ಸಕಲೇಶಪುರ | ಅರೆವಳಿಕೆ ಮದ್ದು ನೀಡಲು ತೆರಳಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಕಾಡಾನೆ ದಾಳಿ: ಗಂಭೀರ ಗಾಯ
ಸಕಲೇಶಪುರ /ಆಲೂರು : ಅರೆವಳಿಕೆ ಮದ್ಧು ನೀಡಲು ಮುಂದಾದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಕಾಡಾನೆ ದಾಳಿ ನಡೆಸಿದ್ದು, ಪರಿಣಾಮ ಸಿಬ್ಬಂದಿ ಗಂಭೀರ ಗಾಯಗೊಂಡಿರುವ ಘಟನೆ ಸಕಲೇಶಪುರದ ಆಲೂರು ಸಮೀಪ ಹಳ್ಳಿಯೂರಿನಲ್ಲಿ ಗುರುವಾರ ವರದಿಯಾಗಿದೆ.
ಗಾಯಗೊಂಡ ಸಿಬ್ಬಂದಿಯನ್ನು ಅರಣ್ಯ ಇಲಾಖೆಯ ಶಾರ್ಪ್ ಶೂಟರ್ ವೆಂಕಟೇಶ್ ಎಂದು ಗುರುತಿಸಲಾಗಿದೆ.
ಸಕಲೇಶಪುರ ಆಲೂರು ತಾಲೂಕಿನಲ್ಲಿ ಗಾಯಗೊಂಡು ತಿರುಗಾಡುತ್ತಿದ್ದ ಕಾಡಾನೆ ʼಭೀಮʼನಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಅರಣ್ಯ ಇಲಾಖೆ ಮುಂದಾಗಿದ್ಧು, ಈ ಹಿನ್ನೆಲೆಯಲ್ಲಿ ಆಲೂರು ಸಮೀಪದ ಹಳ್ಳಿಯೂರಿನಲ್ಲಿ ಕಾಡಾನೆಗೆ ಅರೆವಳಿಕೆ ಮದ್ಧು ನೀಡಲು ಶಾರ್ಪ್ ಶೂಟರ್ ವೆಂಕಟೇಶ್ ಮುಂದಾಗಿದ್ದಾರೆ. ಈ ವೇಳೆ ಏಕ ಏಕಿ ಬಂದ ಕಾಡಾನೆ ವೆಂಕಟೇಶ್ ರವರನ್ನು ತುಳಿದು ಹಾಕಿದೆ ಎಂದು ಹೇಳಲಾಗಿದೆ.
ಇದರಿಂದ ವೆಂಕಟೇಶ್ ಗಂಭೀರ ಗಾಯಗೊಂಡಿದ್ಧು, ಹಾಸನದ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಹಾಸನ ಅರಣ್ಯ ವಿಭಾಗದ ಆಲೂರು, ಬೇಲೂರು. ಯಸಳೂರು. ಸಕಲೇಶಪುರ ಮತ್ತು ಅರಕಲಗೂಡು ವಲಯ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದ ಭೀಮ ಕಾಡಾನೆಗೆ ಇತರೆ ಕಾಡಾನೆಗಳು ಆಗಸ್ಟ್ ಎರಡನೇ ವಾರದಲ್ಲಿ ದಾಳಿ ಮಾಡಿರುವುದರಿಂದ ತೀವ್ರವಾಗಿ ಗಾಯಗೊಂಡಿತ್ತು. ಕಾಡಾನೆಗೆ ಆ.25 ರಂದು ಚಿಕಿತ್ಸೆ ನೀಡಲಾಗಿದ್ದು, ಗಾಯಗಳು ವಾಸಿಯಾಗದೇ ಉಲ್ಬಣಗೊಂಡಿರುವುದರಿಂದ ಹೆಚ್ಚಿನ ಚಿಕಿತ್ಸೆ ನೀಡುವ ಕಾರ್ಯಾಚರಣೆ ಕೈಗೊಳ್ಳಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ) ಅನುಮತಿ ನೀಡಿದ್ದರು.