ಶಿವಮೊಗ್ಗ ರೈಲು ನಿಲ್ಜಾಣದ ಬಳಿ ಸಿಕ್ಕ ಬಾಕ್ಸ್‌ಗಳಲ್ಲಿ ಇದ್ದದ್ದು ಉಪ್ಪು; ಸ್ಫೋಟಕ ವಸ್ತುಗಳಲ್ಲ: ಎಸ್ಪಿ ಸ್ಪಷ್ಟನೆ
ಶಿವಮೊಗ್ಗ: 'ಇಲ್ಲಿನ ರೈಲು ನಿಲ್ದಾಣದ ಪಾರ್ಕಿಂಗ್ ಸ್ಥಳದ ಸಮೀಪ ಅನುಮಾನಾಸ್ಪದವಾಗಿ ಇಟ್ಟಿದ್ದ ಎರಡು ಕಬ್ಬಿಣದ ಬಾಕ್ಸ್‌ಗಳಲ್ಲಿ ಇಡಲಾಗಿದ್ದ ಬಿಳಿ ಬಣ್ಣದ ಪುಡಿ ಉಪ್ಪು' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ತಿಳಿಸಿದ್ದಾರೆ.
ನಿನ್ನೆ (ರವಿವಾರ) ಪತ್ತೆಯಾಗಿದ್ದ ಎರಡು ಬಾಕ್ಸ್‌ಗಳ ಕುರಿತು ತೀವ್ರ ಅನುಮಾನ ವ್ಯಕ್ತವಾಗಿತ್ತು. ಈ ಹಿನ್ನೆಲೆ ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಆಗಮಿಸಿತ್ತು. ಹಲವು ಬಾರಿ ಪ್ರಯತ್ನಿಸಿದರೂ ಬಾಕ್ಸ್ ತೆರೆಯಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆ ಸ್ಪೋಟಕ ಅಳವಡಿಸಿ ರಾತ್ರಿ 2.40ಕ್ಕೆ ಮೊದಲ ಬಾರಿ ಸ್ಪೋಟಿಸಿ ಒಂದು ಬಾಕ್ಸ್ ನ ಬೀಗ ತೆರೆಯಲಾಯಿತು. ಅದರಲ್ಲಿ ಕೆಲವು ಪತ್ರಿಕೆಗಳು, ಬಿಳಿ ಬಣ್ಣದ ಪುಡಿ ಇರುವ ಪ್ಯಾಕೆಟ್ ದೊರೆತಿದೆ. ರಾತ್ರಿ 3.24ಕ್ಕೆ ಎರಡನೇ ಬಾರಿ ಸ್ಪೋಟಿಸಿ ಮತ್ತೊಂದು ಬಾಕ್ಸ್ ತೆರೆದಾಗ, ಅದರಲ್ಲಿಯು ಪತ್ರಿಕೆ ಮತ್ತು ಬಿಳಿ ಬಣ್ಣದ ಪುಡಿ ಪತ್ತೆಯಾಗಿತ್ತು.
ಟ್ರಂಕ್ ಮತ್ತು ಬಿಳಿ ಬಣ್ಣದ ಪೌಡರ್ ಇರುವ ಚೀಲಗಳನ್ನು ಬಾಂಬ್ ನಿಷ್ಕ್ರಿಯ ದಳ ವಶಕ್ಕೆ ಪಡೆದು ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು.
''ಅನುಮಾನಾಸ್ಪದ ಬಾಕ್ಸ್‌ಗಳ ಕುರಿತು ತಜ್ಞರ ತಂಡ ಪರಿಶೀಲಿಸಿದೆ. ಅವುಗಳನ್ನು ತೆರೆದಿದ್ದು ಕೆಲವು ರದ್ದಿ ವಸ್ತುಗಳು ಪತ್ತೆಯಾಗಿವೆ. ಬಾಕ್ಸ್‌ಗಳಲ್ಲಿ ಯಾವುದೇ ಸ್ಫೋಟಕ ವಸ್ತು ಇರಲಿಲ್ಲ. ಅವುಗಳನ್ನು ಸ್ಥಳದಿಂದ ರವಾನಿಸಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಅದು ಉಪ್ಪು ಎಂದು ತಿಳಿದು ಬಂದಿದೆ''
- ಮಿಥುನ್ ಕುಮಾರ್ ಜಿ.ಕೆ ಎಸ್ಪಿ, ಶಿವಮೊಗ್ಗ