ಕಾಂಗ್ರೆಸ್ ಪಕ್ಷಕ್ಕೆ ಮತ ತರುವ ಸಾಮರ್ಥ್ಯ ಇರುವವರಿಗೆ ಅಧ್ಯಕ್ಷ ಸ್ಥಾನ ನೀಡಿ: ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ
ಬೆಂಗಳೂರ : ‘ತನ್ನನ್ನೇ ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಎಂದು ನಾನು ಕೇಳಿಲ್ಲ. ಆದರೆ, ಪಕ್ಷಕ್ಕೆ ಮತ ತರುವ ಸಾಮರ್ಥ್ಯ ಇರುವವರಿಗೆ ಅಧ್ಯಕ್ಷ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಹೇಳಿದ್ದೇನೆ’ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷ ಸಂಘಟನೆ ವಿಚಾರವಾಗಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಚರ್ಚಿಸಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರವಾಗಿಯೂ ಚರ್ಚಿಸಿ, ನನ್ನ ಅಭಿಪ್ರಾಯವನ್ನೂ ಉಸ್ತುವಾರಿಗೆ ತಿಳಿಸಿದ್ದೇನೆ’ ಎಂದು ಮಾಹಿತಿ ನೀಡಿದರು.
‘ಯಾರನ್ನೇ ಅಧ್ಯಕ್ಷರನ್ನಾಗಿ ಮಾಡಿದರು ಪಕ್ಷ ಸಂಘಟಿಸುವ, ಮತ ತರುವ ಸಾಮರ್ಥ್ಯ ಇರುವವರಿಗೆ ಹುದ್ದೆ ಕೊಡಬೇಕು. ಪೂರ್ಣ ಪ್ರಮಾಣದ ಅಧ್ಯಕ್ಷರನ್ನು ನೇಮಿಸಬೇಕು. ಸಾಧ್ಯವಾದಷ್ಟು ಬೇಗ ಹೊಸ ಅಧ್ಯಕ್ಷರ ನೇಮಕ ಮಾಡಬೇಕು ಎಂದೂ ಸುರ್ಜೇವಾಲಾರಿಗೆ ಹೇಳಿದ್ದೇನೆ. ಹಾಲಿ ಅಧ್ಯಕ್ಷರನ್ನೇ ಮುಂದುವರಿಸುವುದಾದರೆ ಅದನ್ನೂ ಸ್ಪಷ್ಟಪಡಿಸಿ ಎಂದೂ ಹೇಳಿದ್ದೇನೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು
ಶಿವಕುಮಾರ್ ಮುಂದುವರಿಸುವುದು ಹೈಕಮಾಂಡ್ಗೆ ಬಿಟ್ಟಿದ್ದು: ‘ನಮಗೆ ಪೂರ್ಣ ಪ್ರಮಾಣದ ಅಧ್ಯಕ್ಷರು ಬೇಕು. ಮತ ತರುವವರನ್ನು, ಜನಪ್ರಿಯತೆ ಇರುವವರನ್ನು ಅಧ್ಯಕ್ಷ ಮಾಡಿ ಎಂದಿದ್ದೇನೆ. ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅವರೇ ಇರಬೇಕೇ, ಬೇಡವೇ ಎಂಬ ಬಗ್ಗೆ ಗೊಂದಲಗಳಿವೆ. ಹೀಗಾಗಿ ಎಲ್ಲ ಗೊಂದಲಗಳಿಗೆ ಇತಿಶ್ರೀ ಹಾಡುವಂತೆ ಸುರ್ಜೆವಾಲಾ ಅವರಿಗೆ ಹೇಳಿದ್ದೇನೆ. ಡಿಕೆಶಿ ಅವರನ್ನು ಮುಂದುವರಿಸುವುದು ಹೈಕಮಾಂಡ್ಗೆ ಬಿಟ್ಟಿದ್ದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.