ಆಡಳಿತ ಸುಧಾರಣಾ ಆಯೋಗದಿಂದ 853 ಶಿಫಾರಸು ಅನುಷ್ಠಾನ : ಆರ್.ವಿ.ದೇಶಪಾಂಡೆ
ಬೆಂಗಳೂರು: ಕರ್ನಾಟಕ ಆಡಳಿತ ಸುಧಾರಣಾ ಆಯೋಗ 2024ರ ಜನವರಿಯಿಂದ ಈವರೆಗೆ 19 ಇಲಾಖೆಗಳ 853 ಶಿಪಾರಸುಗಳನ್ನು ಅನುಷ್ಠಾನಗೊಳಿಸಿದೆ ಎಂದು ಆಯೋಗದ ಅಧ್ಯಕ್ಷ, ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ಆಯೋಗದ ಪ್ರಗತಿ ಕುರಿತ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಒಟ್ಟು 19 ಇಲಾಖೆಗಳ 2891 ಶಿಫಾರಸುಗಳ ಪೈಕಿ, 853 ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲಾಗಿದೆ. ಇನ್ನು ಅನುಷ್ಠಾನದ ಹಂತದಲ್ಲಿ 592 ಶಿಫಾರಸುಗಳಿದ್ದು, ಸರಕಾರದ ಮಟ್ಟದಲ್ಲಿ 243, ಇಲಾಖಾ ಮಟ್ಟದಲ್ಲಿ 1181 ಶಿಫಾರಸುಗಳು ಬಾಕಿ ಇವೆ ಎಂದರು.
2024ರ ಜನವರಿ ಅಂತ್ಯದ ವೇಳೆಗೆ ಆಯೋಗ 39 ಇಲಾಖೆಗಳನ್ನು ಒಳಗೊಂಡು ಒಟ್ಟು ಏಳು ವರದಿಗಳನ್ನು ಸರಕಾರಗಳಿಗೆ ನೀಡಿದೆ. ಈ ವರದಿಗಳು 5039 ಶಿಫಾರಸುಗಳನ್ನು ಒಳಗೊಂಡಿತು. ಜನವರಿ ಅಂತ್ಯದವರೆಗೆ ಕೇವಲ 99 ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಲಾಗಿತ್ತು. ನಿರಂತರವಾಗಿ ಸರಕಾರದ ಮುಖ್ಯ ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಹಾಗೂ ಇತರರಿಗೆ ನಿರಂತರವಾಗಿ ಪತ್ರ ಬರೆದು ಹೆಚ್ಚು ಶಿಫಾರಸುಗಳನ್ನು ತಾವು ಅನುಷ್ಠಾನಗೊಳಿಸಿರುವುದಾಗಿ ಆರ್.ವಿ.ದೇಶಪಾಂಡೆ ತಿಳಿಸಿದರು.
ಅಲ್ಲದೆ, 20 ಇಲಾಖೆಗಳಿಗೆ ಸಂಬಂಧಿಸಿದ 2168 ಶಿಫಾರಸುಗಳ ಪೈಕಿ 12ನ್ನು ಅನುಷ್ಠಾನಗೊಳಿಸಲಾಗಿದೆ. ಅನುಷ್ಠಾನದ ಹಂತದಲ್ಲಿ 993 ಬಾಕಿಯಿದ್ದು, 192 ಶಿಫಾರಸುಗಳು ಸರಕಾರದ ಮಟ್ಟದಲ್ಲಿ 1771 ಇಲಾಖಾ ಮಟ್ಟದಲ್ಲ ಬಾಕಿ ಇವೆ. ಬಾಕಿ ಉಳಿದ ಶಿಫಾರಸುಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಸಂಬಂಧಪಟ್ಟವರಿಗೆ ಸೂಚಿಸಲಾಗುವುದು ಎಂದು ಆರ್.ವಿ.ದೇಶಪಾಂಡೆ ಹೇಳಿದರು.
ಆಯೋಗ ಉತ್ತರ ಕನ್ನಡ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಿಗೆ ಭೇಟಿ ನೀಡಿದ್ದು, ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದೆ. ನಾಗರಿಕರ ಸಲಹೆ ಸೂಚನೆಗಳನ್ನು ಸ್ವೀಕರಿಸಲಾಗಿದೆ. ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್) ಮಾನದಂಡವನ್ನು ಪರಿಶೀಲಿಸಿ, ಅರ್ಹರಿಗೆ ಕಾರ್ಡ್ ನೀಡಿ, ಅನರ್ಹ ಕಾರ್ಡ್‍ಗಳನ್ನು ರದ್ದುಗೊಳಿಸಲು ಉಪಸಮಿತಿ ರಚಿಸಲಾಗಿದೆ. ಇದಲ್ಲದೆ, ಇಲಾಖೆಗಳು ನಿಗಮ ಮಂಡಳಿಗಳನ್ನು ವಿಲೀನಗೊಳಿಸಲು ಪರಿಶೀಲಿಸಲಾಗುವುದು. ಸರಕಾರಿ ಯೋಜನೆ ಮತ್ತು ಕಾರ್ಯಕ್ರಮಗಳಲ್ಲಿ ಯಾವುದೇ ಲೋಪ ವಿಳಂಬಕ್ಕೆ ಆಸ್ಪದ ನೀಡದಂತೆ ಆಯೋಗ ಕ್ರಮಕೈಗೊಳ್ಳಬೇಕು ಎಂದು ಆರ್.ವಿ.ದೇಶಪಾಂಡೆ ತಿಳಿಸಿದರು.
ನಗದು ರಹಿತ, ಸಂಪರ್ಕ ರಹಿತ ಸೇವೆ ನೀಡಲು ಎಲ್ಲಾ ಸೇವೆಗಳನ್ನು ಆನ್‍ಲೈನ್, ಎಂಡ್-ಟು-ಎಂಡ್ ಆನ್‍ಲೈನ್ ಸೇವೆಗಳು ಮತ್ತು ತಂತ್ರಜ್ಞಾನ ಬಳಸಿಕೊಂಡು ಕಡತವನ್ನು ತ್ವರಿತ ವಿಲೇವಾರಿ ಮಾಡಲು ಸೂಚಿಸಲಾಗುವುದು. ಅಟಲ್‍ಜೀ ಜನಸ್ನೇಹಿ ಕೇಂದ್ರ, ರೈತ ಸಂಪರ್ಕ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಪೊಲೀಸ್ ಠಾಣೆಗಳಂತಹ ಮುಂಚೂಣಿ ಕಚೇರಿಗಳ ಸೇವಾ ವೈಖರಿ ಬಲಪಡಿಸಲು ಶಿಫಾರಸು ಸೇರಿದಂತೆ ಸರಕಾರಿ ಖಾಲಿ ಲಿಪಿಕ ಹುದ್ದೆಗಳನ್ನು ತಾಂತ್ರಿಕ ಹುದ್ದೆಗಳಿಗೆ ಪರಿವರ್ತಿಸುವ ಕಾರ್ಯವನ್ನು ಸಹ ಮಾಡಲಾಗಿದೆ ಎಂದು ಆರ್.ವಿ.ದೇಶಪಾಂಡೆ ಹೇಳಿದರು.
ಒಟ್ಟಿನಲ್ಲಿ ಪಾರದರ್ಶಕತೆ, ಸರಳತೆ ಮತ್ತು ಕಡಿಮೆ ವೆಚ್ಚದಲ್ಲಿ ನಾಗರೀಕ ಸೇವೆಗಳನ್ನು ಸಕಾಲದಲ್ಲಿ ವಿಳಂಬವಿಲ್ಲದೇ ತಲುಪಿಸಲು ಆಯೋಗ ಬದ್ಧವಾಗಿದೆ. ಆಡಳಿತಾತ್ಮಕ ಮತ್ತು ಆರ್ಥಿಕ ಅಧಿಕಾರಗಳನ್ನು ಜಿಲ್ಲಾ ಉಪವಿಭಾಗ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಪ್ರದತ್ತಗೊಳಿಸಲು ಹೆಚ್ಚಿನ ಶಿಫಾರಸುಗಳನ್ನು ಮಾಡಲಾಗುವುದು ಎಂದು ಆರ್.ವಿ.ದೇಶಪಾಂಡೆ ತಿಳಿಸಿದರು.