ಶಾಲೆಗಳ ವೇಳಾಪಟ್ಟಿ ಪ್ರಕಟ : ಮೇ 29ರಿಂದ ಶಾಲೆ ಪುನರಾರಂಭ
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಎಲ್ಲ ಶಾಲೆಗಳಲ್ಲಿ ಮೇ 29ರಿಂದ ತರಗತಿಗಳು ಆರಂಭವಾಗಲಿದೆ ಎಂದು ಶಿಕ್ಷಣ ಇಲಾಖೆಯು ಮಾಹಿತಿ ನೀಡಿದೆ.
ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ರಾಜ್ಯ ಪಠ್ಯಕ್ರಮದ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಅನ್ವಯವಾಗುವಂತಹ 2024-2025 ಸಾಲಿನ ವಾರ್ಷಿಕ ಶೈಕ್ಷಣಿಕ ವೇಳಾಪಟ್ಟಿ ಪ್ರಕಟಿಸಿದೆ.
ಈ ವೇಳಾಪಟ್ಟಿಯ ಪ್ರಕಾರ ಮೊದಲನೇ ಅವಧಿಯ ತರಗತಿಗಳು 2024ರ ಮೇ 29 ರಿಂದ ಅ.2ರವರೆಗೆ, ಎರಡನೇ ಅವಧಿಯ ತರಗತಿಗಳು ಅ.21ರಿಂದ 2025ರ ಎ.10 ರವರೆಗೆ ನಡೆಯಲಿವೆ. ಇದರ ನಡುವೆ, ಅ.3 ರಿಂದ 20ರವರೆಗೆ ದಸರಾ ರಜೆ, 2025ರ ಎ.11 ರಿಂದ ಮೇ 28ರವರೆಗೆ ಬೇಸಿಗೆ ರಜೆಯನ್ನು ನೀಡಲಾಗುತ್ತದೆ.
244 ಶಾಲಾ ಕರ್ತವ್ಯದ ದಿನಗಳು ಇರಲಿದ್ದು, ಇದರಲ್ಲಿ ಪರೀಕ್ಷೆ ಮೌಲ್ಯಾಂಕನ ಕಾರ್ಯಕ್ಕೆ 26 ದಿನಗಳು, ಪಠ್ಯೇತರ ಚಟುವಟಿಕೆಗೆ 24 ದಿನಗಳು, ಮೌಲ್ಯಮಾಪನ, ಫಲಿತಾಂಶ ವಿಶ್ಲೇಷಣೆಗೆ 10 ದಿನ, ಶಾಲಾ ಸ್ಥಳೀಯ ರಜೆ 4 ದಿನ, ಬೋಧನಾ ಕಲಿಕೆಗೆ 180 ದಿನಗಳು ಎಂದು ವಿಂಗಡಿಸಲಾಗಿದೆ.
ಈ ವಾರ್ಷಿಕ ಮಾರ್ಗಸೂಚಿಯಲ್ಲಿ ಮಾಸಿಕ ಪಾಠ ಹಂಚಿಕೆ, ಪತ್ಯೇತರ ಚಟುವಟಿಕೆ, ಗುಣಮಟ್ಟದ ಶಿಕ್ಷಣಕ್ಕಾಗಿ ಫಲಿತಾಂಶಮುಖಿ ಚಟುವಟಿಕೆ, ಸಂಭ್ರಮ ಶನಿವಾರ ಸೇರಿ ಇತರ ಯೋಜನೆಗಳನ್ನು ನಿರ್ವಹಿಸುವಂತೆ ಶಾಲಾ ಶಿಕ್ಷಣ ಆಯುಕ್ತರು ಸೂಚನೆ ನೀಡಿದ್ದಾರೆ.
ಎ.14ರಂದು ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಆಚರಿಸಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಶಾಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಹಾಗೂ ಎಸ್ಡಿಎಂಸಿ, ಖಾಸಗಿ ಶಾಲೆಗಳಲ್ಲಿ ಸಂಬಂಧಿಸಿದ ಆಡಳಿತ ಮಂಡಳಿಯವರು ಮತ್ತು ಮಕ್ಕಳೊಂದಿಗೆ ಉತ್ತಮ ಪೂರ್ವ ತಯಾರಿಯೊಂದಿಗೆ ಪ್ರಸ್ತುತ ಚಾಲ್ತಿ ಇರುವ ಲೋಕಸಭಾ ಚುನಾವಣಾ ಮಾರ್ಗಸೂಚಿ ಪ್ರಕಾರ ಇದನ್ನು ಆಚರಿಸಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ.