ಸಕಲೇಶಪುರ | ಪಶ್ಚಿಮ ಘಟ್ಟದ ಅಂಚಿನಲ್ಲೊಂದು ಕಾಗಿನಹರೆ ಚಿಕ್ಕ ಕೋಟೆ
ಟಿಪ್ಪು ಸುಲ್ತಾನ್ ಕಟ್ಟಿಸಿದ ಕೋಟೆ ಶಿಥಿಲಾವಸ್ಥೆಯಲ್ಲಿ
ಹಾಸನ: ಸಕಲೇಶಪುರ (Sakleshpura) ತಾಲೂಕಿನ ಪಶ್ಚಿಮ ಘಟ್ಟದ ಅಂಚಿನಲ್ಲಿರುವ ಗ್ರಾಮ ಕಾಗಿನಹರೆ. ಹೊಂಗಡಹಳ್ಳದ ಹತ್ತಿರವಿರುವ ಕಾಗಿನಹರೆ ಗುಡ್ಡದ ಮೇಲೆ ಟಿಪ್ಪು ಸುಲ್ತಾನ್ ಚಿಕ್ಕ ಕೋಟೆಯನ್ನು ಕಟ್ಟಿಸಿದ್ದಾರೆ. ಇಲ್ಲಿಯ ಎತ್ತರವಾದ ಬೋಳು ಗುಡ್ಡ ಪರಿಸರವು ಹಸಿರಿನಿಂದ ನೋಡುಗರನ್ನು ಆಕರ್ಷಿಸುತ್ತದೆ.
ಕೊಡಗು ಮತ್ತು ದಕ್ಷಿಣ ಕನ್ನಡಕ್ಕೆ ನಿಕಟವಾದಂತಿರುವ ಈ ಸ್ಥಳದಲ್ಲಿ ಕೋಟೆಯನ್ನು ಸುಮಾರು 1792ರಲ್ಲಿಯೇ ಕಟ್ಟಿಸಿ ಅಲ್ಲಿ ಚಿಕ್ಕ ಸೈನ್ಯ ಪಡೆಯನಿಟಿದ್ದರು.
ಶಿಥಿಲಗೊಂಡ ಈ ಕೋಟೆಯು 80 ಅಡಿ ಉದ್ದ 60 ಅಡಿ ಅಗಲವಾಗಿದ್ದು, ಸ್ಥಳೀಯ ಕಲ್ಲುಗಳಿಂದ ಮಣ್ಣನ್ನು ಹಾಕಿ ಕಟ್ಟಿಸಲಾಗಿದೆ. ಸುತ್ತಲೂ 6ಅಡಿ ಕಂದಕವಿದ್ದು ಈ ಪ್ರವೇಶದಲ್ಲಿ ಮಾತ್ರ ಹೋಗಲು ದಾರಿ ಇದೆ. ಪ್ರವೇಶಗೊಂಡ ತಕ್ಷಣವೇ 5 ಅಡಿ ಎತ್ತರ ತಡೆಗೋಡೆಯನ್ನು ಹಾಕಲಾಗಿದೆ.
ಹಿಂಭಾಗದಲ್ಲಿ 50X40 ಅಡಿ ಅಗಲದ ಇನ್ನೊಂದು ಕೋಟೆಯ ಆಕಾರದ ಸ್ಥಳವಿದ್ದು ಇದನ್ನು ಸೈನಿಕರ ತಂಗುವಿಕೆಗಾಗಿ ಯೂ ಮದ್ದುಗುಂಡುಗಳನ್ನು ಸಂಗ್ರಹಸಿ ಇಡಲಿಕ್ಕಾಗಿ ಮಾಡಲಾಗಿತ್ತು. ಅಂದಿನ ದಿನಗಳಲ್ಲಿ ಮಂಗಳೂರು ಕಡೆಯಿಂದ ಹಡಗಿನಲ್ಲಿ ಬಂದು ಮೈಸೂರು ಸೀಮೆಗೆ ಬರುವ ಬ್ರಿಟಿಷರನ್ನು ಸದೆ ಬಡಿಯಲು ಈ ಕೋಟೆ ನಿರ್ಮಾಣವಾಗಿದೆ.
ಹಸಿರಿನಿಂದ ಕಂಗೊಳಿಸುತ್ತಿರುವ ಇಲ್ಲಿಯ ಬೆಟ್ಟ, ಗುಡ್ಡ, ದಿಣ್ಣೆ ಕಾಡುಗಳ ನಡುವೆ ಆಗಸದಲ್ಲಿ ವಿವಿಧ ಭಂಗಿಗಳಲ್ಲಿ ನರ್ತಿಸಿದಂತೆ ಚಲಿಸುವ ಮೋಡಗಳ ಪ್ರಕೃತಿಯ ಮನಮೋಹಕ ದೃಶ್ಯ ಕಾಗಿನಹರೆಯಲ್ಲಿ ಕಣ್ಣಿಗೆ ಹಬ್ಬವುಂಟು ಮಾಡುತ್ತದೆ. ರಕ್ಷಿತಾರಣ್ಯ ಪ್ರದೇಶಗಳಲ್ಲಿ ಪ್ರಕೃತಿಯು ಹಸಿರು ಸೀರೆಯುಟ್ಟಂತೆ ಕಂಗೊಳಿಸುತ್ತಾಳೆ. ಮುಗಿಲಿಗೆ ಮುಖಮಾಡಿ ನಿಂತಿರುವ ಬೆಟ್ಟದ ಮೇಲೆ ಶ್ವೇತಧಾರಿಯಂತೆ ಮೋಡಗಳ ನೈಸರ್ಗಿಕ ಸೌಂದರ್ಯ ಕಣ್ಣುಂಬಿಕೊಳ್ಳಲು ಪ್ರವಾಸಿಗರನ್ನು ಈ ಪ್ರದೇಶ ಆಕರ್ಷಿಸುತ್ತದೆ.
ಇತಿಹಾಸದ ಪುಟದಲ್ಲಿ ದಾಖಲು
ಮಂಜರಾಬಾದ್ ಕೋಟೆಯಷ್ಟು ದೊಡ್ಡದಾಗಿರದೆ ಕಟ್ಟಡದ ಶೈಲಿ ಮತ್ತು ಯೋಜನೆಗಳಿಗಾಗಿ ಟಿಪ್ಪು ಇದನ್ನು ಕಟ್ಟಿಸಿದ್ದಾನೆಂದು ಸ್ಪಷ್ಟವಾಗುತ್ತದೆ. ಇತಿಹಾಸಕಾರ ದಿವಂಗತ ಚಂದ್ರಶೇಖರ ದೋಳೆಕರ್ ಈ ಕೋಟೆಯ ಬಗ್ಗೆ 'ಸಕಲೇಶಪುರ ಇತಿಹಾಸ' ಕೃತಿಯಲ್ಲಿ ದಾಖಲಿಸಿದ್ದಾರೆ.