ಸಣ್ಣ ಬಜೆಟ್ ಸಿನೆಮಾಗಳಿಗೆ ಥಿಯೇಟರ್ ಕೊಡಿಸುವ ಕೆಲಸವಾಗಲಿ : ಸಂತೋಷ್ ಲಾಡ್
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ

ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಸಣ್ಣ ಬಜೆಟ್ ಸಿನೆಮಾಗಳಿಗೆ ಥಿಯೇಟರ್ ಕೊಡಿಸುವ ಕೆಲಸವಾಗಬೇಕು ಎಂದು ಕಾರ್ಮಿಕ ಸಚಿವ ಸಂತೋಷ್‍ಲಾಡ್ ತಿಳಿಸಿದ್ದಾರೆ.
ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುಲೋಚನಾ ಸಭಾಂಗಣದಲ್ಲಿ ಕರ್ನಾಟಕ ಚಲನಚಿತ್ರ ಅಕಾಡಮಿಯ ವತಿಯಿಂದ ಆಯೋಜಿಸಿದ್ದ 16ನೇ ಬೆಂಗಳೂರು ಅಂತರ್ ರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.
ಭಾರತದಲ್ಲಿ 10 ಸಾವಿರ ಸ್ಕ್ರೀನ್‍ಗಳು ಇವೆ. ಅದರಲ್ಲಿ ದಕ್ಷಿಣ ಭಾರತದಲ್ಲಿ 5 ರಿಂದ 6 ಸಾವಿರ ಸ್ಕ್ರೀನ್ ಇವೆ. ಪ್ರಪಂಚಕ್ಕೆ ಹೋಲಿಸಿಕೊಂಡರೆ ನಾವು ವರ್ಷಕ್ಕೆ 1500 ಸಿನಿಮಾ ಮಾಡುತ್ತೇವೆ. ಅದರಲ್ಲಿ ಕರ್ನಾಟಕ ಬಹಳಷ್ಟು ಬಾರಿ ಪ್ರಥಮದಲ್ಲಿದೆ ಎಂದು ಮಾಹಿತಿ ನೀಡಿದರು.
ಸಿನಿಮಾದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಇಲ್ಲ. ಅದಕ್ಕಾಗಿ ಸಿನಿ ಬಿಲ್ ತಂದಿದ್ದೇವೆ. ತುಳು ಭಾಷೆಗೆ ಥಿಯೇಟರ್‌ಗಳೇ ಸಿಗುವುದಿಲ್ಲ. ಅದು ಅಲ್ಲಿನ ಜನರ ಮಾತೃಭಾಷೆ ಅದನ್ನು ಉಳಿಸಬೇಕು. ಪ್ರತಿಯೊಂದು ಮಾತೃ ಭಾಷೆಗೆ ಬೇಕಾದ ವೇದಿಕೆ ನೀಡಬೇಕು ಎಂದು ಅಭಿಪ್ರಾಯಪಟ್ಟರು.
ದೇಶದ ಅಭಿವೃದ್ಧಿಯನ್ನು ಮಹಿಳೆಯರ ಸಾಧನೆಗಳ ಮೂಲಕ ಅಳೆಯಬೇಕು ಎಂಬ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ನುಡಿಗಳನ್ನು ಸ್ಮರಿಸಿದ ಅವರು, ಮಹಿಳೆಗೆ ಆಸ್ತಿಯಲ್ಲಿ ಸಮಾನ ಹಕ್ಕು, ಸ್ವಾತಂತ್ರ್ಯ ಕಲ್ಪಿಸಲು, ಮಾತೃತ್ವ ರಜೆ, ವಿಚ್ಛೇದನ ಹಕ್ಕುಗಳನ್ನು ಸಂವಿಧಾನ ಮೂಲಕ ನೀಡಿದ ಶ್ರೇಯಸ್ಸು ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಎಲ್ಲ ಮಹಿಳೆಯರು ಅವರನ್ನು ಸ್ಮರಿಸಬೇಕು. ಹಿಂದೂ ಕೋಡ್ ಬಿಲ್ ಜಾರಿಗೆ ಆಗ್ರಹಿಸಿ ಕೇಂದ್ರದ ಮಂತ್ರಿಸ್ಥಾನಕ್ಕೆ ಅಂಬೇಡ್ಕರ್ ಅವರು ರಾಜೀನಾಮೆ ನೀಡಿದ್ದರು, ಅವರು ಕೇವಲ ಎಸ್ ಸಿ ಹಾಗೂ ಎಸ್‍ಟಿ ಗಳಿಗೆ ಸೀಮಿತವಲ್ಲ ಎಂದು ಸಚಿವ ಸಂತೋಷ ಲಾಡ್ ಅಭಿಪ್ರಾಯಪಟ್ಟರು.
ಕರ್ನಾಟಕ ಚಲನಚಿತ್ರ ಅಕಾಡಮಿಯ ಅಧ್ಯಕ್ಷ ಡಾ.ಸಾಧುಕೋಕಿಲ ಮಾತನಾಡಿ, ಹಿಂದಿನ ವರ್ಷದ ಅಂತರ್ ರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಹೋಲಿಸಿದರೆ ಈ ವರ್ಷ ಶೇ.32.40 ವೀಕ್ಷಕರು ಹೆಚ್ಚಾಗಿದ್ದಾರೆ. ಈ ವರೆಗೆ 52 ಸಾವಿರ ಜನ ಸಿನೆಮಾವನ್ನು ವೀಕ್ಷಿಸಿದ್ದಾರೆ. ಕಳೆದ ವರ್ಷ 2000 ನೋಂದಣಿಯಾಗಿತ್ತು. ಈ ವರ್ಷ 4317 ನೋಂದಣಿಯಾಗಿದೆ ಎಂದು ಮಾಹಿತಿ ನೀಡಿದರು.
ನೇರವಾಗಿ ಹೇಳುವುದು ನಮ್ಮ ಒಳ್ಳೇಯದಕ್ಕೆ ಮುಂದೆ ಹೊಗಳಿ ಹಿಂದೆ ತೆಗಳುವುದು ಅಪಾಯಕಾರಿ. ಮುಂದಿನ ವರ್ಷ 17ನೇ ಅಂತರ್ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಹೊಸ ಚಿಂತನೆಯೊಂದಿಗೆ ಎಲ್ಲರೂ ಸೇರಿ ಮತ್ತೆ ಸಂಭ್ರಮಿಸೋಣ ಎಂದು ತಿಳಿಸಿದರು.
16ನೇ ಅಂತರ್ ರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿ-ನಟ ಕಿಶೋರ್ ಕುಮಾರ್.ಜಿ ಮಾತನಾಡಿ, ನಮಗೆಲ್ಲ ಇತಿಹಾಸದ ಬಗ್ಗೆ ಹೆಮ್ಮೆ. ಐತಿಹಾಸಿಕ ವ್ಯಕ್ತಿಗಳ ಬಗ್ಗೆಯೂ ಹೆಮ್ಮೆ. ಬದಲಾವಣೆಯ ಹರಿಕಾರರ ಬಗ್ಗೆ ಬಹಳ ಹೆಮ್ಮೆ, ಆ ಧಾವಂತದಲ್ಲಿ ನಮ್ಮ ಆತ್ಮ ವಿಮರ್ಶೆ ಮಾಡಿಕೊಳ್ಳುವುದನ್ನು ಮರೆತು ಹೋಗುತ್ತಿದ್ದೇವೆ. 100-200 ವರ್ಷಗಳ ಹಿಂದಿನ ವಿಷಯಗಳು ಇವತ್ತಿಗೂ ಪ್ರಸ್ತುತ ಎನ್ನುವುದಾದರೆ, ನಾವಿನ್ನೂ ಹಾಗೇ ಇದ್ದೇವೆ ಎಂದು ಹೇಳಿದರು.
ಇದೇ ವೇಳೆ 16ನೇ ಬೆಂಗಳೂರು ಅಂತರ್ ರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಯಾದ ಹೆಸರಾಂತ ನಟಿ ಶಬಾನಾ ಅಜ್ಮೀ ಪರವಾಗಿ ಅವರ ಬಾಲ್ಯದ ಗೆಳತಿ ಕಲಾವಿದೆ ಅರುಂಧತಿ ನಾಗ್ ಅವರು ಪ್ರಶಸ್ತಿ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸರಕಾರದ ಕಾರ್ಯದರ್ಶಿ ಬಿ.ಬಿ.ಕಾವೇರಿ, ಚಲನಚಿತ್ರ ಅಕಾಡಮಿಯ ಅಕಾಡೆಮಿಯ ರಿಜಿಸ್ಟ್ರಾರ್ ಹಿಮಂತ್‍ರಾಜು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್.ಎಂ ನಿಂಬಾಳ್ಕರ್, ಜಂಟಿ ನಿರ್ದೆಶಕ ಮಂಜುನಾಥ ಡೊಳ್ಳಿನ ಮತ್ತಿತರರು ಹಾಜರಿದ್ದರು.
ಇಲ್ಲಿ ಯಾರ ವಿರುದ್ಧವೂ ಹೋರಾಟ ಇಲ್ಲ :
ಇವತ್ತಿನ ಪರಿಸ್ಥಿತಿಯಲ್ಲಿ ನಾವು ಇತಿಹಾಸ ಏನು ಎನ್ನುವುದು ಗುರುತಿಸಿ, ಅಧಿಕಾರದಲ್ಲಿ ಇರುವವರಿಗೆ ಹೇಳಿಕೊಡಬೇಕಾಗಿದೆ. ಸತ್ಯವನ್ನು ದೈರ್ಯವಾಗಿ ಹೇಳುವುದಕ್ಕೆ ಮೂಢ ನಂಬಿಕೆಗಳನ್ನು ಒರೆಗೆ ಹಚ್ಚಿ ತಿದ್ದಲು ಈ ರೀತಿಯ ನಾಯಕರು ತುಂಬಾ ಅವಶ್ಯ. ಇಲ್ಲಿ ಯಾರ ವಿರುದ್ಧವೂ ಹೋರಾಟ ಇಲ್ಲ. ಇದು ಎಲ್ಲರನ್ನೂ ಒಳಗೊಳ್ಳುವ ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸುವ ಪ್ರಕ್ರಿಯೆ. ಪುರಾಣವನ್ನು ಪುರಾಣವನ್ನಾಗಿ, ಇತಿಹಾಸವನ್ನ ಇತಿಹಾಸವಾಗಿ ನೋಡ್ತಾನೇ ಇತಿಹಾಸದ ತಪ್ಪುಗಳಿಗೆ ಇಂದಿನ ಪೀಳಿಗೆಗೆ ಶಿಕ್ಷೆ ನೀಡದೇ ಕಠೋರ ಸತ್ಯವನ್ನು ದೃಢವಾದ ದ್ವನಿಯಲ್ಲಿ ಮನಕರಗಿಸುವ ಮೈನವರೇಳಿಸುವ ನಗಿಸುವ ಕಥೆಗಳ ಮೂಲಕ ಶಿಕ್ಷಣದಿಂದ ಕಲಿಯುವ ದಾರಿ ತೋರಿಸುವ ಈ ವಿಧಾನಕ್ಕಿಂತ ಬೇರೆ ಸಂವಿಧಾನಿಕ ಮಾರ್ಗ ಸಿಗಲಾರದು ಎನಿಸುತ್ತದೆ.
ಕಿಶೋರ್ ಕುಮಾರ್ ಜಿ., ಚಲನಚಿತ್ರೋತ್ಸದ ರಾಯಭಾರಿ
ಏಷಿಯನ್ ಸಿನಿಮಾ ಸ್ಪರ್ಧೆ: ಅತ್ಯುತ್ತಮ ಸಿನಿಮಾ-ಇನ್ ದ ಲ್ಯಾಂಡ್ ಆಫ್ ಬರ್ದರ್ಸ್, ಎರಡನೆ ಅತ್ಯುತ್ತಮ ಸಿನಿಮಾ-ರೀಡಿಂಗ್ ಲೊಲಿತಾ ಇನ್ ಟೆಹ್ರಾನ್, ಮೂರನೇ ಅತ್ಯುತ್ತಮ ಸಿನಿಮಾ-ಸಬಾ. ಜ್ಯೂರಿ ವಿಶೇಷ: ಫೆಮಿಂಚಿ ಫಾತಿಮಾ, ಪೈರೆ.
ಭಾರತೀಯ ಸಿನಿಮಾ ಸ್ಪರ್ಧೆ: ಅತ್ಯುತ್ತಮ ಸಿನಿಮಾ-ಹ್ಯೂಮನ್ಸ್ ಇನ್ ದ ಲೂಪ್, ಎರಡನೆ ಅತ್ಯುತ್ತಮ ಸಿನಿಮಾ-ಲೆವೆಲ್ ಕ್ರಾಸ್ ಹಾಗೂ ಮೂರನೇ ಅತ್ಯುತ್ತಮ ಸಿನಿಮಾ-ಸ್ವಾಹಾ.
ಅಂತರ್ ರಾಷ್ಟ್ರೀಯ ಚಲನಚಿತ್ರ ವಿಮರ್ಶಕರ ಒಕ್ಕೂಟ ಪ್ರಶಸ್ತಿ: ಹ್ಯೂಮನ್ಸ್ ಇನ್ ದ ಲೂಪ್.
ಕನ್ನಡ ಸಿನಿಮಾ ಸ್ಪರ್ಧೆ: ಅತ್ಯುತ್ತಮ ಸಿನಿಮಾ-ಮಿಕ್ಕ ಬಣ್ಣದ ಹಕ್ಕಿ, ಎರಡನೇ ಅತ್ಯುತ್ತಮ ಸಿನಿಮಾ-ಪಿದಾಯಿ, ಮೂರನೇ ಅತ್ಯುತ್ತಮ ಸಿನಿಮಾ-ದಸ್ಕತ್.
ನೆಟ್ ಪ್ಯಾಕ್ ಜ್ಯೂರಿ ಪ್ರಶಸ್ತಿ: ಲಚ್ಚಿ.