ದ್ವಿತೀಯ ಪಿಯುಸಿ ಫಲಿತಾಂಶ | ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದವರು ಯಾರ್ಯಾರು?

ಸಂಜನಾ ಬಾಯಿ/ದೀಪಶ್ರೀ/ಅಮೂಲ್ಯ ಕಾಮತ್/ದೀಕ್ಷಾ
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ದ್ವಿತೀಯ ಪಿಯುಸಿ ಪರೀಕ್ಷೆ -1ರ ಫಲಿತಾಂಶಗಳನ್ನು ಮಂಗಳವಾರ ಪ್ರಕಟಿಸಿದ್ದು, ರಾಜ್ಯದಲ್ಲಿ ಒಟ್ಟಾರೆ ಶೇಕಡಾವಾರು 73.45 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆಯನ್ನು 6,37,805 ವಿದ್ಯಾರ್ಥಿಗಳು ಬರೆದಿದ್ದರು. ಈ ಪೈಕಿ 4,68,439 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಶೇಕಡಾ 73.45ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಶೇಕಡಾ 53.29ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇಕಡಾ 76.07ರಷ್ಟು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶೇಕಡಾ 82.54ರಷ್ಟು ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಅಮೂಲ್ಯ ಕಾಮತ್, ಆರ್.ದೀಕ್ಷಾ ರಾಜ್ಯಕ್ಕೆ ಪ್ರಥಮ :
ವಿಜ್ಞಾನ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಮೂಲ್ಯ ಕಾಮತ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಮಂಗಳೂರು ಕೊಡಿಯಾಲ್ ಬೈಲ್ ಎಕ್ಸ್ ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ. ಅಮೂಲ್ಯ ಕಾಮತ್ ಅವರು 600 ಕ್ಕೆ 599 ಅಂಕ ಗಳಿಸಿದ್ದಾರೆ.
ತೀರ್ಥಹಳ್ಳಿಯ ಮೇಲಿನ ಕುರುವಳ್ಳಿಯ ವಾಗ್ದೇವಿ ಪದವಿ ಪೂರ್ವ ಕಾಲೇಜಿನ ಆರ್.ದೀಕ್ಷಾ 600 ಕ್ಕೆ 599 ಅಂಕಗಳ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
‘ದ್ವಿತೀಯ ಪಿಯುಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ನನ್ನ ಕಾಲೇಜಿನಲ್ಲಿ ತುಂಬಾ ಬೆಂಬಲ ನೀಡುತ್ತಿದ್ದರು. ಪ್ರತಿ ದಿನ ಸಂಜೆ ಏಳು ಗಂಟೆಯವರೆಗೆ ತರಗತಿ ಇರುತ್ತಿತ್ತು. ಆ ದಿನದ ಪಾಠಗಳನ್ನು ಅವತ್ತೇ ಓದುತ್ತಿದ್ದೆ. ನನ್ನ ಉಪನ್ಯಾಸಕರು ಕಾಲೇಜು ಟೆಸ್ಟ್, ಬೋರ್ಡ್ ಟೆಸ್ಟ್ಗಳನ್ನು ಕೊಟ್ಟು ನನ್ನನ್ನು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ನೆರವಾಗಿದ್ದಾರೆ. ನನ್ನ ಇಂದಿನ ಸಾಧನೆಯ ಎಲ್ಲಾ ಹೊಗಳಿಕೆಯೂ ನನ್ನ ಉಪನ್ಯಾಸಕರಿಗೆ ಸಲ್ಲಬೇಕು. ನನ್ನ ಅಪ್ಪ-ಅಮ್ಮ ತುಂಬಾ ಬೆಂಬಲ ನೀಡಿದ್ದಾರೆ. ನಾನು ಇಂಜಿನಿಯರ್ ಆಗಬೇಕು ಎಂದುಕೊಂಡಿದ್ದೇನೆ’
-ಅಮೂಲ್ಯ ಕಾಮತ್, ವಿದ್ಯಾರ್ಥಿನಿ
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 599 ಅಂಕವನ್ನು ಪಡೆಯುತ್ತೇನೆ ಎಂದು ನಿರೀಕ್ಷೆ ಇರಲಿಲ್ಲ. ಕಾಲೇಜಿನಲ್ಲೇ ಚೆನ್ನಾಗಿ ಪಾಠ ಹೇಳಿಕೊಡುತ್ತಿದ್ದರು. ಹೀಗಾಗಿ ಕಾಲೇಜಿನ ಪಾಠ ಬಿಟ್ಟು ಯಾವುದೇ ಟ್ಯೂಷನ್ಗೆ ಹೋಗಿಲ್ಲ. ಮುಂದೆ ಕಂಪ್ಯೂಟರ್ ಇಂಜಿನಿಯರಿಂಗ್ ಮಾಡಬೇಕೆಂಬ ಬಯಕೆ ಇದೆ.
-ದೀಕ್ಷಾ ಆರ್., ವಿದ್ಯಾರ್ಥಿನಿ
ಕಲಾ ವಿಭಾಗದಲ್ಲಿ ಸಂಜನಾ ಬಾಯಿಗೆ ಪ್ರಥಮ ಸ್ಥಾನ :
ಕಲಾ ವಿಭಾಗದಲ್ಲಿ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಇಂದೂ ಪದವಿ ಪೂರ್ವ ಕಾಲೇಜಿನ ಎಲ್.ಆರ್.ಸಂಜನಾ ಬಾಯಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಸಂಜನಾ ಬಾಯಿ 600 ಅಂಕಗಳಿಗೆ 597 ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ದೀಪಶ್ರೀ ರಾಜ್ಯಕ್ಕೆ ಪ್ರಥಮ :
ವಾಣಿಜ್ಯ ವಿಭಾಗದಲ್ಲಿ ಕೆನರಾ ಪಿಯು ಕಾಲೇಜು ವಿದ್ಯಾರ್ಥಿನಿ ದೀಪಶ್ರೀ ಅವರು 600 ಕ್ಕೆ 599 ಅಂಕ ಗಳಿಸಿ, ಪ್ರಥಮ ಸ್ಥಾನ ಪಡೆದಿದ್ದಾರೆ.
‘ನನ್ನ ಉಪನ್ಯಾಸಕರು ಹಾಗೂ ನನ್ನ ಪೋಷಕರ ಬೆಂಬಲದಿಂದ ನನಗೆ ಪಿಯುಸಿಯಲ್ಲಿ 599 ಅಂಕ ಸಿಕ್ಕಿದೆ. ನಾನು ಯಾವುದೇ ಟ್ಯೂಷನ್ ಹೋಗುತ್ತಿರಲಿಲ್ಲ, ಕಾಲೇಜಿನಲ್ಲಿ ಕಲಿಸಿದ್ದನ್ನು ಮಾತ್ರ ಮನೆಯಲ್ಲಿ ಅಭ್ಯಾಸ ಮಾಡುತ್ತಿದ್ದೆ. ನಾನು ಚಾರ್ಟೆಡ್ ಅಕೌಂಟೆಟ್(ಸಿಎ) ಮಾಡಬೇಕು ಎಂದುಕೊಂಡಿದ್ದೇನೆ’
-ದೀಪಶ್ರೀ ಎಸ್., ವಿದ್ಯಾರ್ಥಿನಿ