ಪ್ರಧಾನಿ ಭೇಟಿಗೆ ಸಮಯ ನಿಗದಿ | ದಿಲ್ಲಿಗೆ ತೆರಳಲಿರುವ ಸಿಎಂ ಸಿದ್ದರಾಮಯ್ಯ
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಜೂನ್ 29ರ ರಾತ್ರಿ 8 ಗಂಟೆಗೆ ಸಮಯ ನಿಗದಿಯಾಗಿದ್ದು, ಪ್ರಧಾನಿ ಹಾಗೂ ಕೇಂದ್ರ ಸಚಿವರ ಜತೆ ಮಾತುಕತೆ ನಡೆಸಲಿದ್ದೇನೆ. ಹಾಗಾಗಿ ಇಂದು (ಗುರುವಾರ) ದಿಲ್ಲಿಗೆ ತೆರಳಲಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ವಿಧಾನಸೌಧದ ಪೂರ್ವ ದಿಕ್ಕಿನಲ್ಲಿರುವ ನಾಡಪ್ರಭು ಕೆಂಪೇಗೌಡರ 515 ನೇ ಜಯಂತಿ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, "ಕೇಂದ್ರ ಹಾಗೂ ರಾಜ್ಯ ಸರಕಾರ ಜಂಟಿಯಾಗಿ ಅನುಷ್ಠಾನಗೊಳಿಸಬೇಕಿರುವ ಯೋಜನೆಗಳ ಬಗ್ಗೆ ಪ್ರಧಾನಿ ಹಾಗೂ ಕೇಂದ್ರ ಸಚಿವರ ಜತೆ ಚರ್ಚಿಸಲಿದ್ದೇನೆ. ಅಲ್ಲದೆ, ರಾಜ್ಯದ ಯೋಜನೆಗಳಿಗೆ ಕೇಂದ್ರ ಸರಕಾರದಿಂದ ಸಿಗಬೇಕಿರುವ ಅನುದಾನದ ಕುರಿತು ಪ್ರಸ್ತಾಪಿಸಲಿದ್ದೇನೆ. ಆದ್ದರಿಂದ ರಾಜ್ಯದ ಸಂಸದರ, ರಾಜ್ಯಸಭಾ ಸದಸ್ಯರ ಜತೆ ಸಭೆ ನಡೆಸಿ, ಮಾಹಿತಿ ಕಲೆ ಹಾಕಲಿದ್ದೇನೆ" ಎಂದು ಮಾಹಿತಿ ನೀಡಿದರು.
ಕೇಂದ್ರ ಸಚಿವರ ಭೇಟಿ :
ವಿಶೇಷವಾಗಿ ನಮ್ಮ ಸಚಿವರೂ ಕೂಡ ಜೊತೆಗೂಡಿದ್ದು, ಪ್ರಧಾನಮಂತ್ರಿ, ಭೂಸಾರಿಗೆ ಸಚಿವರು,ರೈಲ್ವೆ, ನೀರಾವರಿ , ಗೃಹ ಸಚಿವರು ಹಾಗೂ ಹಣಕಾಸು ಸಚಿವರನ್ನು ಭೇಟಿ ಮಾಡಲಿರುವುದಾಗಿ ಹೇಳಿದರು. ಗೃಹಸಚಿವರು ಭೇಟಿಗೆ ಇನ್ನೂ ಸಮಯ ನಿಗದಿಮಾಡಿಲ್ಲ. ಶೀಘ್ರವೇ ಮಾಡುತ್ತಾರೆ ಎಂದು ತಿಳಿಸಿದರು.
ಭಾರತ ಬಹುತ್ವದ ಸಂಸ್ಕೃತಿ ಇರುವ ರಾಷ್ಟ :
ನೋಬೆಲ್ ಪ್ರಶಸ್ತಿ ಪುರಸ್ಕೃತ ಅಮಾರ್ತ್ಯ ಸೇನ್ ಅವರು ಲೋಕಸಭಾ ಚುನಾವಣೆಯ ಫಲಿತಾಂಶದಿಂದ ಭಾರತ ಹಿಂದೂ ರಾಷ್ಟ್ರವಲ್ಲ, ಎಲ್ಲರಿಗೂ ಸೇರಿದ ರಾಷ್ಟ್ರ ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, "ಭಾರತ ಬಹುತ್ವದ ದೇಶ ಎಂದು ಮೊದಲಿನಿಂದಲೂ ಹೇಳುತ್ತಿದ್ದೇವೆ. ಕೇವಲ ಹಿಂದೂಗಳ ರಾಷ್ಟ್ರವಾಗಲು ಸಾಧ್ಯವಿಲ್ಲ. ಎಲ್ಲಾ ಜಾತಿ, ಧರ್ಮ, ಭಾಷೆಯವರು ಇದ್ದು, ಬಹುತ್ವದ ಸಂಸ್ಕೃತಿ ಇರುವ ರಾಷ್ಟವಾಗಿದೆ. ಅಮಾರ್ತ್ಯ ಸೇನ್ ಹೇಳಿರುವುದು ಸರಿಯಿದ್ದು, ನಾವೂ ಅದನ್ನೇ ಮೊದಲಿನಿಂದಲೂ ಪ್ರತಿಪಾದಿಸುತ್ತಿದ್ದೇವೆ" ಎಂದರು.