ದ್ವಿತೀಯ ಪಿಯುಸಿ ಫಲಿತಾಂಶ: ಶೇ.73.45ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ
ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ
ಬೆಂಗಳೂರು : ದ್ವಿತೀಯ ಪಿಯುಸಿ ಫಲಿತಾಂಶವು ಮಂಗಳವಾರ ಪ್ರಕಟವಾಗಿದ್ದು, ಪಿಯುಸಿ ಪರೀಕ್ಷೆ ಬರೆದಿದ್ದ 6,37,805 ವಿದ್ಯಾರ್ಥಿಗಳ ಪೈಕಿ 4,68,439 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿ ಶೇ.73.45ರಷ್ಟು ಉತ್ತೀರ್ಣತೆ ದಾಖಲಾಗಿದೆ. ಮೂವರು ವಿದ್ಯಾರ್ಥಿನಿಯರು ಪ್ರಥಮ ಸ್ಥಾನದಲ್ಲಿದ್ದು, ಕರಾವಳಿ ಜಿಲ್ಲೆಗಳೇ ಈ ಬಾರಿಯೂ ಮುಂಚೂಣಿಯಲ್ಲಿವೆ.
ಉಡುಪಿ ಜಿಲ್ಲೆಯಲ್ಲಿ ಶೇ.93.90 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ದಕ್ಷಿಣ ಕನ್ನಡ ದ್ವಿತೀಯ ಸ್ಥಾನದಲ್ಲಿದ್ದು, ಶೇ.93.57 ಉತ್ತೀರ್ಣತೆ ದಾಖಲಾಗಿದೆ. ಬೆಂಗಳೂರು ದಕ್ಷಿಣ ತೃತೀಯ ಸ್ಥಾನದಲ್ಲಿದ್ದು, ಶೇ.85.36 ಉತ್ತೀರ್ಣತೆ ದಾಖಲಾಗಿದೆ. ಬೆಂಗಳೂರು ಉತ್ತರ ಶೇ.83.84, ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.82.93 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಮೂಲ್ಯ ಕಾಮತ್, ಶಿವಮೊಗ್ಗ ಜಿಲ್ಲೆಯ ದೀಕ್ಷಾ ಆರ್. 600 ಅಂಕಗಳಿಗೆ 599 ಅಂಕಗಳನ್ನು ಹಾಗೂ ವಾಣಿಜ್ಯ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ದೀಪಶ್ರೀ ಎಸ್. 599 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದಾರೆ. ಕಲಾವಿಭಾಗದಲ್ಲಿ ಬಳ್ಳಾರಿ ಜಿಲ್ಲೆಯ ಖಾಸಗಿ ಶಾಲೆಯ ಕನ್ನಡ ಮಾಧ್ಯಮದ ವಿದ್ಯಾರ್ಥಿನಿ ಎಲ್.ಆರ್. ಸಂಜನಾ ಬಾಯಿ 597 ಅಂಕಗಳನ್ನು ಗಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ಜಿಲ್ಲೆಗಳು ಕೊನೆಯ ಸ್ಥಾನದಲ್ಲಿದ್ದು, ಯಾದಗಿರಿ ಶೇ.48.45, ಕಲಬುರಗಿ ಶೇ.55.70, ರಾಯಚೂರು ಶೇ.58.75 ಉತ್ತೀರ್ಣತೆ ದಾಖಲಾಗಿದೆ. ವಿಜಯಪುರ ಶೇ.58.81, ಚಿತ್ರದುರ್ಗ ಶೇ.59.87, ಬಳ್ಳಾರಿ ಶೇ.64.41, ಬೆಳಗಾವಿ ಶೇ.65.37, ಗದಗ ಶೇ.66.64, ಚಿಕ್ಕೋಡಿ ಶೇ.66.76ರಷ್ಟು ಉತ್ತೀರ್ಣತೆಯನ್ನು ಸಾಧಿಸಿದೆ.
ಖಾಸಗಿ ಪಿಯು ಕಾಲೇಜುಗಳಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, 3,30,458 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಈ ಪೈಕಿ 2,73,156 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇಕಡಾವಾರು 82.66ರಷ್ಟು ಫಲಿತಾಂಶ ದಾಖಲಾಗಿದೆ. ಸರಕಾರಿ ಕಾಲೇಜುಗಳಲ್ಲಿ 1,44,425 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು, 82,474 ಮಂದಿ ತೇರ್ಗಡೆಯಾಗಿದ್ದಾರೆ, ಶೇ.57.11ರಷ್ಟು ಉತ್ತೀರ್ಣತೆ ದಾಖಲಾಗಿದೆ.
ಅನುದಾನಿತ ಪಿಯು ಕಾಲೇಜುಗಳಲ್ಲಿ 98,649 ವಿದ್ಯಾರ್ಥಿಗಳು ಹಾಜರಾಗಿದ್ದು, 61,839 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ, ಶೇಕಡಾವಾರು 62.69ರಷ್ಟು ಉತ್ತೀರ್ಣತೆ ದಾಖಲಾಗಿದೆ. ಬಿಬಿಎಂಪಿ ಪಿಯು ಕಾಲೇಜುಗಳಲ್ಲಿ 2,217 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1,527(ಶೇ.68.88) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ(ಕ್ರೈಸ್) ಕಾಲೇಜುಗಳಲ್ಲಿ 11,829 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 8,458 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇಕಡಾ 71.48 ಉತ್ತೀರ್ಣತೆಯನ್ನು ಸಾಧಿಸಿವೆ.
ಸಂಯೋಜನೆಯ ಆಧಾರದ ಮೇಲೆ, ಕಲಾ ವಿಭಾಗದಲ್ಲಿ 1,53,043 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 81,553 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 2,04,329 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1,55,425 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 2,80,433 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2,31,461 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗ ಶೇಕಡಾ 82.54ರಷ್ಟು ಉತ್ತೀರ್ಣರಾಗಿದ್ದಾರೆ.
ನಗರ ಪ್ರದೇಶದಲ್ಲಿ 5,03,300 ಮಂದಿ ಪರೀಕ್ಷೆ ಬರೆದಿದ್ದು, 3,75,188 ಮಂದಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ, ಶೇ.74.55ರಷ್ಟು ಉತ್ತೀರ್ಣತೆ ದಾಖಲಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ 1,34,505 ಮಂದಿ ಪರೀಕ್ಷೆ ಬರೆದಿದ್ದು, 93,251 ಮಂದಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ, ಶೇ.69.33 ಉತ್ತೀರ್ಣತೆ ದಾಖಲಾಗಿದೆ. ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳು ಶೇ.81.75, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಶೇ.56.37ರಷ್ಟು ಉತ್ತೀರ್ಣತೆಯನ್ನು ದಾಖಲಿದ್ದಾರೆ.
ಕನ್ನಡ ಭಾಷಾ ಪರೀಕ್ಷೆಯಲ್ಲಿ 5,414, ಗಣಿತ 4,038, ಜೀವಶಾಸ್ತ್ರ 2,346, ಸಂಸ್ಕೃತ 2,536, ಸಂಖ್ಯಾಶಾಸ್ತ್ರ 2,013, ವ್ಯವಹಾರ ಅಧ್ಯನ 1,482, ಗಣಕ ವಿಜ್ಞಾನ 1,137, ಇತಿಹಾಸ 958, ಅರ್ಥಶಾಸ್ತ್ರ 613, ಲೆಕ್ಕಶಾಸ್ತ್ರ 529, ಭೌತಶಾಸ್ತ್ರ 496, ರಸಾಯನಶಾಸ್ತ್ರ 613 ವಿದ್ಯಾರ್ಥಿಗಳು ನೂರಕ್ಕೆ ನೂರರಷ್ಟು ಅಂಕಗಳನ್ನು ಪಡೆದಿದ್ದಾರೆ.
ಬಾಲಕಿಯರೇ ಮೇಲುಗೈ:
ಈ ಬಾರಿಯೂ ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಶೇ.77.88 ಬಾಲಕಿಯರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. 3,45,694 ಬಾಲಕಿಯರು ಪರೀಕ್ಷೆಗೆ ಹಾಜರಾಗಿದ್ದು, 2,69,212 ಬಾಲಕಿಯರು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 2,92,111 ಬಾಲಕರು ಪರೀಕ್ಷೆಗೆ ಹಾಜರಾಗಿದ್ದು, 1,99,227 ಮಂದಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಈ ಮೂಲಕ ಶೇ.68.20ರಷ್ಟು ಬಾಲಕರು ಮಾತ್ರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
90 ಖಾಸಗಿ ಶಾಲೆಗಳ ಫಲಿತಾಂಶ ಶೂನ್ಯ:
103 ಖಾಸಗಿ ಪಿಯು ಕಾಲೇಜುಗಳು ಶೇ.100ರಷ್ಟು ಅಂಕಗಳನ್ನು ಪಡೆದಿದ್ದರೆ, 90 ಖಾಸಗಿ ಕಾಲೇಜುಗಳು ಶೂನ್ಯ ಫಲಿತಾಂಶವನ್ನು ನೀಡಿವೆ. 3 ಅನುದಾನಿತ, 13 ಸರಕಾರಿ, 15 ವಸತಿ ಶಾಲಾ ಪದವಿ ಪೂರ್ವ ಕಾಲೇಜುಗಳು ಶೇ.100ರಷ್ಟು ಫಲಿತಾಂಶವನ್ನು ದಾಖಲಿಸಿವೆ. 20 ಅನುದಾನಿತ, 8 ಸರಕಾರಿ, 5 ವಸತಿ ಶಾಲಾ ಪದವಿ ಪೂರ್ವ ಕಾಲೇಜುಗಳು ಶೂನ್ಯ ಫಲಿತಾಂಶವನ್ನು ದಾಖಲಿಸಿವೆ.
8 ಸಾವಿರ ವಿದ್ಯಾರ್ಥಿಗಳು ಕೃಪಾಂಕದಿಂದ ಉತ್ತೀರ್ಣ:
ಈ ಬಾರಿ ಒಟ್ಟು 8 ಸಾವಿರ ವಿದ್ಯಾರ್ಥಿಗಳು ಕೃಪಾಂಕದಿಂದ ಉತ್ತೀರ್ಣಗಿದ್ದಾರೆ. 1,00,571 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ(ಡಿಸ್ಟಿಂಕ್ಷನ್), 2,78,054 ವಿದ್ಯಾರ್ಥಿಗಳು ಪ್ರಥಮ ದರ್ಜೆ, 70,969 ದ್ವಿತೀಯ ದರ್ಜೆ, 18,845 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಉಳಿದ 1,69,366 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ.
ಮರುಮೌಲ್ಯಮಾಪನ:
ಉತ್ತರ ಪತ್ರಿಕೆಯ ಸ್ಕ್ಯಾನ್ಡ್ ಪ್ರತಿಗೆ ಅರ್ಜಿ ಸಲ್ಲಿಸಲು ಎ.8ರಿಂದ ಎ.13ರವರೆಗೆ ಅವಕಾಶ ನೀಡಲಾಗಿದೆ. ಎ.12ರಿಂದ ಎ.16ರವರೆಗೆ ಸ್ಕ್ಯಾನ್ಡ್ ಪ್ರತಿಯನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದು. ಎ.12ರಿಂದ ಎ.17 ಮರುಮೌಲ್ಯಮಾಪನ ಹಾಗೂ ಮರು ಎಣಿಕೆಗೆ ಅರ್ಜಿ ಸಲ್ಲಿಸಬಹುದು. ಸ್ಕ್ಯಾನ್ಡ್ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ 530 ರೂ. ಮತ್ತು ಮರುಮೌಲ್ಯಮಾಪನದ ಶುಲ್ಕ ಪ್ರತಿ ವಿಷಯಕ್ಕೆ 1,670 ರೂ. ಪಾವತಿಸಬೇಕಾಗಿದೆ.
ಪರೀಕ್ಷೆ-2ಕ್ಕೆ ನೋಂದಣಿ:
ಫಲಿತಾಂಶವನ್ನು ಉತ್ತಮಪಡಿಸಿಕೊಳ್ಳುವ ಹಾಗೂ ಅನುತ್ತೀರ್ಣರಾದ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. ದಂಡ ರಹಿತವಾಗಿ ಪರೀಕ್ಷಾ ಶುಲ್ಕವನ್ನು ಪಾವತಿ ಮಾಡಲು ಎ.15ರವರೆಗೆ, ದಂಡದೊಂದಿಗೆ ಪರೀಕ್ಷಾ ಶುಲ್ಕವನ್ನು ಪಾವತಿ ಮಾಡಲು ಎ.17ರವರೆಗೆ ಅವಕಾಶ ನೀಡಲಾಗಿದೆ.