ಸರಕಾರಕ್ಕೆ 22 ಕೋಟಿ ರೂ.ನಿಶ್ಚಿತ ಠೇವಣಿ ಮರುಪಾವತಿಸಿದ ಎಸ್‍ಬಿಐ-ಪಿಎನ್‍ಬಿ
ಬೆಂಗಳೂರು : ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‍ಬಿಐ) ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‍ಬಿ)ನಲ್ಲಿ ರಾಜ್ಯ ಸರಕಾರದ ಎರಡು ನಿಶ್ಚಿತ ಠೇವಣಿಗಳನ್ನು ಮರು ಪಾವತಿಸುವ ಮೂಲಕ ಸರಕಾರದ ಬೊಕ್ಕಸಕ್ಕೆ 22 ಕೋಟಿ ರೂ.ಜಮೆಯಾದಂತಾಗಿದೆ.
ಈ ಹಿಂದೆ ಎಸ್‍ಬಿಐ ಹಾಗೂ ಪಿಎನ್‍ಬಿ ಸರಕಾರದ ಎರಡು ನಿಶ್ಚಿತ ಠೇವಣಿಗಳನ್ನು ಹಿಂದಿರುಗಿಸಲು ನಿರಾಕರಿಸಿದ್ದವು. ಇದರಿಂದಾಗಿ, ರಾಜ್ಯ ಸರಕಾರದ ಆರ್ಥಿಕ ಇಲಾಖೆಯು ಎಲ್ಲ ಇಲಾಖೆಗಳಿಗೆ ಸುತ್ತೋಲೆ ಹೊರಡಿಸಿ ಈ ಎರಡು ಬ್ಯಾಂಕ್‍ಗಳಲ್ಲಿ ಇರಿಸಿರುವ ಎಲ್ಲ ನಿಶ್ಚಿತ ಠೇವಣಿಗಳನ್ನು ಹಿಂಪಡೆಯುವಂತೆ ಸೂಚನೆ ನೀಡಿತ್ತು.
ಹಲವು ವರ್ಷಗಳಿಂದ ಈ ಎರಡು ಬ್ಯಾಂಕ್‍ಗಳು ಸರಕಾರಕ್ಕೆ ಬರಬೇಕಿದ್ದ ಹಣವನ್ನು ಮರು ಪಾವತಿ ಮಾಡದೆ ಉಳಿಸಿಕೊಂಡಿದ್ದವು. ಈ ಸಂಬಂಧ ಸರಕಾರದ ವತಿಯಿಂದ ಹಲವಾರು ಬಾರಿ ಪತ್ರ ವ್ಯವಹಾರಗಳು ನಡೆದಿದ್ದರೂ ಯಾವುದೆ ಪ್ರಯೋಜನವಾಗಿರಲಿಲ್ಲ. ಈ ವಿಷಯ ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಕ್ಕೆ ಬರುತ್ತಿದ್ದಂತೆ ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾಗಿರುವ ಎಲ್.ಕೆ.ಅತೀಕ್ ಅವರ ಮೂಲಕ ಸುತ್ತೋಲೆ ಹೊರಡಿಸಿದ್ದರು.
ರಾಜ್ಯ ಸರಕಾರದ ಯಾವುದೇ ಇಲಾಖೆ, ನಿಗಮ, ಮಂಡಳಿಗಳು, ವಿಶ್ವವಿದ್ಯಾಲಯಗಳು, ಸಂಸ್ಥೆಗಳು ಎಸ್‍ಬಿಐ ಹಾಗೂ ಪಿಎನ್‍ಬಿ ಬ್ಯಾಂಕ್ ನೊಂದಿಗೆ ಯಾವುದೆ ಹಣಕಾಸಿನ ವ್ಯವಹಾರಗಳನ್ನು ನಡೆಸದಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿತ್ತು. ಇದರಿಂದ ಕಂಗೆಟ್ಟ ಬ್ಯಾಂಕಿನ ಅಧಿಕಾರಿಗಳು ಸರಕಾರದ ಆಗ್ರಹಕ್ಕೆ ಮಣಿಯುವಂತಾಯಿತು.
ಅದರ ಬೆನಲ್ಲೇ, ಬ್ಯಾಂಕಿನ ಅಧಿಕಾರಿಗಳು, ಸರಕಾರದ ಹಿರಿಯ ಅಧಿಕಾರಿಗಳು ಹಾಗೂ ಮುಖ್ಯಮಂತ್ರಿ ಜೊತೆ ಸಭೆಗಳನ್ನು ನಡೆಸಿ ಸರಕಾರದ ನಿಶ್ಚಿತ ಠೇವಣಿ ಹಿಂದಿರುಗಿಸಲು ಕಾಲಾವಕಾಶ ಕೋರಿದ್ದರು. ಅದರಂತೆ, ಮುಖ್ಯಮಂತ್ರಿ ಸುತ್ತೋಲೆಯನ್ವಯ ತಾತ್ಕಾಲಿಕವಾಗಿ ಯಾವುದೆ ಕ್ರಮ ಕೈಗೊಳ್ಳದಂತೆ ಸೂಚಿಸಿದ್ದರು.
ಇದೀಗ ಎಸ್‍ಬಿಐನಿಂದ 9.67 ಕೋಟಿ ರೂ.ಗಳು ಹಾಗೂ ಪಿಎನ್‍ಬಿಯಿಂದ 13.9 ಕೋಟಿ ರೂ.ಗಳು ಸರಕಾರದ ಖಜಾನೆಗೆ ಜಮೆಯಾದಂತಾಗಿದೆ.