ಬೆಂಗಳೂರಿನಲ್ಲಿ ಧಾರಕಾರ ಮಳೆ: ಜನಜೀವನ ಅಸ್ತವ್ಯಸ್ತ
ಶಾಲೆಗಳಿಗೆ ರಜೆ ಘೋಷಣೆ
ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಸಂಭವಿಸಿದ ವಾಯುಭಾರ ಕುಸಿತದಿಂದ ಮಂಗಳವಾರ (ಅ.15) ಮುಂಜಾನೆಯಿಂದಲೇ ನಗರದಲ್ಲಿ ಜಡಿಮಳೆ ಸುರಿದಿದ್ದು, ನಿರಂತರವಾಗಿ ಸುರಿದ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಅಲ್ಲದೆ, ಶಾಲೆಗೆ ಹೋಗುವ ವಿದ್ಯಾರ್ಥಿಗಳು, ಕಚೇರಿಗಳಿಗೆ ಹೋಗುವ ಉದ್ಯೋಗಿಗಳು ಪರದಾಡಿದರು.
ನಗರದ ತಗ್ಗುಪ್ರದೇಶಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ರಸ್ತೆಗಳು, ಕೆಲ ಬಡಾವಣೆಗಳು, ಗುಡಿಸಲುಗಳು, ಜಲಾವೃತವಾಗಿದ್ದವು. ಜನರು ಸುರಕ್ಷತೆಗಾಗಿ ಎತ್ತರದ ಸ್ಥಳಗಳಿಗೆ ತೆರಳಿದರು. ನಗರದ ಕೆಲ ಅಪಾರ್ಟ್‍ಮೆಂಟ್‍ಗಳು ಸಂಪೂರ್ಣ ಜಲಾವೃತಗೊಂಡಿದ್ದು, ಅಪಾರ್ಟ್‍ಮೆಂಟ್‍ನಲ್ಲಿದ್ದರಿಗೆ ತೊಂದರೆ ಉಂಟಾಗಿತ್ತು.
ಇಲ್ಲಿನ ರಾಜಾಜಿನಗರ, ವಿಜಯನಗರ, ಮೆಜೆಸ್ಟಿಕ್ ಸೇರಿದಂತೆ ಹಲವಡೆ ಜೋರು ಮಳೆಯಾಗಿದೆ. ಪರಪ್ಪನ ಅಗ್ರಹಾರ ಸುತ್ತಮುತ್ತ ಭಾರಿ ಮಳೆ ಸುರಿದ ಪರಿಣಾಮ ಮುಖ್ಯ ರಸ್ತೆಯಲ್ಲಿ ನೀರು ತುಂಬಿ ವಾಹನ ಸವಾರರು ಪರದಾಟ ನಡೆಸುವಂತಾಗಿದೆ. ಸಣ್ಣ ಮಳೆಗೆ ರಸ್ತೆಯಲ್ಲಿ ಎರಡು ಅಡಿಯಷ್ಟು ನೀರು ನಿಂತಿದ್ದು, ಹೊಸ ರೋಡ್‍ನಿಂದ ಸರ್ಜಾಪುರ ಸಂಪರ್ಕಿಸುವ ರಸ್ತೆ ಜಲಾವೃತಗೊಂಡಿತ್ತು.
ಮಳೆಯ ಪರಿಣಾಮ ಜಯಮಹಲ್ ರಸ್ತೆಯುದ್ದಕ್ಕೂ ಕಾಮಗಾರಿ ಮಾಡಿರುವ ಮಣ್ಣಿನ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಇದರಿಂದಾಗಿ ವಾಹನಗಳು ರಸ್ತೆಯಲ್ಲಿ ಓಡಾಡದ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಉತ್ತರಹಳ್ಳಿ ರೋಡ್, ಶೇಷಾದ್ರಿಪುರಂ, ಹೆಚ್‍ಎಂಟಿ ಲೇಔಟ್, ಸದಾಶಿವನಗರ, ಓಕಳೀಪುರಂ, ವಿಂಡ್ಸರ್ ಮ್ಯಾನರ್, ಶಿವಾನಂದ ಸರ್ಕಲ್, ಚಾಲುಕ್ಯ ಸರ್ಕಲ್, ಗೊರಗುಂಟೆ ಪಾಳ್ಯ, ಬೆಂಗಳೂರು ಹೊರವಲಯದ ಆನೇಕಲ್, ಬನ್ನೇರುಘಟ್ಟ, ಅತ್ತಿಬೆಲೆ, ಹೊಸೂರು, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಹಲವೆಡೆ ಜಡಿ ಮಳೆಯಾಗಿ, ಜನಜೀವನ ಅಸ್ತವ್ಯಸ್ತವಾಗಿತ್ತು.
ಇನ್ನು ರಾಚೇನಹಳ್ಳಿಯಿಂದ ಯಲಹಂಕ, ಜಕ್ಕೂರು ಕಡೆ ಹೋಗುವ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು, ವಾಹನಗಳು ರಸ್ತೆಯಲ್ಲೇ ಕೆಟ್ಟು ನಿಂತಿವೆ. ಮುಂದಕ್ಕೆ ಹೋಗುವುದಕ್ಕೂ, ವಾಪಸ್ ತೆರಳಲು ಆಗದೆ ಸವಾರರು ಕಂಗಾಲಾಗಿದ್ದಾರೆ. ಪಕ್ಕದಲ್ಲಿ ಕೆರೆ ಇದ್ದರೂ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಇದು ಬ್ರಾಂಡ್ ಬೆಂಗಳೂರು ಅಲ್ಲ, ಮೋರಿ ಬೆಂಗಳೂರು ಎಂದು ಸವಾರರು ಕಿಡಿಕಾರುತ್ತಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಹೋಟೆಲ್‍ಗೆ ಮಳೆ ನೀರು ನುಗ್ಗಿದ್ದು, ಎಡಬಿಡದೇ ಸುರಿದ ಮಳೆಗೆ ಹೋಟೆಲ್ ಮುಳುಗಿತ್ತು. ಮಳೆಯಿಂದಾಗಿ ಪ್ರಯಾಣಿಕರಿಲ್ಲದೆ ಆಟೋ ಚಾಲಕರೂ ಕಂಗಾಲಾಗಿದ್ದರು. ಬೀದಿ ಬದಿ ವ್ಯಾಪಾರದ ಮೇಲೆಯೂ ವ್ಯತಿರಿಕ್ತ ಪರಿಣಾಮವಾಗಿದೆ.
ಮಳೆಯಿಂದ ವಾಹನ ದಟ್ಟನೆ: ನಿರಂತವಾಗಿ ಸುರಿದ ಮಳೆಯಿಂದಾಗಿ ನಗರದ ರಸ್ತೆಗಳು, ಅಂಡರ್ ಪಾಸ್‍ಗಳು ಜಲಾವೃತವಾಗಿದ್ದವು. ಇದರಿಂದ ಪ್ರಮುಖ ರಸ್ತೆಗಳ ಸಿಗ್ನಲ್‍ಗಳಲ್ಲಿ ಗಂಟೆಗಟ್ಟಲೇ ವಾಹನ ದಟ್ಟಣೆ ಉಂಟಾಗಿತ್ತು. ದ್ವಿ-ಚಕ್ರ ವಾಹನ ಸವಾರರು ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿದ ಪರಿಣಾಮ ಸಂಚಾರ ಅಸ್ತವ್ಯಸ್ಥಗೊಂಡಿತ್ತು.
ನಿರಂತರ ಮಳೆಯಿಂದಾಗಿ ಬೆಳ್ಳಂದೂರು ಲೇಕ್ ರಸ್ತೆಯಲ್ಲಿ ವಾಹನ ಸವಾರರು ನರಕ ದರ್ಶನ ಪಡೆದಿದ್ದಾರೆ. ಮಳೆಯ ನೀರು ರಸ್ತೆಯಲ್ಲಿ ನಿಂತ ಪರಿಣಾಮ ವಾಹನ ಸವಾರರು ಪರದಾಡಿದ್ದಾರೆ. ದೊಡ್ಡದೊಡ್ಡ ಗುಂಡಿ, ಕೆಸರಿನ ರಸ್ತೆಗಳಲ್ಲಿ ವಾಹನಗಳು ಸಿಲುಕಿಕೊಂಡಿದ್ದವು. ಸುತ್ತ 2 ಕಿ..ಮೀ. ಸಂಚಾರ ಸಾಧ್ಯ ಆಗದೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ರಸ್ತೆಯಲ್ಲಿ 4 ಅಡಿಯಷ್ಟು ನೀರು ನಿಂತಿದ್ದು, ಆಳವಾದ ಗುಂಡಿ ಭಾಗಕ್ಕೆ ಬ್ಯಾರಿಕೇಡ್ ಅಳವಡಿಸಲಾಗಿತ್ತು.
ಖಾಸಗಿ ವಾಹನಗಳಲ್ಲಿ, ಕ್ಯಾಬ್‍ಗಳಲ್ಲಿ ನಿತ್ಯವೂ ತಮ್ಮ ಕಾರ್ಯಸ್ಥಳಗಳಿಗೆ ತೆರಳುವಂಥವರು ಟ್ರಾಫಿಕ್ ಜಾಮ್ ಗೆ ಹೆದರಿ, ಮೆಟ್ರೋ ರೈಲಿನ ಮೊರೆ ಹೋದರು. ಹೀಗೆ, ನೂರಾರು ಮಂದಿ ತಮ್ಮ ಖಾಸಗಿ ವಾಹನಗಳನ್ನು ಬಿಟ್ಟು ಮೆಟ್ರೋಕ್ಕೆ ಬಂದಿದ್ದರಿಂದ ಮೆಟ್ರೋ ರೈಲುಗಳು ಕ್ಕಿಕ್ಕಿರಿದು ತುಂಬಿದ್ದವು.
ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರಾಂತ್ಯಗಳಲ್ಲಿ ನಾಳೆ(ಅ.16)ಯೂ ಭಾರಿ ಮಳೆ ಬೀಳಲಿದೆ. ಮಧ್ಯಾಹ್ನದ ವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇದ್ದು, ಕೆಲವೊಮ್ಮೆ ಸಾಧಾರಣ ಮಳೆಯಾಗುವ ಸಾಧ್ಯತೆ ಹೆಚ್ಚು. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 25 ಡಿಗ್ರಿ ಸೆಲ್ಸಿಯಸ್ ಮತ್ತು 20 ಡಿಗ್ರಿ ಸೆಲ್ಸಿಯಸ್ ಆಗಿರಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹವಾಮಾನ ಇಲಾಖೆಯ ಆರೆಂಜ್ ಅಲರ್ಟ್ ಮುನ್ಸೂಚನೆಯಂತೆ ಇಂದು(ಅ.16) ನಗರದಲ್ಲಿ ಮಳೆಯ ತೀವ್ರತೆ ಹೆಚ್ಚಾಗಲಿದೆ. ಹೀಗಾಗಿ ನಗರದ ಅಂಗನವಾಡಿ ಕೇಂದ್ರಗಳಿಗೆ, ಖಾಸಗಿ/ಅನುದಾನಿತ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಿಸಿದೆ. ಈಗಾಗಲೇ ಸರ್ಕಾರಿ ಶಾಲೆಗಳಿಗೆ ದಸರಾ ಹಬ್ಬದ ಅಂಗವಾಗಿ ಅ.20ರ ವರೆಗೆ ರಜೆ ಇದೆ. ಉಳಿದಂತೆ ಎಲ್ಲ ಐಟಿಐ, ಪದವಿ ಸೇರಿ ಸ್ನಾತಕೋತ್ತರ ಪದವಿ ತರಗತಿಗಳಿಗೆ ರಜೆ ಇರುವುದಿಲ್ಲ ಎಂದು ತಿಳಿಸಲಾಗಿದೆ.
ಬುಧವಾರ ಶಾಲೆಗಳಿಗೆ ರಜೆ: ನಗರದಲ್ಲಿ ನಿರಂತರ ಮಳೆಯಾಗುತ್ತಿದ್ದು, ಶಾಲೆಗಳಿಗೆ ತೆರಳಲು ವಿದ್ಯಾರ್ಥಿಗಳು ಪರದಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಶಾಲೆಗಳಿಗೆ ನಾಳೆ(ಅ.16) ರಜೆ ಘೋಷಿಸಿದ್ದಾರೆ.