ಹಿರಿಯ ಮುತ್ಸದ್ಧಿ, ಮಾಜಿ ಸಿಎಂ ಎಸ್ಸೆಂ ಕೃಷ್ಣ ನಿಧನಕ್ಕೆ ಉಭಯ ಸದನಗಳಲ್ಲಿ ಸಂತಾಪ
ಯುವ ರಾಜಕಾರಣಿಗಳಿಗೆ ಎಸ್.ಎಂ. ಕೃಷ್ಣ ಮಾದರಿ: ಸ್ಪೀಕರ್ ಖಾದರ್
ಎಂ.ಎಸ್.ಕೃಷ್ಣ
ಬೆಳಗಾವಿ (ಸುವರ್ಣ ವಿಧಾನಸೌಧ): ಹಿರಿಯ ರಾಜಕೀಯ ಮುತ್ಸದ್ಧಿ, ಬೆಂಗಳೂರಿಗೆ ಐಟಿ-ಬಿಟಿ ನಗರ, ಸಿಲಿಕಾನ್ ವ್ಯಾಲಿ ಖ್ಯಾತಿಯನ್ನು ತಂದುಕೊಟ್ಟ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಹಾಗೂ ಮಾಜಿ ರಾಜ್ಯಪಾಲರಾದ ಎಂ.ಎಸ್.ಕೃಷ್ಣ ಅವರ ನಿಧನಕ್ಕೆ ವಿಧಾನ ಮಂಡಲ ಉಭಯ ಸದನಗಳಲ್ಲಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಮಂಗಳವಾರ ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸ್ಪೀಕರ್ ಯು.ಟಿ.ಖಾದರ್ ಅವರು ಸಂತಾಪ ಸೂಚನಾ ನಿರ್ಣಯವನ್ನು ಮಂಡಿಸಿ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಇಂದು ನಸುಕಿನ ಜಾವ ನಿಧನ ಹೊಂದಿದ್ದಾರೆ ಎಂದು ಸದನಕ್ಕೆ ಅತ್ಯಂತ ವಿಷಾದದಿಂದ ತಿಳಿಸಿದರು.
ಎಸ್.ಎಂ.ಕೃಷ್ಣ 1932ರ ಮೇ 1ರಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಜನಿಸಿದ್ದರು. ಬಿ.ಎ., ಬಿ.ಎಲ್. ಪದವಿ ಪಡೆದಿದ್ದ ಅವರು ನಂತರ ಟೆಕ್ಸಾಸ್ನಲ್ಲಿ ಎಂ.ಸಿ.ಎಲ್. ಪದವಿ, ವಾಷಿಂಗ್ಟನ್ ವಿವಿ ಲಾ ಸ್ಕೂಲ್ನಿಂದಲೂ ಪದವಿ ಪಡೆದಿದ್ದರು. ವೃತ್ತಿಯಲ್ಲಿ ವಕೀಲರಾಗಿದ್ದ ಎಸ್.ಎಂ.ಕೃಷ್ಣ ಅವರು ಕಾನೂನು ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿಯೂ ಕಾರ್ಯ ನಿರ್ವಹಿಸಿದ್ದರು. 1962ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದ ಅವರು 1989, 1999 ಹಾಗೂ 2004ರಲ್ಲಿ ವಿಧಾನಸಭೆಗೆ ಆಯ್ಕೆಯಾಗಿದ್ದರು.
1968, 1971 ಹಾಗೂ 1980ರಲ್ಲಿ ಲೋಕಸಭೆಗೆ ಚುನಾಯಿತರಾಗಿದ್ದರು. 1972ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಗೊಂಡಿದ್ದ ಅವರು, 1996ರಿಂದ 1999 ಮತ್ತು 2008ರಿಂದ 2014ರ ಅವಧಿಯಲ್ಲಿ ರಾಜ್ಯಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು ಎಂದು ಅವರು ಗುಣಗಾನ ಮಾಡಿದರು. ಅಲ್ಲದೆ, ಎಸ್.ಎಂ.ಕೃಷ್ಣ ವಿಧಾನಸಭೆಯ ಸ್ಪೀಕರ್ ಆಗಿ, ಕೈಗಾರಿಕೆ, ವಾಣಿಜ್ಯ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ, ನಂತರ ರಾಜ್ಯದ ಹತ್ತನೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು ಎಂದು ಸ್ಮರಿಸಿದರು.
ಕೇಂದ್ರ ಕೈಗಾರಿಕಾ ಖಾತೆಯ ರಾಜ್ಯ ಸಚಿವರಾಗಿ, ಹಣಕಾಸು ಖಾತೆಯ ರಾಜ್ಯ ಸಚಿವರಾಗಿ, ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಅವರು, 2008ರಲ್ಲಿ ಮಹಾರಾಷ್ಟ್ರದ 18ನೆ ರಾಜ್ಯಪಾಲರಾಗಿ ನೇಮಕಗೊಂಡಿದ್ದರು. ಕರ್ನಾಟಕ ರಾಜ್ಯದ ಸರ್ವೋತ್ತೋಮುಖ ಅಭಿವೃದ್ಧಿಯ ಕನಸು ಕಂಡಿದ್ದ ಕೃಷ್ಣ, ಭೂ ದಾಖಲೆಯನ್ನು ಡಿಜಿಟಲೀಕರಣಗೊಳಿಸುವ, ಸರಕಾರಿ ಮಕ್ಕಳಿಗೆ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ, ಬೆಂಗಳೂರಿಗೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು-ಮೈಸೂರು ಹೆದ್ದಾರಿ ಯೋಜನೆ ಸೇರಿದಂತೆ ಹತ್ತು ಹಲವು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದ್ದರು ಎಂದು ವಿವರಿಸಿದರು.
ಮಾಹಿತಿ ಮತ್ತು ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ಕೊಟ್ಟಿದ್ದ ಅವರು ರಾಜ್ಯದಲ್ಲೇ ಐಟಿ-ಬಿಟಿ ಕ್ರಾಂತಿಯನ್ನೇ ಮಾಡಿದ್ದರು. ಬೆಂಗಳೂರನ್ನು ಸಿಲಿಕಾನ್ ಸಿಟಿಯಾಗಿಸಿ ಸಿಂಗಾಪುರ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆ ಹೊಂದಿದ್ದರು. ಎಸ್.ಎಂ.ಕೃಷ್ಣ ಅತ್ಯುತ್ತಮ ಆಡಳಿತಗಾರರಾಗಿದ್ದರು. ಎಂತಹ ಕಠಿಣ ಪರಿಸ್ಥಿತಿಯಲ್ಲೂ ಎದೆಗುಂದದ ಅವರು ವರನಟ ಡಾ.ರಾಜ್ಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಅಪ್ರತಿಮವಾದುದು ಎಂದು ಖಾದರ್ ನೆನಪು ಮಾಡಿಕೊಂಡರು.
ರಾಜ್ಯದಲ್ಲಿ ತೀವ್ರ ಸ್ವರೂಪದ ಬರ ಸ್ಥಿತಿ ಆವರಿಸಿದ ಸಂದರ್ಭದಲ್ಲಿಯೂ ಅದನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದರು. ಅಭಿವೃದ್ಧಿಯ ಚಿಂತಕರಾಗಿದ್ದ ಅವರು, ರಾಜ್ಯಕ್ಕೆ ನೀಡಿರುವ ಕೊಡುಗೆ ಅಪಾರವಾದುದು. ಬಹುಮುಖ ಪ್ರತಿಭೆಯಾಗಿದ್ದ ಅವರಿಗೆ 2023ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಗಿತ್ತು. ಅಪ್ರತಿಮ ವಾಗ್ಮಿ, ಸಜ್ಜನಿಕೆಯ ಎಸ್.ಎಂ.ಕೃಷ್ಣ ಇಂದು ನಿಧನರಾಗಿದ್ದಾರೆ. ನಾನು ಹುಟ್ಟುವ ಮ್ನುನವೇ ಕೃಷ್ಣ ಅವರು ಶಾಸಕರಾಗಿದ್ದರು ಎಂದು ಸ್ಪೀಕರ್ ಖಾದರ್ ತಿಳಿಸಿದರು.
ಮಾದರಿ ರಾಜಕಾರಣಿ: ಪ್ರತಿಯೊಂದು ಸಾವು ಒಂದು ಸಂದೇಶವನ್ನು ಕೊಡುತ್ತದೆ. ಕೃಷ್ಣ ಅವರ ಅಗಲಿಕೆಯೂ ಒಂದು ಸಂದೇಶವನ್ನು ನೀಡಿದೆ. ನಕರಾತ್ಮಕ ಚಿಂತನೆಯೇ ಅವರಲ್ಲಿ ಇರಲಿಲ್ಲ. ಎಂದೂ ಕೃಷ್ಣ ಅವರು ರಾಜಕೀಯ ದ್ವೇಷದ ಮಾತು ಅವರಲ್ಲಿ ಇರಲಿಲ್ಲ. ಅವರ ವ್ಯಕ್ತಿತ್ವ, ಜೀವನ ಯುವ ರಾಜಕಾರಣಿಗಳಿಗೆ ಉತ್ತಮ ಸಂದೇಶವಾಗಿದೆ. ಉತ್ತಮ ಮುತ್ಸದ್ಧಿ ರಾಜಕಾರಣಿಯಾಗಿದ್ದ ಅವರು ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಖಾದರ್ ಹೇಳಿದರು.
‘ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ದೊರೆಯಲು ತಾಲೂಕು ಮಟ್ಟದಲ್ಲಿ ‘ಕಿಯೋನಿಕ್ಸ್’ ಮೂಲಕ ಕಂಪ್ಯೂಟರ್ ಕೇಂದ್ರಗಳನ್ನು ಪ್ರಾರಂಭಿಸಿದರು. ಬೆಂಗಳೂರು ಅಭಿವೃದ್ಧಿ ಮೂಲಕ ಕರ್ನಾಟಕವನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವ ರೀತಿಯಲ್ಲಿ ಮುನ್ನಡೆಸಿದರು. ಅವರ ಕೊಡುಗೆ ಅಪಾರವಾದುದು. ಅವರೊಬ್ಬ ಮಹಾನ್ ಚೇತನ. ಹುಟ್ಟುವಾಗ ಉಸಿರು ಇರುತ್ತದೆ. ದೇಹ ಬಿಟ್ಟು ಹೋಗುವಾಗ ಉಸಿರು ಇರುವುದಿಲ್ಲ. ಹೆಸರು ಮಾತ್ರ ಇರುತ್ತದೆ. ಶಾಶ್ವತವಾದ ದೊಡ್ಡ ಮಟ್ಟದ ಹೆಸರು ಅವರು ಪಡೆದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ವರ್ಗದವರಿಗೆ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ’ ಎಂದು ಸ್ಪೀಕರ್ ಖಾದರ್ ಪ್ರಾರ್ಥಿಸಿದರು.
ಆ ಬಳಿಕ ಸಂತಾಪ ನಿರ್ಣಯವನ್ನು ಬೆಂಬಲಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಪಕ್ಷ ನಾಯಕ ಆರ್.ಅಶೋಕ್, ಸಚಿವರಾದ ಡಾ.ಜಿ. ಪರಮೇಶ್ವರ್, ಎಚ್.ಕೆ.ಪಾಟೀಲ್, ಝಮೀರ್ ಅಹ್ಮದ್ ಖಾನ್, ಕೆ.ಎಚ್.ಮುನಿಯಪ್ಪ, ಜೆಡಿಎಸ್ ನಾಯಕ ಸುರೇಶ್ ಬಾಬು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಹಲವರು, ಕೃಷ್ಣರ ಗುಣಗಾನ ಮಾಡಿದರು. ಆ ಬಳಿಕ ಮೃತರ ಗೌರವಾರ್ಥ ಸದನದಲ್ಲಿ ಒಂದು ನಿಮಿಷ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.