ರಾಜ್ಯದ ಶಾಲೆಗಳಲ್ಲಿ ಮೊಟ್ಟೆ ಪೂರೈಕೆ ಹೆಚ್ಚಿಸಿದ ಬಳಿಕ ಶೇ.6.5ರಿಂದ ಶೇ.1ಕ್ಕೆ ಕುಸಿದ ಗೈರುಹಾಜರಾತಿ: ವರದಿ

ಸಾಂದರ್ಭಿಕ ಚಿತ್ರ (PTI)
ಬೆಂಗಳೂರು: ರಾಜ್ಯದ ಶಾಲೆಗಳಲ್ಲಿ ಮಧ್ಯಾಹ್ನದೂಟದ ಜೊತೆಗೆ ವಾರಕ್ಕೆ ಎರಡು ಬಾರಿಯ ಬದಲು ಆರು ಬಾರಿ ಮೊಟ್ಟೆಗಳನ್ನು ನೀಡಲು ಆರಂಭಿಸಿದ ಬಳಿಕ ಮಕ್ಕಳ ಗೈರು ಹಾಜರಿ ಪ್ರಮಾಣ ಶೇ.6.5ರಿಂದ ಶೇ.1ಕ್ಕೆ ಇಳಿದಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೇಳಿದೆ ಎಂದು The Hindu ವರದಿ ಮಾಡಿದೆ.
ವಾರಕ್ಕೆ ಎರಡು ದಿನ ಮೊಟ್ಟೆಗಳನ್ನು ನೀಡುತ್ತಿದ್ದಾಗ ವಿದ್ಯಾರ್ಥಿಗಳ ಹಾಜರಾತಿ ಶೇ.93.5ರಷ್ಟಿತ್ತು. ಇದನ್ನು ಆರು ದಿನಗಳಿಗೆ ಹೆಚ್ಚಿಸಿದ ಬಳಿಕ ಹಾಜರಾತಿ ಶೇ.98.97ಕ್ಕೆ ಏರಿಕೆಯಾಗಿದೆ.
ಮೊಟ್ಟೆಗಳನ್ನು ತಿನ್ನಲು ಬಯಸದ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ಮತ್ತು ಚಿಕ್ಕಿ ನೀಡಲಾಗುತ್ತಿತ್ತು, ಆದರೆ ಈಗ ಕಳಪೆ ಗುಣಮಟ್ಟದ ಕಾರಣದಿಂದಾಗಿ ಚಿಕ್ಕಿ ವಿತರಣೆಯನ್ನು ನಿಲ್ಲಿಸಲಾಗಿದೆ.
ಕೋಲಾರ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚಿನ (84.16)ವಿದ್ಯಾರ್ಥಿಗಳು ಮೊಟ್ಟೆಯನ್ನು ಸೇವಿಸುತ್ತಿದ್ದು, ಕೊಡಗು(ಶೇ.83.89) ಮತ್ತು ಹಾಸನ(ಶೇ.81.26) ನಂತರದ ಸ್ಥಾನಗಳಲ್ಲಿವೆ.
ವಾರಕ್ಕೆ ಆರು ದಿನ ಮೊಟ್ಟೆ ಮತ್ತು ಬಾಳೆಹಣ್ಣು ನೀಡುತ್ತಿರುವುದರಿಂದ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಾಗಿದ್ದು,ಇದು ಒಳ್ಳೆಯ ಬೆಳವಣಿಗೆ. ಇದರಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಕಡಿಮೆಯಾಗುವ ಜೊತೆಗೆ ಅವರು ಶೈಕ್ಷಣಿಕವಾಗಿಯೂ ಅಭಿವೃದ್ಧಿಗೊಳ್ಳುತ್ತಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತ ಕೆ.ವಿ.ತ್ರಿಲೋಕಚಂದ್ರ ತಿಳಿಸಿದರು.
ಈ ಉಪಕ್ರಮವು ತೋರಿಕೆಗೆ ಉತ್ತಮವಾಗಿದ್ದರೂ ಅದರ ಅನುಷ್ಠಾನಕ್ಕೆ ಗಮನ ನೀಡುವುದು ಅಗತ್ಯವಾಗಿದೆ ಎಂದು ಹೇಳಿದ ಸಮುದಾಯ ಆರೋಗ್ಯ ವೈದ್ಯೆ ಸಿಲ್ವಿಯಾ ಕರ್ಪಗಂ ಅವರು,ಜಾತಿ ಆಧಾರಿತ ಸಂಹಿತೆಗಳನ್ನು ಅನುಸರಿಸುವ ಶಿಕ್ಷಣ ಸಂಸ್ಥೆಗಳು ಮಧ್ಯಾಹ್ನದ ಬಿಸಿಯೂಟ ಕುರಿತು ಸರಕಾರದ ಆದೇಶಗಳನ್ನು ಪಾಲಿಸಲು ನಿರಾಕರಿಸಿವೆ. ಮೂಲತಃ ನಿಯಮಗಳನ್ನು ರೂಪಿಸುವುದು ಈ ಸಂಸ್ಥೆಗಳೇ ಹೊರತು ಸರಕಾರವಲ್ಲ ಎಂದರು.
ಮೊಟ್ಟೆಗಳನ್ನು ತಿನ್ನದ ಮಕ್ಕಳಿಗೆ ಬದಲಿಯಾಗಿ ಹಾಲು ಅಥವಾ ಡೇರಿ ಆಧಾರಿತ ಉತ್ಪನ್ನಗಳನ್ನು ನೀಡಬೇಕು ಎಂದು ಅವರು ಹೇಳಿದರು.