ವಿಧಾನಸಭೆಯಲ್ಲಿ ʼಗ್ಯಾರೆಂಟಿʼ ಗದ್ದಲ; ಯೋಜನೆಗಳ ಅನುಷ್ಠಾನಕ್ಕೆ ‘ಕೈ’ ಕಾರ್ಯಕರ್ತರ ನೇಮಕಕ್ಕೆ ವಿಪಕ್ಷಗಳ ಆಕ್ಷೇಪ

ಬೆಂಗಳೂರು: ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳಿಗೆ ಕಾಂಗ್ರೆಸ್ ಕಾರ್ಯಕರ್ತರನ್ನು ನೇಮಕ ಮಾಡಿರುವುದನ್ನು ಆಕ್ಷೇಪಿಸಿ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿ, ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ ನಡೆಸಿದ್ದರಿಂದ ವಿಧಾನಸಭೆಯ ತೀವ್ರ ಗದ್ದಲ ಸೃಷ್ಟಿಸಿತು.
ಮಂಗಳವಾರ ವಿದಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ನೀಡಿದ ಉತ್ತರದಿಂದ ತೀವ್ರ ಅಸಮಾಧಾನಗೊಂಡ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇದರಿಂದ ಸದನದಲ್ಲಿ ವಾಕ್ಸಮರ ಉಂಟಾಗಿ ಸದನ ಗದ್ದಲದ ಗೂಡಾಯಿತು.
ಸರಕಾರದ ಪರವಾಗಿ ನೀಡಿದ ಸಮಜಾಯಿಷಿಯಿಂದ ತೃಪ್ತಿಗೊಳ್ಳದ ಬಿಜೆಪಿ-ಜೆಡಿಎಸ್ ಸದಸ್ಯರು ಧರಣಿ ನಡೆಸಲು ಮುಂದಾದರು. ಈ ವೇಳೆಗೆ ಸ್ಪೀಕರ್ ಯು.ಟಿ.ಖಾದರ್ ಸದನದ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿದರು.
ಆರಂಭಕ್ಕೆ ಉತ್ತರ ನೀಡಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಹಾಗೂ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಯೋಜನೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಗೆ ಗೌರವ ಧನ ಮತ್ತು ಸಭಾಭತ್ಯೆ ನಿಗದಿಪಡಿಸಿ ಆದೇಶಿಸಲಾಗಿದೆ ಎಂದರು.
ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಿಗೆ 40 ಸಾವಿರ ರೂ., ಉಪಾಧ್ಯಕ್ಷರಿಗೆ 10 ಸಾವಿರ ರೂ.ಗೌರವ ಧನ ಹಾಗೂ ಸದಸ್ಯರಿಗೆ 1,100 ರೂ.ಸಭಾಭತ್ಯೆ ನೀಡಲಾಗುತ್ತಿದೆ. ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಿಗೆ 25 ಸಾವಿರ ರೂ.ಗೌರವಧನ, ಸದಸ್ಯರಿಗೆ ಪ್ರತಿ ಸಭೆಗೆ 1000ರೂ.ಸಭಾಭತ್ಯೆ ನೀಡಲಾಗುತ್ತಿದೆ ಎಂದು ಅವರು ವಿವರಣೆ ನೀಡಿದರು.
ಆರಂಭಕ್ಕೆ ಪ್ರಶ್ನೆ ಕೇಳಿದ ಎಂ.ಟಿ.ಕೃಷ್ಣಪ್ಪ, ‘ರಾಜ್ಯ ಸರಕಾರದ ತೆರಿಗೆ ಹಣವನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ಹಂಚಿಕೆ ಮಾಡಲು ಅವಕಾಶವಿದೆಯೇ?. ಅವರಿಗೆ ಕಾನೂನು ಬಾಹಿರವಾಗಿ ಸಂಬಳ ನೀಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪರಿಶೀಲನೆಗೆ ಅಧಿಕಾರಿಗಳು, ಶಾಸಕರು ಇಲ್ಲವೇ? ಎಂದು ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು.
ಈ ವೇಳೆ ವಿಪಕ್ಷ ಆರ್.ಅಶೋಕ ಮಾತನಾಡಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಸರಕಾರಕ್ಕೂ, ಕಾಂಗ್ರೆಸ್‍ಗೂ ವ್ಯತ್ಯಾಸವಿಲ್ಲದಂತಾಗಿದೆ. 180 ಕೋಟಿ ರೂ. ತೆಗೆದುಕೊಂಡು ಹೋಗಿ ಬಳ್ಳಾರಿ ಉಪಚುನಾವಣೆಯಲ್ಲಿ ಹಂಚಿದ್ದಾರೆ. ಯಾವ ಲೆಕ್ಕದಲ್ಲಿ ರಾಜ್ಯದ ಜನರ ತೆರಿಗೆ ಹಣವನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ಕೊಡುತ್ತಿದ್ದೀರಿ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್‍ನಲ್ಲಿ ದುಡ್ಡಿಲ್ಲ ಎಂದರೆ ರಸ್ತೆ ರಸ್ತೆಯಲ್ಲಿ ಭಿಕ್ಷೆ ಬೇಡಿ ಕೊಡಲಿ. ಸಮಿತಿಗೆ ನೇಮಕ ಮಾಡಲು ವಿದ್ಯಾರ್ಹತೆ ಏನು?, ಕಾಂಗ್ರೆಸ್ ಪಕ್ಷದಿಂದ ಕೊಡಲಿ, ಎಲ್ಲವೂ ಆನ್‍ಲೈನ್ ಮೂಲಕ ಸಂದಾಯ ಆಗುತ್ತಿರುವಾಗ ರಾಜ್ಯದ ಜನರ ತೆರಿಗೆ ಹಣವನ್ನು ಏಕೆ ಕೊಡಬೇಕು ಎಂದು ಅಶೋಕ್ ಏರಿದ ದನಿಯಲ್ಲಿ ಪ್ರಶ್ನಿಸಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್‍ಬಾಬು ಸೇರಿದಂತೆ ಜೆಡಿಎಸ್, ಬಿಜೆಪಿ ಸದಸ್ಯರು, ಎದ್ದುನಿಂತು ಸರಕಾರ ವಿರುದ್ಧ ಮಾತನಾಡಲು ಮುಂದಾದರು. ಪ್ರತಿಯಾಗಿ ಆಡಳಿತ ಪಕ್ಷದ ಸದಸ್ಯರು ಎದ್ದುನಿಂತು ಮಾತನಾಡಲು ಮುಂದಾದಾಗ ಸದನದಲ್ಲಿ ಗದ್ದಲ, ಗೊಂದಲದ ವಾತಾವರಣ ನಿರ್ಮಾಣವಾಯಿತು.
ಸ್ಪೀಕರ್ ಖಾದರ್ ಅವರು, ‘ಸರಕಾರ ಉತ್ತರ ಕೊಡಲಿದೆ. ಅದನ್ನು ಆಲಿಸಿ ಎಂದು ಪದೇ ಪದೇ ಹೇಳಿದರೂ ಯಾರೊಬ್ಬರು ಕೇಳಿಸಿಕೊಳ್ಳಲಿಲ್ಲ. ಏಕೆ ರಾಜಕೀಯ ಭಾಷಣ ಮಾಡುತ್ತೀರಿ, ಸರಕಾರ ಉತ್ತರ ಕೊಡಲಿ ಸುಮನಿರಿ’ ಎಂದಾಗ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಆಗ ಸಚಿವ ಕೃಷ್ಣ ಭೈರೇಗೌಡ ಮಧ್ಯಪ್ರವೇಶಿಸಿ, ‘ಇದು ಪ್ರಶ್ನೋತ್ತರ ಅವಧಿ, ಭಾಷಣದ ಅವಧಿಯಲ್ಲ, ವಿಪಕ್ಷಗಳ ಸದಸ್ಯರು ರಾಜಕೀಯ ಮಾಡುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು. ಆಗ ಕೆರಳಿದ ಬಿಜೆಪಿ ಸದಸ್ಯ ಸುನಿಲ್‍ಕುಮಾರ್, ‘ಸರಕಾರದ ಹಣದಲ್ಲಿ ಕಾಂಗ್ರೆಸ್‍ನವರು ರಾಜಕಾರಣ ಮಾಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗ್ಯಾರಂಟಿ ಅನುಷ್ಠಾನ ಸಮಿತಿಗಳಿಗೆ ನೀಡುತ್ತಿರುವ ಗೌರವಧನ ಹಾಗೂ ಸಭಾಭತ್ಯೆಯನ್ನು ನೀಡುತ್ತಿರುವುದನ್ನು ಸಮರ್ಥಿಸಿಕೊಳ್ಳಲು ಮುಂದಾದರು. ಆಗ ಮತ್ತಷ್ಟು ಆಕ್ರೋಶ ಹೊರಹಾಕಿದ ಜೆಡಿಎಸ್-ಬಿಜೆಪಿ ಸದಸ್ಯರು, ಸ್ಪೀಕರ್ ಪೀಠದ ಮುಂದಿನ ಬಾವಿಗೆ ಇಳಿದು ಧರಣಿ ನಡೆಸಲು ಮುಂದಾದರು. ಆಗ ಪರಿಸ್ಥಿತಿ ಕೈಮೀರುವುದನ್ನು ಅರಿತ ಸ್ಪೀಕರ್ ಖಾದರ್ ಸದನವನ್ನು 10 ನಿಮಿಷ ಮುಂದೂಡಿದರು.
ಮತ್ತೆ ಸದನ ಸಮಾವೇಶಗೊಂಡಾಗ ಅದೇ ವಿಚಾರ ಪ್ರಸ್ತಾಪವಾಗಿ ಸದಸ್ಯ ಕೃಷ್ಣಪ್ಪ, ‘ಕಾನೂನು ಬಾಹಿರವಾಗಿ ಸರಕಾರದ ಹಣವನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ಕೊಡಲು ಬರುವುದಿಲ್ಲ. ಶಾಸಕರನ್ನು ಕಡೆಗಣಿಸಿ ಕಾರ್ಯಕರ್ತರನ್ನು ಸಮಿತಿ ಅಧ್ಯಕ್ಷರನ್ನಾಗಿ ಮಾಡಿರುವುದು ಸರಿಯಲ್ಲ. ಡಿಬಿಟಿ ಮೂಲಕ ಗ್ಯಾರಂಟಿ ಯೋಜನೆಗಳು ಅನುಷ್ಠಾನವಾಗುವಾಗ ಕಾರ್ಯಕರ್ತರಿಗೆ ಏನು ಕೆಲಸ?, ಪಕ್ಷದಿಂದ ಕೊಟ್ಟರೆ ನಮ ತಕರಾರಿಲ್ಲ’ ಎಂದರು.
ವಿಪಕ್ಷ ನಾಯಕ ಆರ್.ಅಶೋಕ ಮಾತನಾಡಿ, ಉಪಮುಖ್ಯಮಂತ್ರಿಗಳು ಗ್ಯಾರಂಟಿ ಗುಂಗಿನಿಂದ ಹೊರಬಂದಿಲ್ಲ. ದಿಲ್ಲಿಯಲ್ಲಿ 25 ಗ್ಯಾರಂಟಿ ಕೊಟ್ಟ ಮನುಷ್ಯ ಈಗ ಜೀರೋ ಆಗಿದ್ದಾರೆ. ಐದಲ್ಲ, ಐವತ್ತು ಗ್ಯಾರಂಟಿ ಕೊಡಿ. ಆದರೆ ತೆಲಂಗಾಣದ ಮುಖ್ಯಮಂತ್ರಿ ರೇವಂತರೆಡ್ಡಿ ಗ್ಯಾರಂಟಿ ಯೋಜನೆಗೆ ಹಣ ಹೊಂದಾಣಿಕೆ ಕಷ್ಟ ಎಂದು ಹೇಳಿದ್ದಾರೆ ಎಂದಾಗ ಕಾಂಗ್ರೆಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಆಗ ಪ್ರತಿಯಾಗಿ ಬಿಜೆಪಿ ಸದಸ್ಯರು ಮಾತನಾಡಲು ಮುಂದಾದಾಗ ಸದನ ಗದ್ದಲ, ಗೊಂದಲದ ಗೂಡಾಯಿತು. ದೇಶದಲ್ಲಿ ಕ್ಷೇತ್ರ ಪುನರ್‍ವಿಂಗಡಣೆಗಿಂತ ಗ್ಯಾರಂಟಿ ಚರ್ಚೆಯಾಗಬೇಕು ಎಂದು ರೇವಂತರೆಡ್ಡಿ ಹೇಳಿದ್ದಾರೆ ಎಂದು ಅಶೋಕ ಹೇಳುತ್ತಿದ್ದಂತೆ, ಸಚಿವ ಪ್ರಿಯಾಂಕ್ ಖರ್ಗೆ, ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಹಣವೂ ಬಂದಿಲ್ಲ. ಅದರ ಬಗ್ಗೆಯೂ ಹೇಳಿ’ ಎಂದು ಛೇಡಿಸಿದರು.
ಬಿಜೆಪಿಯ ಸಿ.ಸಿ.ಪಾಟೀಲ್ ಮಾತನಾಡಿ, ಕಾಂಗ್ರೆಸ್ ಶಾಸಕರ ಮಕ್ಕಳು, ಮಾಜಿ ಶಾಸಕರ ಮಕ್ಕಳು ಗ್ಯಾರಂಟಿ ಸಮಿತಿಯಲ್ಲಿದ್ದಾರೆ. ಅದರ ಬಗ್ಗೆಯೂ ಹೇಳಲಿ ಎಂದರು.
ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಗ್ಯಾರಂಟಿ ಅನುಷ್ಠಾನ ಸಮಿತಿಗಳ ನೇಮಕವನ್ನು ಸಮರ್ಥಿಸಿಕೊಳ್ಳುತ್ತಾ ಮಹಾರಾಷ್ಟ್ರದಲ್ಲಿ ಬಿಜೆಪಿ, ಆರೆಸ್ಸೆಸ್ಸ್‍ನವರನ್ನು ನೇಮಕ ಮಾಡಲಾಗಿದೆ. ಇದಕ್ಕೆ ಯಾರ ಹಣ ಕೊಡುತ್ತಾರೆ ಎಂದಾಗ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಏರಿದ ದನಿಯಲ್ಲಿ ವಾಗ್ವಾದ ನಡೆಯಿತು.
ಹೀಗೆ ಸುದೀರ್ಘವಾಗಿ ಆರೋಪ-ಪ್ರತ್ಯಾರೋಪಗಳು ನಡೆದವು. ಗ್ಯಾರಂಟಿ ಸಮಿತಿಗಳನ್ನು ರದ್ದು ಮಾಡಿ, ಸಮಿತಿಗೆ 10 ಸದಸ್ಯರನ್ನು ಮಾಡಿ, ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಲಿ, ಖಜಾನೆಯ ಹಣ ದುರ್ಬಳಕೆಗೆ ಅವಕಾಶ ಕೊಡಲ್ಲ ಎಂದು ಆರ್.ಅಶೋಕ ಹೇಳಿದರು. ಉಪಮುಖ್ಯಮಂತ್ರಿಗಳು ನೀಡಿದ ಉತ್ತರದಿಂದ ತೃಪ್ತರಾಗದ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಸಭಾಧ್ಯಕ್ಷರ ಮುಂದಿನ ಬಾವಿಗಿಳಿದು ಧರಣಿ ಆರಂಭಿಸಿದರು. ಆಗ ಧರಣಿ ನಡುವೆಯೇ ಸ್ಪೀಕರ್ ಮುಂದಿನ ಕಾರ್ಯಕಲಾಪಗಳನ್ನು ಕೈಗೆತ್ತಿಕೊಂಡರು.
ಈ ವಿಚಾರದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಪದೇಪದೇ ಮಾತಿನ ಚಕಮಕಿ, ಆರೋಪ, ಪ್ರತ್ಯಾರೋಪ, ಮಾತಿನ ಚಕಮಕಿಗಳು ನಡೆದು ಸದನ ಗದ್ದಲ, ಗೊಂದಲದ ಗೂಡಾಯಿತು. ಗ್ಯಾರಂಟಿ ಅನುಷ್ಠಾನ ಸಮಿತಿಗಳಿಗೆ ಕಾಂಗ್ರೆಸ್ ಕಾರ್ಯಕರ್ತರನ್ನು ನೇಮಕ ಮಾಡಿರುವುದನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಲವಾಗಿ ಸಮರ್ಥನೆ ಮಾಡಿಕೊಂಡರೆ ಅನುಷ್ಠಾನ ಸಮಿತಿಗಳಿಗೆ ಕಾಂಗ್ರೆಸ್ ಕಾರ್ಯಕರ್ತರ ಬದಲಾಗಿ ಶಾಸಕರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದು ಆಗ್ರಹಿಸಿ ಬಿಜೆಪಿ, ಜೆಡಿಎಸ್ ಶಾಸಕರು ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಗಿಳಿದು ಧರಣಿ ನಡೆಸಿದರು.
ಭೋಜನ ವಿರಾಮದ ಬಳಿಕ ಸದನ ಸೇರುತ್ತಿದ್ದಂತೆ ಪ್ರತಿಪಕ್ಷಗಳ ಸದಸ್ಯರು ತಮ್ಮ ಧರಣಿಯನ್ನು ಮುಂದುವರೆಸಿದರು. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಸ್ಪೀಕರ್ ಯು.ಟಿ.ಖಾದರ್ ಪ್ರತಿಪಕ್ಷಗಳ ಸದಸ್ಯರ ಮನವೊಲಿಕೆಗೆ ನಡೆಸಿದ ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ ಸ್ಪೀಕರ್ ಸದನವನ್ನು 10 ನಿಮಿಷಗಳ ಕಾಲ ಮುಂದೂಡಿದರು.
ಬಳಿಕ ಸದನ ಮತ್ತೆ ಸೇರಿದಾಗಲೂ ಪ್ರತಿಪಕ್ಷಗಳು ತಮ್ಮ ಧರಣಿಯನ್ನು ಮುಂದುವರೆಸಿದ್ದರು. ಸದನದಲ್ಲಿ ಗದ್ದಲದ ವಾತಾವರಣದ ನಡುವೆಯೇ ಸ್ಪೀಕರ್ ಯು.ಟಿ.ಖಾದರ್, ಗಮನ ಸೆಳೆಯುವ ಸೂಚನೆ ಹಾಗೂ ಕೊಳವೆ ಬಾವಿ ಮಂಜೂರಾತಿ ಕುರಿತು ಡಾ.ಚಂದ್ರು ಲಮಾಣಿ ಪ್ರಸ್ತಾವಿಸಿದ್ದ ಅರ್ಧ ಗಂಟೆ ಚರ್ಚೆಯನ್ನು ಕೈಗೆತ್ತಿಕೊಂಡು ಸದನವನ್ನು ಬುಧವಾರ ಬೆಳಗ್ಗೆ 10.15ಕ್ಕೆ ಸೇರುವಂತೆ ಮುಂದೂಡಿದರು.
ಮನೆಹಾಳು ಪದ ಕಡತದಲ್ಲಿ ಇರಲಿ:
ಗ್ಯಾರೆಂಟಿ ಅನುಷ್ಠಾನ ಸಮಿತಿ ಮೂಲಕ ಕಾರ್ಯಕರ್ತರಿಗೆ ವೇತನ ನೀಡಿ ಕಾಂಗ್ರೆಸ್ ʼಮನೆಹಾಳುʼ ಮಾಡುತ್ತಿದೆ ಎನ್ನುವ ಆರ್.ಅಶೋಕ್ ಮಾತಿಗೆ ತಿರುಗೇಟು ನೀಡಿದ ಶಿವಕುಮಾರ್ ಅವರು, ಆರ್.ಅಶೋಕ್ ಬಳಸಿರುವ ಮನೆಹಾಳು ಪದ ಕಡತಲ್ಲಿಯೇ ಉಳಿಯಲಿ. ನಾವು ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಮನೆ ಕಟ್ಟುತ್ತಿದ್ದೇವೆ. ಆದರೂ ಮನೆಹಾಳು ಪದ ಪ್ರಯೋಗಿಸಿದ್ದಾರೆ ಎಂದು ಹೇಳಿದರು.
ಡಿಸಿಎಂ ಸಮರ್ಥನೆ:
ನಮ್ಮ ಸರಕಾರವನ್ನು ಅಧಿಕಾರಕ್ಕೆ ತಂದಂತಹ ಪಕ್ಷದ ಕಾರ್ಯಕರ್ತರಿಗೆ ಸರಕಾರದ ಕಾರ್ಯಕ್ರಮಗಳ ಮೂಲಕ ಅನುಕೂಲ ಮಾಡಿಕೊಡುವ ಹಾಗೂ ಹುದ್ದೆಗಳನ್ನು ಕೊಡುವ ಹಕ್ಕು ನಮಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸರಕಾರದ ನಿಲುವನ್ನು ಸಮರ್ಥಿಸಿಕೊಂಡರು.
ಗ್ಯಾರಂಟಿ ಅನುಷ್ಠಾನ ಸಮಿತಿಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ವೇತನ ನೀಡಲಾಗುತ್ತಿದೆ ಎನ್ನುವ ಆಕ್ಷೇಪಕ್ಕೆ ಉತ್ತರ ನೀಡಲು ಮುಂದಾದಾಗ ಗದ್ದಲ ಎಬ್ಬಿಸಿದ ವಿಪಕ್ಷಗಳ ಸದಸ್ಯರಿಗೆ ತಿರುಗೇಟು ನೀಡಿದ ಅವರು, 52 ಸಾವಿರ ಕೋಟಿ ರೂಪಾಯಿಯ ಬೃಹತ್ ಯೋಜನೆ ಜನರಿಗೆ ತಲುಪುತ್ತಿದೆಯೋ ಇಲ್ಲವೋ ಎಂಬುದನ್ನು ಮನೆ, ಮನೆಗೆ ತೆರಳಿ ಪರೀಕ್ಷೆ ಮಾಡಿ. ಜನರಿಗೆ ಉಪಯೋಗವಾಗುತ್ತಿದೆಯೋ ಇಲ್ಲವೋ ಎಂದು ತಿಳಿಯಲು ಕಾರ್ಯಕರ್ತರಿಗೆ ಅವಕಾಶ ಮಾಡಿಕೊಟ್ಟರೆ ಅದನ್ನು ನಿಮ್ಮ ಕೈಯಲ್ಲಿ ತಡೆದುಕೊಳ್ಳಲು ಆಗುತ್ತಿಲ್ಲವಲ್ಲ ಎಂದರು.
ಈ ರಾಜ್ಯದ ಜನ ನಮಗೆ 138 ಸ್ಥಾನಗಳನ್ನು ನೀಡಿ ಶಕ್ತಿ ತುಂಬಿದ್ದಾರೆ. ವಿರೋಧ ಪಕ್ಷದ ನಾಯಕರು ಹಾಗೂ ಶಾಸಕರು ಬಂದು ನಮಗೂ ಸಮಿತಿಗಳಲ್ಲಿ ಅಧ್ಯಕ್ಷ, ಸದಸ್ಯ ಸ್ಥಾನ ನೀಡಿ ಎಂದು ಮನವಿ ಮಾಡಿದ್ದಾರೆ. ಇದು ನನ್ನೊಬ್ಬನ ನಿರ್ಧಾರವಲ್ಲ, ಈ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ನಾವು ಎಂದಿಗೂ ನಮ್ಮ ಕಾರ್ಯಕರ್ತರ ಜತೆ ಇದ್ದೇ ಇರುತ್ತೇವೆ ಎಂದರು.
ಮುಖ್ಯಮಂತ್ರಿ ಬದಲಾಗಬಹುದು:
ರಾಜ್ಯದಲ್ಲಿ 30 ವರ್ಷಗಳಲ್ಲಿ ಯಾವ ಪಕ್ಷದ ಸರಕಾರವೂ ಪುನರಾವರ್ತಿತವಾಗಿಲ್ಲ. ಈಗಿರುವ ರಾಜ್ಯದ ಮುಖ್ಯಮಂತ್ರಿ ಯಾವಾಗ ಹೋಗುತ್ತಾರೋ, ಹೊಸ ಮುಖ್ಯಮಂತ್ರಿ ಯಾವಾಗ ಬರುತ್ತಾರೋ ಗೊತ್ತಿಲ್ಲ ಎಂದು ವಿರೋಧಪಕ್ಷದ ನಾಯಕ ಆರ್.ಅಶೋಕ ಹೇಳಿದರು.
ಪ್ರಶ್ನೋತ್ತರ ವೇಳೆಯಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಅವರು, ಅಧಿಕಾರ ನಡೆಸುತ್ತಿದ್ದ ಪಕ್ಷದವರೆಲ್ಲರೂ ಮುಂದೆ ನಾವೇ ಬರುತ್ತೇವೆ ಎಂದು ಹೇಳುತ್ತಿದ್ದರು. ಆದರೆ ಯಾವ ಪಕ್ಷವೂ ಅಧಿಕಾರಕ್ಕೆ ಬಂದಿಲ್ಲ. ಮೂರು ವರ್ಷದ ನಂತರ ನೀವು(ಕಾಂಗ್ರೆಸ್) ಇರುವುದಿಲ್ಲ ಎಂದು ಛೇಡಿಸಿದರು.
ಮನೆಹಾಳು ಹೇಳಿಕೆ:
ಯಾವ ಕಾಂಗ್ರೆಸ್ ಅಧ್ಯಕ್ಷರೂ ಮಾಡದ ಮನೆಹಾಳು ಕೆಲಸವನ್ನು ಈಗ ಮಾಡಲಾಗಿದೆ ಎಂದು ಆರ್.ಅಶೋಕ್ ಹೇಳಿದಾಗ ಆಡಳಿತ ಪಕ್ಷದ ಸದಸ್ಯ ನರೇಂದ್ರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿ, ವಿಪಕ್ಷ ನಾಯಕರು ಕ್ಷಮೆ ಕೇಳಬೇಕು ಎಂದು ಪಟ್ಟುಹಿಡಿದರು. ಜತೆಗೆ, ಕಡತದಿಂದ ಆ ಶಬ್ದವನ್ನು ತೆಗೆಯಬೇಕು ಎಂದು ಆಗ್ರಹಿಸಿದರು.
ಸದನದಲ್ಲಿ ಡಿವಿಜಿ ನುಡಿ:
ಈ ವೇಳೆ ವಿಪಕ್ಷಗಳ ಶಾಸಕರು ಗದ್ದಲ ಎಬ್ಬಿಸಿದಾಗ ಶಿವಕುಮಾರ್, ‘ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ, ಗದ್ದಲವ ತುಂಬಿ ಪ್ರಸಿದ್ದನಾಗುತಿಹೆ ಉದ್ಧರಿಸುವೆನು ಜಗವನೆನ್ನುತಿಹ ಸಖನೆ, ನ್ನುದ್ಧಾರವೆಷ್ಟಾಯ್ತೊ? ಮಂಕುತಿಮ್ಮ’ ಎಂಬ ಡಿವಿಜಿ ಅವರ ಕವನ ಹೇಳುವ ಮೂಲಕ ವಿಪಕ್ಷ ಸದಸ್ಯರಿಗೆ ತಿರುಗೇಟು ನೀಡಿದರು.