ಸಕಲೇಶಪುರ | ದಲಿತ ಯುವಕರಿಗೆ ಹಲ್ಲೆ ಆರೋಪ: ಐವರ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು
ಹಲ್ಲೆಗೊಳಗಾದ ಯುವಕ
ಸಕಲೇಶಪುರ: ಮೂತ್ರ ವಿಸರ್ಜನೆ ಮಾಡಿದ ಕಾರಣಕ್ಕೆ ಇಬ್ಬರು ದಲಿತ ಯುವಕರ ಮೇಲೆ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಚಂಗಡಿಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ.
ಭರತ್ (22) ಮತ್ತು ವಿಶ್ವನಾಥ್( 28) ಹಲ್ಲೆಗೊಳಗಾಗಿರುವ ಯುವಕರಾಗಿದ್ದು, ಸಚಿನ್, ಉದಯ್, ಪ್ರತಾಪ್, ಮಧು, ಶರತ್ ವಿರುದ್ಧ ಯಸಳೂರು ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸ್ ದಾಖಲಾಗಿದೆ.
ಪಟನೆ ವಿವರ: ರವಿವಾರ ರಾತ್ರಿ 8.30ರ ಸುಮಾರಿಗೆ ಭರತ್ ಮತ್ತು ವಿಶ್ವನಾಥ್ ಚಂಗಡಿಹಳ್ಳಿ ಗ್ರಾಮದ ಪೃಥ್ವಿ ಹೋಟೆಲ್ ಸಮೀಪ ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ, ಹೋಟೆಲ್ ಬಳಿ ಇದ್ದ ಆರೋಪಿಗಳಾದ ಸಚಿನ್, ಉದಯ್, ಪ್ರತಾಪ್, ಮಧು ಎಂಬವರ ಗುಂಪು ಭರತ್ ಮತ್ತು ವಿಶ್ವನಾಥ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಲ್ಲೆಗೊಳಗಾಗಿರುವ ಭರತ್ ಮತ್ತು ವಿಶ್ವನಾಥ್ ನನ್ನು ಸ್ಥಳೀಯರು ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರತಿದೂರು ದಾಖಲು
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ನೀಡಿದ ದೂರಿನ ಅನ್ವಯ, ಹಲ್ಲೆಗೆ ಒಳಗಾದ ಯುವಕರ ವಿರುದ್ಧವೂ ಪ್ರತಿದೂರು ದಾಖಲಿಸಲಾಗಿದೆ.