅಧಿಕಾರಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ದಿನಾಂಕ: 04 ಮೇ 2023 ರ ಆದೇಶದಲ್ಲಿ ಸ್ಪಷ್ಟವಾಗಿ ಎಚ್ಚರಿಕೆ ನೀಡಿತ್ತು.
ಆದರೂ ಪಿಡಿಒ ವಿನಾಯಕ ಜೂನ್ 3ರಂದು ಆಯೋಗಕ್ಕೆ ಸಲ್ಲಿಸಿರುವ ಲಿಖಿತ ಹೇಳಿಕೆಯಲ್ಲಿ ಮೇಲ್ಮನವಿದಾರರಿಗೆ ದಿನಾಂಕ ಮೇ 3 ರಂದು ಸಂಪೂರ್ಣ ಮಾಹಿತಿಯನ್ನು ಒದಗಿಸಲಾಗಿದೆಯೆಂದು ತಿಳಿಸಿದ್ದು, ಒದಗಿಸಿರುವ ಹಿಂಬರಹದಲ್ಲಿ ಆಡಿಟ್ ನಡೆದಿರುವುದಿಲ್ಲವೆಂದು ವ್ಯತಿರಿಕ್ತವಾಗಿ ತಿಳಿಸಿರುವುದನ್ನು ಮತ್ತು ದಂಡದ ಕ್ರಮವನ್ನು ಜರುಗಿಸದೆ ಇರುವ ವಿಚಾರದಲ್ಲಿ ಯಾವುದೇ ಅಲಿಖಿತ ಸಮಜಾಯಿಷಿಯನ್ನು ಆಯೋಗಕ್ಕೆ ಸಲ್ಲಿಸದೆ ಇರುವುದನ್ನು ಹಾಗೂ ವಿಚಾರಣೆಗೆ ಗೈರುಹಾಜರಾಗಿರುವುದನ್ನು ಪರಿಶೀಲಿಸಿದ ಆಯೋಗ ಹಾರೋಗೂಳಿಗೆ ಗ್ರಾಮ ಪಂಚಾಯತಿ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿನಾಯಕ ಅವರಿಗೆ ದಂಡ ವಿಧಿಸಿದೆ.