ಚಿಕ್ಕಮಗಳೂರು ನಗರಸಭೆ ಅಧ್ಯಕ್ಷರ ವಿರುದ್ಧ ಬಿಜೆಪಿ, ಜೆಡಿಎಸ್ ಸದಸ್ಯರಿಂದ ಅವಿಶ್ವಾಸ ನಿರ್ಣಯ ಮಂಡನೆಗೆ ಸಿದ್ಧತೆ; ಎಸ್ಡಿಪಿಐ ಸದಸ್ಯೆ ಸಹಿ
ದಲಿತರು, ಅಲ್ಪಸಂಖ್ಯಾತರ ವಿರೋಧಿ ಅಧ್ಯಕ್ಷನನ್ನು ಅಧಿಕಾರದಿಂದ ಕೆಳಗಿಳಿಸಲು ಸಹಿ ಹಾಕಿದ್ದೇವೆ: SDPI ಸ್ಪಷ್ಟನೆ
ಚಿಕ್ಕಮಗಳೂರ ನಗರಸಭೆ ಕಚೇರಿ
ಚಿಕ್ಕಮಗಳೂರು, ನ,5: ಇಲ್ಲಿನ ನಗರಸಭೆ ಅಧ್ಯಕ್ಷರ ವಿರುದ್ಧ ಬಿಜೆಪಿ ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ಜೆಡಿಎಸ್ ಸದಸ್ಯರು ನ.10ರಂದು ಅವಿಶ್ವಾಸ ಮಂಡನೆಗೆ ಸಿದ್ಧತೆ ನಡೆಸಿದ್ದು, ಈ ಅವಿಶ್ವಾಸ ಮಂಡನೆಗೆ ಎಸ್ಡಿಪಿಐನ ಓರ್ವ ಸದಸ್ಯೆಯೂ ಸಹಿ ಹಾಕಿರುವುದು ಸದ್ಯ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಚಿಕ್ಕಮಗಳೂರು ನಗರಸಭೆ 35 ವಾರ್ಡ್ಗಳನ್ನು ಹೊಂದಿದ್ದು, ಕಳೆದ ನಗರಸಭೆ ಚುನಾವಣೆಯಲ್ಲಿ ಬಿಜೆಪಿಯ 18 ಸದಸ್ಯರು, ಜೆಡಿಎಸ್ 3, ಎಸ್ಡಿಪಿಐ 1 ಹಾಗೂ ಕಾಂಗ್ರೆಸ್ನ 13 ಸದಸ್ಯರು ಆಯ್ಕೆಯಾಗಿದ್ದರು. ಸರಳ ಬಹುಮತದೊಂದಿಗೆ ಬಿಜೆಪಿ ನಗರಸಭೆ ಆಡಳಿತದ ಚುಕ್ಕಾಣಿ ಹಿಡಿದಿತ್ತು. ನಗರಸಭೆ ಅಧ್ಯಕ್ಷ ಸ್ಥಾನ ಬಿಸಿಎಂ(ಬಿ) ಮೀಸಲಾಗಿದ್ದ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಆಂತರಿಕ ಒಪ್ಪಂದದಂತೆ ಮೊದಲ ಎರಡೂವರೆ ವರ್ಷಗಳ ಅವಧಿಗೆ ಬಿಜೆಪಿ ಮುಖಂಡ ಹಾಗೂ ನಗರಸಭೆ ಸದಸ್ಯ ವರಸಿದ್ದಿ ವೇಣುಗೋಪಾಲ್ ಅವರನ್ನು ನಗರಸಭೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಈ ವೇಳೆ ಜೆಡಿಎಸ್ನ ಮೂವರು ಸದಸ್ಯರು ನಗರಸಭೆ ಅಧ್ಯಕ್ಷ ವೇಣುಗೋಪಾಲ್ ಅವರಿಗೆ ಬೆಂಬಲ ನೀಡಿದ್ದರು. ಎರಡನೇ ಅವಧಿಗೆ ಬಿಜೆಪಿ ನಗರಾಧ್ಯಕ್ಷ ಹಾಗೂ ಕೋಟೆ ವಾರ್ಡ್ನ ಮಧುಕುಮಾರ್ ರಾಜ್ ಅರಸ್ ಅವರನ್ನು ನಗರಸಭೆ ಅಧ್ಯಕ್ಷರನ್ನಾಗಿ ಮಾಡಲು ಬಿಜೆಪಿ ಪಕ್ಷದ ಮುಖಂಡರು ಆಂತರಿಕ ಒಪ್ಪಂದ ಮಾಡಿಕೊಂಡಿದ್ದರು.
ಆದರೆ, ನಗರಸಭೆ ಹಾಲಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ತಮ್ಮ ಅಧಿಕಾರವಧಿ ಮುಗಿದ ಸಂದರ್ಭದಲ್ಲಿ ರಾಜೀನಾಮೆ ನೀಡಿ ನಂತರ ಪಕ್ಷದ ಆಂತರಿಕ ಒಪ್ಪಂದ ಮೀರಿ, ಪಕ್ಷ ಮುಖಂಡರ ಸೂಚನೆ ಧಿಕ್ಕರಿಸಿ ರಾಜೀನಾಮೆಯನ್ನು ಹಿಂಪಡೆದಿದ್ದರು. ಎರಡನೇ ಬಾರಿಗೆ ರಾಜೀನಾಮೆ ನೀಡಿದ್ದ ನಗರಸಭೆ ಅಧ್ಯಕ್ಷ ವೇಣುಗೋಪಾಲ್ ಮತ್ತೆ ಪಕ್ಷದ ಮುಖಂಡರ ಸೂಚನೆ ಮೀರಿ ರಾಜೀನಾಮೆ ಹಿಂಪಡೆದು ಪಕ್ಷಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದ್ದರು.
ಈ ಕಾರಣಕ್ಕೆ ಬಿಜೆಪಿ ಜಿಲ್ಲಾ ಮುಖಂಡರು ಹಾಗೂ ಬಿಜೆಪಿ ಪಕ್ಷದ ನಗರಸಭೆ ಸದಸ್ಯರು ಸಭೆ ನಡೆಸಿ ವರಸಿದ್ದ ವೇಣುಗೋಪಾಲ್ ವಿರುದ್ಧ ಶಿಸ್ತು ಕ್ರಮಕೈಗೊಂಡು ಅವರನ್ನು ಪಕ್ಷದಿಂದ ಅಮಾನತು ಮಾಡಿದ್ದರು. ಇದಕ್ಕೂ ಜಗ್ಗದ ವೇಣುಗೋಪಾಲ್ ನಗರಸಭೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿದಿದ್ದರು.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಗರಸಭೆ ಆಡಳಿತ ಮಂಡಳಿ ಸದಸ್ಯರು ನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ನಿರ್ಣಯಿಸಿದ್ದು, ಅವಿಶ್ವಾಸ ಮಂಡನೆ ನಿರ್ಣಯಕ್ಕೆ ಬಿಜೆಪಿ ಪಕ್ಷದ 17 ಸದಸ್ಯರೂ ಸೇರಿದಂತೆ ಜೆಡಿಎಸ್ನ 3 ಹಾಗೂ ಎಸ್ಡಿಪಿಐನ ಓರ್ವ ಸದಸ್ಯೆ ಸಹಿ ಹಾಕಿದ್ದು, ನ.10ಕ್ಕೆ ಅವಿಶ್ವಾಸ ಮಂಡನೆಗೆ ದಿನಾಂಕ ನಿಗದಿಯಾಗಿದ್ದು, ನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ನಿರ್ಣಯಕ್ಕೆ ಎಸ್ಡಿಪಿಐ ಸದಸ್ಯೆ ಮಂಜುಳಾ ಶ್ರೀನಿವಾಸ್ ಸಹಿ ಹಾಕಿರುವ ವಿಚಾರ ಸದ್ಯ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಈ ಸಂಬಂಧ ವಾರ್ತಾಭಾರತಿಯೊಂದಿಗೆ ಮಾತನಾಡಿರುವ ಎಸ್ಡಿಪಿಐ ನಗರಸಭೆ ಸದಸ್ಯೆ ಮಂಜುಳಾ, ''ಕೋಮುವಾದಿ ಪಕ್ಷದೊಂದಿಗೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಬಿಜೆಪಿಯೊಂದಿಗೆ ಎಸ್ಡಿಪಿಐ ಮೈತ್ರಿ ಎಂಬುದು ಖಾಸಗಿ ಮಾಧ್ಯಮಗಳ ಸೃಷ್ಟಿಯಷ್ಟೆ. ನಗರಸಭೆ ಅಧ್ಯಕ್ಷ ವೇಣುಗೋಪಾಲ್ ವ್ಯಾಪಕ ಭ್ರಷ್ಟಾಷಾರದಲ್ಲಿ ಮುಳುಗಿದ್ದಾರೆ. ಅವರ ಭ್ರಷ್ಟಾಚಾರದ ವಿರುದ್ಧ ಹಲವು ಬಾರಿ ಸಂಬಂಧಿಸಿದವರಿಗೆ ದೂರು ನೀಡಿದ್ದರೂ ಕ್ರಮಕೈಗೊಂಡಿಲ್ಲ. ಇಂತಹ ಭ್ರಷ್ಟ ನಗರಸಭೆ ಅಧ್ಯಕ್ಷರನ್ನು ಅಧಿಕಾರದಲ್ಲಿ ಮುಂದುವರಿಸಲು ಸಾಧ್ಯವೇ ಇಲ್ಲ. ಈ ಒಂದು ಕಾರಣಕ್ಕೆ ಅವರ ವಿರುದ್ಧ ಅವಿಶ್ವಾಸ ಮಂಡನೆಗೆ ಮಾತ್ರ ಸಹಿ ಹಾಕಲಾಗಿದೆಯೇ ಹೊರತು, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿಲ್ಲ. ನಗರಸಭೆ ಹಾಲಿ ಅಧ್ಯಕ್ಷ ವೇಣುಗೋಪಾಲ್ ವಿರುದ್ಧ ಅವಿಶ್ವಾಸ ಮಂಡನೆಗೆ ನಮ್ಮ ಸಹಮತ ಇದೆ. ಭ್ರಷ್ಟರನ್ನು ಅಧಿಕಾರದಿಂದ ಕೆಳಗಿಳಿಸುವ ಉದ್ದೇಶದಿಂದ ಅವರ ವಿರುದ್ಧ ಅವಿಶ್ವಾಸ ಮಂಡಿಸಲು ಸಹಿ ಹಾಕಿದ್ದೇನೆಯೇ ಹೊರತು ಬಿಜೆಪಿಯೊಂದಿಗೆ ಎಸ್ಡಿಪಿಐ ಮೈತ್ರಿ ಎಂಬುದು ಮಾಧ್ಯಮಗಳ ಸೃಷ್ಟಿ'' ಎಂದು ಸ್ಪಷ್ಟನೆ ನೀಡಿದರು.
- ವರಸಿದ್ದಿ ವೇಣುಗೋಪಾಲ್- ಚಿಕ್ಕಮಗಳೂರ ನಗರಸಭೆ ಅಧ್ಯಕ್ಷ
''ಬಿಜೆಪಿಯೊಂದಿಗೆ ಎಸ್ಡಿಪಿಐ ಮೈತ್ರಿ ಎಂಬುದು ಕಪೋಲಕಲ್ಪಿತ. ನಗರಸಭೆ ಅಧ್ಯಕ್ಷ ವೇಣುಗೋಪಾಲ್ ಚಿಕ್ಕಮಗಳೂರು ನಗರದಲ್ಲಿ ಅದಿತ್ಯನಾಥ್ ಆಡಳಿತವನ್ನು ಪರಿಚಯಿಸಿ ದಲಿತರು, ಅಲ್ಪಸಂಖ್ಯಾತರ ವಿರುದ್ಧ ವ್ಯಾಪಕ ದೌರ್ಜನ್ಯ ನಡೆಸಿದ್ದಾರೆ. ಎಸ್ಡಿಪಿಐ ಸದಸ್ಯರ ವಾರ್ಡ್ ಸೇರಿದಂತೆ, ಅಲ್ಪಸಂಕ್ಯಾತರು ಇರುವ ವಾರ್ಡ್ಗಳಿಗೆ ನಯಾ ಪೈಸೆಯ ಅನುದಾನವನ್ನೂ ನೀಡದ ನಗರಸಭೆ ಅಧ್ಯಕ್ಷ ವೇಣುಗೋಪಾಲ್ ಸಂವಿಧಾನ ವಿರೋಧಿಯಾಗಿ ಆಡಳಿತ ನಡೆಸಿದ್ದಾರೆ. ವೇಣುಗೋಪಾಲ್ ಅವರ ಇಂತಹ ನಡೆಗಳ ವಿರುದ್ಧ ಎಸ್ಡಿಪಿಐ ಈ ಹಿಂದೆ ಅನೇಕ ಬಾರಿ ಪ್ರತಿಭಟನೆ ಮಾಡಿದೆ. ಅವರನ್ನು ನಗರಸಭೆ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಒಂದು ಅವಕಾಶಕ್ಕಾಗಿ ಎಸ್ಡಿಪಿಐ ಕಾಯುತ್ತಿತ್ತು. ಸದ್ಯ ಅವರ ಪಕ್ಷದ ಸದಸ್ಯರೇ ಅಧ್ಯಕ್ಷನ್ನು ಅಧಿಕಾರದಿಂದ ಕೆಳಗಿಳಿಸಲು ಮುಂದಾಗಿದ್ದಾರೆ. ಈ ಅವಿಶ್ವಾಸ ಮಂಡನೆಗೆ ನಮ್ಮ ಪಕ್ಷದ ಸದಸ್ಯರು ಸಹಿ ಮಾಡಿದ್ದಾರೆ. ವೇಣುಗೋಪಾಲ್ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ನಾವು ಸಹಕಾರ ನೀಡುತ್ತಿದ್ದೇವೆಯೇ ಹೊರತು ಬಿಜೆಪಿಗೆ ನಗರಸಭೆ ಅಧಿಕಾರ ಹಿಡಿಯಲು ಸಹಕಾರ ನೀಡುವುದಿಲ್ಲ''
- ಗೌಸ್ ಮುನೀರ್, ಎಸ್ಡಿಪಿಐ ಜಿಲ್ಲಾಧ್ಯಕ್ಷ