‘ಜಾತಿ ಗಣತಿ’ ತೀರ್ಮಾನ ಒಂದು ವರ್ಷ ಕಳೆಯಬಹುದು : ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ
ಬೆಂಗಳೂರು : ಜಾತಿಗಣತಿ ವರದಿಯೂ ಒಂದು ಜಟಿಲ ಸಮಸ್ಯೆ ಆಗಿದ್ದು, ಈ ಬಗೆಗಿನ ವರದಿ ತೀರ್ಮಾನಕ್ಕೆ ಬರಲು ಇನ್ನೂ ಒಂದು ವರ್ಷ ಕಳೆಯಬಹುದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಶುಕ್ರವಾರ ಸಂಜಯನಗರ ನಿವಾಸದಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿ ಬಹಳ ಜಟಿಲ ಸಮಸ್ಯೆ ಇದು. ಬಹಳಷ್ಟು ಚರ್ಚೆಯಾಗಬೇಕಿದೆ. ವರದಿ ಸ್ವೀಕಾರಕ್ಕೆ ಹತ್ತು ವರ್ಷ ತೆಗೆದುಕೊಂಡಿದೆ. ಹೀಗಾಗಿ ಇನ್ನೂ 1 ವರ್ಷವಾಗಬಹುದು ಎಂದು ನುಡಿದರು.
ಜಾತಿಗಣತಿ ವರದಿ ಶಿಫಾರಸ್ಸು ಸೂಕ್ತ ರೀತಿಯಲ್ಲಿ ಜಾರಿ ಆಗಬೇಕು. ಒಂದು ವೇಳೆ ಸರಿಯಾಗಿ ನಾವು ಜಾರಿ ಮಾಡದಿದ್ದರೆ ಮುಂದೆ ಸಮಸ್ಯೆಗಳು ಸೃಷ್ಟಿ ಆಗಲಿವೆ. ಯಾವುದೇ ಸಮಾಜಕ್ಕೆ ನೋವಾಗಬಾರದು. ಇದಷ್ಟೇ ನಮ್ಮ ಉದ್ದೇಶ ಎಂದ ಅವರು, ಜಾತಿಗಣತಿ ವರದಿಯಿಂದ ಸಮುದಾಯಗಳ ಏಳಿಗೆ ಆಗಲಿದೆ.ಜತೆಗೆ ಅಗತ್ಯತೆ ತಿಳಿದುಕೊಳ್ಳಬಹುದು ಎನ್ನುವ ವಿಶ್ವಾಸ ಇದೆ ಎಂದು ಅವರು ಹೇಳಿದರು.
ಜಾತಿ ಗಣತಿಯಲ್ಲಿ ಸಾದರ ಸಮುದಾಯವನ್ನು ಕಡಿಮೆ ತೋರಿಸಲಾಗಿದೆ. ಅದರಲ್ಲೂ ಅವರ ಸಂಖ್ಯೆ 64 ಸಾವಿರ ಇದೆ ಎಂದು ಉಲ್ಲೇಖಿಸಲಾಗಿದೆ. ಈ ಬಗ್ಗೆ ಅವರು ಧ್ವನಿ ಎತ್ತಿದ್ದಾರೆ. ಆದರೆ, ಕೆಲ ಅಂಕಿ-ಅಂಶಗಳನ್ನು ಸರಿ ಮಾಡಬೇಕು. ಅಂಕಿ ಅಂಶಗಳನ್ನು ಸರಿ ಮಾಡಲು ಅವಕಾಶ ನೀಡಬೇಕು ಎಂದು ತಿಳಿಸಿದರು.
ಸಚಿವ ಕೆಎಚ್.ಮುನಿಯಪ್ಪ ಮಾತನಾಡಿ, ಜಾತಿಗಣತಿ ಯಾರಿಗೂ ತೊಂದರೆಯಾಗಲ್ಲ. ಲಿಂಗಾಯತ, ಒಕ್ಕಲಿಗ ಯಾರಿಗೂ ತೊಂದರೆಯಾಗಲ್ಲ. ಎಲ್ಲರೂ ಒಪ್ಪುವ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.