ಮರಳು, ಜಲ್ಲಿ ಸಾಗಾಣೆ; ವಾಹನಗಳಿಗೆ ಟಾರ್ಪಲಿನ್ ಹೊದಿಕೆ ಮುಚ್ಚದಿದ್ದರೆ ದಂಡ: ಸಚಿವ ಮಲ್ಲಿಕಾರ್ಜುನ್
ಬೆಳಗಾವಿ: ‘ಮರಳು, ಜಲ್ಲಿಕಲ್ಲು, ಇಟ್ಟಿಗೆ ಮತ್ತು ಇತರೆ ಧೂಳು ತರುವ ಸಾಗಾಣಿಕೆ ವಾಹನಗಳ ಮೇಲೆ ಟಾರ್ಪಲಿನ್ ಹೊದಿಕೆ ಮುಚ್ಚದ ವಾಹನಗಳಿಗೆ ದಂಡ ವಿಧಿಸಲಾಗುತ್ತಿದೆ’ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಎನ್.ಶ್ರೀನಿವಾಸಯ್ಯ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಅವರು, ಜಿಲ್ಲಾ ಟಾಸ್ಕ್ ಫೋರ್ಸ್ ನಿರ್ಣಯದಂತೆ ರಸ್ತೆಗಳಲ್ಲಿ ಬೀಳುವ ಜೆಲ್ಲಿ ಮತ್ತು ಎಂ-ಸ್ಯಾಂಡ್ ಅನ್ನು ಮಾನವ ಶ್ರಮದಿಂದ ತೆರವುಗೊಳಿಸಲು ಕ್ರಶರ್ಸ್ ಘಟಕಗಳ ಮಾಲಕರುಗಳಿಗೆ ಸೂಚಿಸಲಾಗಿದೆ ಎಂದರು.
ಅಲ್ಲದೆ, ಧೂಳು ನಿವಾರಣೆಗಾಗಿ ರಸ್ತೆಗೆ ದಿನಕ್ಕೆ 2 ಬಾರಿ ನೀರು ಸಿಂಪಡಣೆ ಮಾಡಲಾಗುತ್ತಿದೆ. ಬೆಂಗಳೂರು ನಗರ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಸಭೆಯಲ್ಲಿ ಚರ್ಚಿಸಿ ರಸ್ತೆಯಲ್ಲಿ ಬೀಳುವ ಜಲ್ಲಿ ಮತ್ತು ಎಂ-ಸ್ಯಾಂಡ್ ತೆರವುಗೊಳಿಸುವ ಯಂತ್ರವನ್ನು ಖರೀದಿಸಲಾಗಿದೆ. ಕಾರ್ಯಾನುಷ್ಠಾನಗೊಳಿಸಲು ಜಿಲ್ಲಾ ಪಂಚಾಯಿತಿಯಿಂದ ಅಂದಾಜುಪಟ್ಟಿ ಪಡೆದು ಕ್ರಿಯಾಯೋಜನೆ ತಯಾರಿಸಲಾಗಿದ್ದು, ಆಡಳಿತಾತ್ಮಕ ಅನುಮೋದನೆಗೆ ಕ್ರಮ ವಹಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯ ಇಲಾಖೆಗಳಾದ ಸಾರಿಗೆ ಮತ್ತು ಪೊಲೀಸ್ ಇಲಾಖೆಗಳು ಜಂಟಿ ಕಾರ್ಯಾಚರಣೆ ನಡೆಸಿ ದಂಡ ವಿಧಿಸುತ್ತಿದ್ದಾರೆ. ಆಗಾಗ್ಗೆ ಗೃಹರಕ್ಷಕ ಸಿಬ್ಬಂದಿಗಳನ್ನು ನಿಯೋಜಿಸಿ ಟಾರ್ಪಲಿನ್ ಹೊದಿಕೆ ಹಾಕಿಸಲಾಗುತ್ತಿದೆ. ಸಾರಿಗೆ ಇಲಾಖೆ ಈ ಕುರಿತು ಸುತ್ತೋಲೆ ರವಾನಿಸಿದೆ. ಬೆಂಗಳೂರು ದಕ್ಷಿಣ ತಾಲೂಕಿನ ಚಿತ್ತನಹಳ್ಳಿ ಗ್ರಾಮದಿಂದ ನಾಗಾಪಟ್ಟಣದ ಗ್ರಾಮದವರೆಗೆ ಉಪ ಖನಿಜ ಸಾಗಿಸುವ ವಾಹನಗಳ ಮೇಲೆ ನಿಗಾ ಇರಿಸಲಾಗಿದೆ ಎಂದು ಹೇಳಿದರು.