ಬಹಿರಂಗ ಚರ್ಚೆಗೆ ಸಮಯ ನಿಗದಿ ಮಾಡಿ: ಎಚ್ಡಿಕೆಗೆ ಡಿ.ಕೆ. ಶಿವಕುಮಾರ್ ಸವಾಲು
ಬೆಂಗಳೂರು: "ನಾನು ಏನು ಮಾಡಿದ್ದೇನೆ, ಕುಮಾರಸ್ವಾಮಿ ಏನು ಮಾಡಿದ್ದಾರೆ ಎಂದು ಬಹಿರಂಗ ಚರ್ಚೆ ಮಾಡೋಣ. ಅವರು ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.
ಸದಾಶಿವನಗರ ನಿವಾಸದ ಬಳಿ, ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.
"ಯಾರು ಏನೇನು ಮಾಡಿದ್ದಾರೆ ಎಂದು ಎಲ್ಲವನ್ನೂ ಬಿಚ್ಚಿ ಮಾತನಾಡೋಣ. ಬಹಿರಂಗ ಚರ್ಚೆ ಮಾಡಲು ನಾನೂ ಸಿದ್ಧ. ಮೂರು ದಿನಗಳ ನಂತರ ಯಾವಾಗ ಬೇಕಾದರೂ ಸಮಯ ನಿಗದಿ ಮಾಡಿ" ಎಂದು ತಿಳಿಸಿದರು.
ವಿಧಾನಸೌಧ ಕಚೇರಿ ನವೀಕರಣ ಅಗತ್ಯತೆ ಬಗ್ಗೆ ಬಿಜೆಪಿ ಮಾಡಿರುವ ಟೀಕೆ ಬಗ್ಗೆ ಕೇಳಿದಾಗ, "ಬಿಜೆಪಿಗೆ ಸಾಮಾನ್ಯ ಜ್ಞಾನ ಇಲ್ಲ. ಅದು ನನ್ನ ಕಚೇರಿ. ನಾನು ಅಲ್ಲಿ ಅನೇಕ ಜನರು, ಗಣ್ಯರನ್ನು ಭೇಟಿ ಮಾಡಬೇಕಾಗುತ್ತದೆ. ನೆದರ್ ಲ್ಯಾಂಡ್ ಪ್ರಧಾನಮಂತ್ರಿಗಳು ವಿಧಾನಸೌಧಕ್ಕೆ ಬಂದಾಗ ನಾನು ಎಂ.ಬಿ. ಪಾಟೀಲ್ ಅವರ ಕೊಠಡಿಗೆ ಹೋಗಿ ಅವರನ್ನು ಭೇಟಿ ಮಾಡಬೇಕಾಯಿತು. ಗಣ್ಯರು ಭೇಟಿಗೆ ಬಂದಾಗ ಅವರಿಗೆ ಗೌರವ ನೀಡಲು ಅಚ್ಚುಕಟ್ಟಾದ ಕೊಠಡಿ, ಸೂಕ್ತ ಸ್ಥಳಾವಕಾಶ ಇರಬೇಕು. ನಾವು ನಮ್ಮ ಮಣ್ಣಿನ ಸಂಸ್ಕೃತಿ ಪಾಲಿಸಬೇಕು. ನಾವು ಬೆಂಗಳೂರು ಹಾಗೂ ಇಂಡಿಯಾವನ್ನು ಉತ್ತಮವಾಗಿ ಬಿಂಬಿಸಬೇಕು. ಅದಕ್ಕಾಗಿ ಮಾಡುತ್ತಿದ್ದೇವೆ. ಬಿಜೆಪಿ ಅವರಿಗೆ ಈ ಬಗ್ಗೆ ಕಾಮನ್ ಸೆನ್ಸ್ ಇಲ್ಲ" ಎಂದು ತಿರುಗೇಟು ನೀಡಿದರು.