ಸಚಿನ್ ಆತ್ಮಹತ್ಯೆ ಪ್ರಕರಣ : ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆದು, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ : ವಿಜಯೇಂದ್ರ
ಬಿ.ವೈ.ವಿಜಯೇಂದ್ರ
ಬೆಂಗಳೂರು : ಗುತ್ತಿಗೇದಾರ ಸಚಿನ್ ಆತ್ಮಹತ್ಯೆ ಪ್ರಕರಣ ಸಂಬಂಧ ಸಚಿವ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆ ಪಡೆದು, ಈ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಸಿಬಿಐ ತನಿಖೆ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
ಸೋಮವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನ್ಯಾಯಕ್ಕಾಗಿ ಸಿಬಿಐ ತನಿಖೆಗೆ ಸಚಿನ್ ಕುಟುಂಬವೂ ಒತ್ತಾಯಿಸಿದೆ. ಸಚಿನ್ ಅವರ ಕುಟುಂಬಕ್ಕೆ ತಕ್ಷಣದಿಂದ ಭದ್ರತೆ ಕೊಡಬೇಕು. ಕುಟುಂಬಕ್ಕೆ 1 ಕೋಟಿ ರೂ.ಗಳ ಪರಿಹಾರ ನೀಡಬೇಕು. ಹಲವರು ವಿದ್ಯಾವಂತರಿದ್ದು, ಕುಟುಂಬದ ಒಬ್ಬರು ಸದಸ್ಯರಿಗೆ ಸರಕಾರಿ ನೌಕರಿ ಕೊಡಬೇಕು ಎಂದು ಒತ್ತಾಯಿಸಿದರು.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಗುತ್ತಿಗೆದಾರ ಸಚಿನ್ ಪಾಂಚಾಳ ಅವರ ಆತ್ಮಹತ್ಯೆ ಪ್ರಕರಣ ದೇಶಾದ್ಯಂತ ಸುದ್ದಿಯಾಗಿದೆ. ಅವರು ಬರೆದಿಟ್ಟ 7 ಪುಟಗಳ ಡೆತ್ ನೋಟಿನಲ್ಲಿ ಕಿರುಕುಳದ ಉಲ್ಲೇಖವಿದೆ. ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಬರೆದಿಟ್ಟ ಡೆತ್ ನೋಟಿನ ಮಾಹಿತಿ ಸತ್ಯಕ್ಕೆ ದೂರವಾಗುವ ಸಾಧ್ಯತೆ ಇಲ್ಲ ಎಂದು ವಿಜಯೇಂದ್ರ ತಿಳಿಸಿದರು.
ಹಿಂದೆ, ಇದೇ ಸರಕಾರದ ಸಚಿವರಾಗಿದ್ದ ಬಿ.ನಾಗೇಂದ್ರ ಅವರೂ ವಾಲ್ಮೀಕಿ ನಿಗಮದ ಹಗರಣದಲ್ಲಿ ಸಿಲುಕಿ ರಾಜೀನಾಮೆ ಕೊಟ್ಟಿದ್ದಾರೆ. ಒಂದು ಕ್ಷಣವೂ ತಡ ಮಾಡದೆ, ಪ್ರಕರಣದ ಹೊಣೆ ಹೊತ್ತು ಪ್ರಿಯಾಂಕ್ ಖರ್ಗೆ ಅವರು ರಾಜೀನಾಮೆ ನೀಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾರನ್ನೋ ಉಳಿಸುವ, ರಕ್ಷಿಸುವ ದುಸ್ಸಾಹಸಕ್ಕೆ ಕೈ ಹಾಕಬಾರದು ಎಂದು ವಿಜಯೇಂದ್ರ ಎಚ್ಚರಿಸಿದರು.
ಹಿಂದೂ ಸಮಾಜದ ಸಿದ್ಧಲಿಂಗ ಸ್ವಾಮೀಜಿ, ಶಾಸಕ ಬಸವರಾಜ ಮತ್ತಿಮೂಡ್, ಕಲಬುರ್ಗಿಯ ಬಿಜೆಪಿ ನಾಯಕರಾದ ಚಂದುಪಾಟೀಲ, ಮಣಿಕಂಠ ರಾಠೋಡ್ ಅವರ ಕೊಲೆಗೆ ಸಂಚು ರೂಪಿಸಿದ್ದಾಗಿ ಡೆತ್ ನೋಟ್ ತಿಳಿಸಿದೆ. ಸಿದ್ಧಲಿಂಗ ಸ್ವಾಮೀಜಿ ಅವರ ಧ್ವನಿ ಅಡಗಿಸಲು ಮಹಾರಾಷ್ಟ್ರದ ಸುಪಾರಿ ಕಿಲ್ಲರ್ಗಳನ್ನು ಬಳಸುವ ವಿಚಾರವೂ ಡೆತ್ ನೋಟಿನಲ್ಲಿದೆ. ಹಾಗಾಗಿ ಇದೊಂದು ಗಂಭೀರ ವಿಚಾರ. ಆದ್ದರಿಂದ ಇದರ ಸಿಬಿಐ ತನಿಖೆ ಅತ್ಯಗತ್ಯ. ರಾಜ್ಯದ ಪೊಲೀಸ್ ಇಲಾಖೆಯಿಂದ ಅಂತಹ ಶಕ್ತಿಶಾಲಿ ಖರ್ಗೆ ಕುಟುಂಬದ ವಿರುದ್ಧ ತನಿಖೆ ಮಾಡಲು ಸಾಧ್ಯವಿಲ್ಲ ಎಂದು ವಿಜಯೇಂದ್ರ ಹೇಳಿದರು.
ಮೇಧಾವಿ ಪ್ರಿಯಾಂಕ್ ಖರ್ಗೆ ಅವರಿಗೆ ಮರೆವು ಜಾಸ್ತಿ. ಹಿಂದೆ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಕೆ.ಎಸ್.ಈಶ್ವರಪ್ಪ ಅವರ ಮೇಲೆ ಆರೋಪ ಬಂದಾಗ, ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟದ್ದನ್ನು ಪ್ರಿಯಾಂಕ್ ಮರೆಯಬಾರದು. ಮಡಿಕೇರಿಯಲ್ಲಿ ಪೊಲೀಸ್ ಅಧಿಕಾರಿ ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದೇ ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಆ ಪ್ರಕರಣದಲ್ಲಿ ಅಂದಿನ ಗೃಹ ಸಚಿವ ಜಾರ್ಜ್ ಅವರು ಕೂಡ ರಾಜೀನಾಮೆ ಕೊಟ್ಟು, ಸಿಬಿಐ ತನಿಖೆ ಆಗಿ ಕ್ಲೀನ್ ಚಿಟ್ ಬಂದಿತ್ತು ಎಂದು ವಿಜಯೇಂದ್ರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್, ಮುಖಂಡ ಜಗದೀಶ್ ಹಿರೇಮನಿ ಉಪಸ್ಥಿತರಿದ್ದರು.
ಪ್ರಿಯಾಂಕ್ ಸರ್ವ ಇಲಾಖೆಯ ಸಚಿವರು..!
ಪ್ರಿಯಾಂಕ್ ಖರ್ಗೆಯವರ ಇಲಾಖೆ ಗ್ರಾಮೀಣಾಭಿವೃದ್ಧಿ ಮತ್ತು ಐ.ಟಿ.-ಬಿ.ಟಿ. ಮಾತ್ರವಲ್ಲ, ಅವರು ಸರ್ವ ಇಲಾಖೆಯ ಸಚಿವರು. ಸದನದಲ್ಲಿ ಗೃಹ ಸಚಿವರಿದ್ದರೂ, ಸಿಎಂ ಕುರಿತು ಪ್ರಶ್ನೆ ಇದ್ದರೂ ಅವರ ಪರವಾಗಿ ಇವರು ಎದ್ದೇಳುತ್ತಾರೆ; ಗಲಾಟೆ ಮಾಡುತ್ತಾರೆ ಎಂದು ವಿಜಯೇಂದ್ರ ಟೀಕಿಸಿದರು.
ಆತ್ಮಹತ್ಯೆ ಭಾಗ್ಯ ನೀಡಿದ ಕಾಂಗ್ರೆಸ್ ಸರಕಾರ..!
ರಾಜ್ಯದ ಕಾಂಗ್ರೆಸ್ ಸರಕಾರದ ಆಡಳಿತಾವಧಿಯಲ್ಲಿ ಸರಕಾರಿ ಪ್ರಾಯೋಜಿತ ಆತ್ಮಹತ್ಯೆಗಳು ಅಥವಾ ರಾಜ್ಯ ಸರಕಾರದ ಕುಮ್ಮಕ್ಕಿನ ಆತ್ಮಹತ್ಯೆ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿದೆ. ಸರಕಾರ, ಸಚಿವರು, ಆಡಳಿತ ಪಕ್ಷದ ಶಾಸಕರ ಕುಮ್ಮಕ್ಕಿನಿಂದ ಹಿಂದೆಂದೂ ಇಂತಹ ಸರಣಿ ಆತ್ಮಹತ್ಯೆ ಪ್ರಕರಣಗಳನ್ನು ಕೇಳಿರಲಿಲ್ಲ; ನೋಡಿರಲಿಲ್ಲ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಬಳಿಕ ರಾಜ್ಯ ಸರಕಾರವು ಆತ್ಮಹತ್ಯೆ ಭಾಗ್ಯವನ್ನು ಕರ್ನಾಟಕ ರಾಜ್ಯಕ್ಕೆ ದಯಪಾಲಿಸಿದೆ ಎಂದು ವಿಜಯೇಂದ್ರ ಆಕ್ಷೇಪಿಸಿದರು.