ಆಡಳಿತ ಸುಧಾರಣಾ ಆಯೋಗದಿಂದ ಸರಕಾರಕ್ಕೆ 5,039 ಶಿಫಾರಸ್ಸು ಸಲ್ಲಿಕೆ : ಆರ್.ವಿ.ದೇಶಪಾಂಡೆ
Photo: fb/RVDeshpande
ಬೆಂಗಳೂರು : ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ಆಡಳಿತದಲ್ಲಿ ಪಾರದರ್ಶಕತೆ, ಸರಳತೆ ಹಾಗೂ ಸಕಾಲದಲ್ಲಿ ನಾಗರಿಕ ಸೇವೆಗಳನ್ನು ಕಡಿಮೆ ಖರ್ಚಿನಲ್ಲಿ ಒದಗಿಸಲು ಮಾಡಬೇಕಾದ ಸುಧಾರಣೆ ಹಾಗೂ ಇಲಾಖೆಗಳ ಕಾರ್ಯ ನಿರ್ವಹಣೆ ಸುಧಾರಿಸಲು ಪ್ರಸಕ್ತ ಸಾಲಿನ ಜನವರಿ ಅಂತ್ಯಕ್ಕೆ 39 ಇಲಾಖೆಗಳಿಗೆ ಸಂಬಂಧಿಸಿದ 5,039 ಶಿಫಾರಸ್ಸುಗಳುಳ್ಳ 7 ವರದಿಗಳನ್ನು ತಯಾರಿಸಿ ಸರಕಾರಕ್ಕೆ ಸಲ್ಲಿಸಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಗುರುವಾರ ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ನಾನು ಆಯೋಗದ ಅಧ್ಯಕ್ಷನಾಗಿ ಜನವರಿಯಲ್ಲಿ ಅಧಿಕಾರ ವಹಿಸಿಕೊಂಡಾಗ 99 ಶಿಫಾರಸ್ಸುಗಳು ಮಾತ್ರ ಅನುಷ್ಠಾನಗೊಂಡಿದ್ದು, ಆಯೋಗವು ಈಗಾಗಲೇ ಮಾಡಿದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವ ಕುರಿತು ಹೆಚ್ಚಿನ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ, ಸಚಿವರು, ಮುಖ್ಯ ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳಿಗೆ ಪತ್ರಗಳ ಮೂಲಕ ಕ್ರಮ ಕೈಗೊಳ್ಳಲು ತಿಳಿಸಲಾಗಿತ್ತು ಎಂದು ಹೇಳಿದ್ದಾರೆ.
ಕಳೆದ ತಿಂಗಳಲ್ಲಿನಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿಯೊಂದಿಗೆ ಸಭೆ ನಡೆಸಿ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಆಡಳಿತ ಸುಧಾರಣಾ ಆಯೋಗದ ಶಿಫಾರಸ್ಸುಗಳ ಅನುಷ್ಠಾನದ ಬಗ್ಗೆ ಮಾಸಿಕ ಸಭೆಗಳಲ್ಲಿಯೂ ಪರಿಶೀಲಿಸಲು ತಿಳಿಸಲಾಗಿತ್ತು. ಇದರ ಪರಿಣಾಮವಾಗಿ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವಲ್ಲಿ ಗಣನೀಯ ಪ್ರಗತಿ ಕಂಡು ಬಂದಿದೆ ಎಂದು ದೇಶಪಾಂಡೆ ತಿಳಿಸಿದ್ದಾರೆ.
ಆಯೋಗವು 2021ರ ಜೂನ್ನಲ್ಲಿ ಕಂದಾಯ, ಆಹಾರ ಮತ್ತು ನಾಗರಿಕ ಸರಬರಾಜು, ಕಾನೂನು ಮಾಪನ ಶಾಸ್ತ್ರ ಹಾಗೂ ಸಾರಿಗೆ ಇಲಾಖೆಗಳಿಗೆ ಸಂಬಂಧಿಸಿದಂತೆ ಮೊದಲನೆಯ ವರದಿಯಲ್ಲಿ ಕ್ರಮವಾಗಿ 528, 111 ಮತ್ತು 217 ಒಟ್ಟು 856 ಶಿಫಾರಸ್ಸುಗಳನ್ನು ಮಾಡಿದೆ. ಕಳೆದ ಮೂರು ವರ್ಷಗಳಲ್ಲಿ ಈ ಮೂರು ಇಲಾಖೆಗಳ ಶಿಫಾರಸ್ಸುಗಳ ಅನುಷ್ಠಾನ ಕುರಿತು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಪರಿಶೀಲಿಸಲು ಜೂ.18, 19 ಹಾಗೂ 20ರಂದು ಸಂಬಂಧಿಸಿದ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿಯೊಂದಿಗೆ ಕೂಲಂಕಷವಾಗಿ ಪರಿಶೀಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮೊದಲನೆ ವರದಿಯ ಶಿಫಾರಸ್ಸುಗಳ ಅನುಷ್ಠಾನದ ಪ್ರಗತಿ ವಿವರ: ಕಂದಾಯ ಇಲಾಖೆಗೆ ಸಂಬಂಧಿಸಿದ ಒಟ್ಟು 528 ಶಿಫಾರಸ್ಸುಗಳಲ್ಲಿ 205 ಅನುಷ್ಠಾನಗೊಳಿಸಲಾಗಿದೆ. 76 ಅನುಷ್ಠಾನದ ಹಂತದಲ್ಲಿವೆ, 51 ಪರಿಶೀಲನೆಯಲ್ಲಿವೆ ಎಂದು ದೇಶಪಾಂಡೆ ತಿಳಿಸಿದ್ದಾರೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸಂಬಂಧಿಸಿದ 111 ಶಿಫಾರಸ್ಸುಗಳಲ್ಲಿ 37 ಅನುಷ್ಠಾನಗೊಳಿಸಲಾಗಿದೆ. 18 ಅನುಷ್ಠಾನದ ಹಂತದಲ್ಲಿವೆ, 18 ಪರಿಶೀಲನೆಯಲ್ಲಿವೆ. ಸಾರಿಗೆ ಇಲಾಖೆಗೆ ಸಂಬಂಧಿಸಿದ 217 ಶಿಫಾರಸ್ಸುಗಳಲ್ಲಿ 117 ಅನುಷ್ಠಾನಗೊಳಿಸಲಾಗಿದೆ. 4 ಅನುಷ್ಠಾನದ ಹಂತದಲ್ಲಿವೆ ಹಾಗೂ 96 ಪರಿಶೀಲನೆಯಲ್ಲಿವೆ ಎಂದು ದೇಶಪಾಂಡೆ ವಿವರಣೆ ನೀಡಿದ್ದಾರೆ.