ಸಂವಿಧಾನದ ವಿರುದ್ಧ ವಿಷಕಾರಿಯಾಗಿ ವರ್ತಿಸುವ ಸ್ವಾಮೀಜಿಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು: ಡಾ. ಮಹದೇವಪ್ಪ

ಡಾ.ಎಚ್.ಸಿ.ಮಹದೇವಪ್ಪ
ಬೆಂಗಳೂರು: ಸಂವಿಧಾನದ ಮಹತ್ವದ ಅರಿಯದೇ, ವಿಷಕಾರಿಯಾಗಿ ವರ್ತಿಸುವ ಸ್ವಾಮೀಜಿಗಳ ವಿರುದ್ಧ ಕೇಂದ್ರ ಸರಕಾರ ಕೂಡಲೇ ದೇಶದ್ರೋಹದ ಪ್ರಕರಣವನ್ನು ದಾಖಲಿಸಬೇಕು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆಗ್ರಹಿಸಿದ್ದಾರೆ.
ಸೋಮವಾರ ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಜ.26ರಂದು ದೇಶದೆಲ್ಲೆಡೆ, ಎಲ್ಲರ ಹಿತಕಾಯುವ ಮತ್ತು ಸಮಾನತೆಯನ್ನು ಬಯಸಿದ ದೇಶದ ಸಂವಿಧಾನಕ್ಕೆ ನಮನ ಸಲ್ಲಿಸುತ್ತಿದ್ದರೆ, ಉತ್ತರ ಪ್ರದೇಶದಲ್ಲಿ ಶಾಂಭವಿ ಪೀಠಾಧೀಶ್ವರ ಸ್ವಾಮಿ ಆನಂದ್ ಸ್ವರೂಪ್ ಮಹಾರಾಜ್, ‘ರಾಮರಾಜ್ಯ, ಮನುಸ್ಮೃತಿ, ಧರ್ಮಶಾಸ್ತ್ರ ಹಾಗೂ ಚಾಣಕ್ಯನ ಪುಸ್ತಕಗಳನ್ನು ಆಧರಿಸಿದ, 501 ಪುಟಗಳ ಸಂವಿಧಾನವನ್ನು ಫೆ.3ರಂದು ಮಹಾಕುಂಭ ಮೇಳದಲ್ಲಿ ಅನಾವರಣ ಮಾಡುವುದಾಗಿ ಹೇಳಿದ್ದಾರೆ. ಇದು ದೇಶದ್ರೋಹದ ವಿಷಯ ಎಂದು ಟೀಕಿಸಿದ್ದಾರೆ.
ದೇಶದಲ್ಲಿ ಎಲ್ಲರ ಹಿತ ಕಾಯುವ ಮತ್ತು ಈ ನೆಲದ ಆತ್ಮವೆಂದೇ ಹೆಸರಾದ ಸಂವಿಧಾನವು ಅಸ್ತಿತ್ವದಲ್ಲಿ ಇರುವಾಗ ಇದರ ಮಹತ್ವ ಅರಿಯದೇ ದೇಶದ್ರೋಹದ ಹೇಳಿಕೆ ನೀಡುತ್ತಿರುವ ಸ್ವಾಮೀಜಿಗಳ ಮಾತುಗಳನ್ನು ವರದಿ ಮಾಡಲಾಗಿದೆ ಬಿಟ್ಟರೆ, ಬಹುತೇಕ ಮಾಧ್ಯಮಗಳು ಅದನ್ನು ದ್ರೋಹದ ಕೃತ್ಯ ಎಂದು ಜನರಿಗೆ ತಿಳಿಸುವ ಪ್ರಯತ್ನ ಮಾಡದಿರುವುದು ನನ್ನಲ್ಲಿ ಅಚ್ಚರಿ ಮೂಡಿಸಿದೆ ಎಂದು ಅವರು ಬೇಸರ ಹೊರಹಾಕಿದ್ದಾರೆ.
ಇತ್ತೀಚೆಗಷ್ಟೇ ಸಂವಿಧಾನದ ಕುರಿತು ಅಪಸ್ವರ ಎತ್ತಿದ್ದ ಉಡುಪಿಯ ಪೇಜಾವರರ ನಂತರ ಇದೀಗ ಸ್ವಾಮೀಜಿಯ ವಲಯದಿಂದಲೇ ಮತ್ತೆ ಸಂವಿಧಾನದ ಕುರಿತು ಅಪಸ್ವರ ಎದ್ದಿದೆ. ಈ ಅಪಸ್ವರವು ಇತಿಹಾಸ ಪೂರ್ವದಿಂದಲೂ ಇದ್ದು ಇದರ ವಿರುದ್ಧವೇ ಇರುವ ನಮ್ಮೆಲ್ಲರ ಹೋರಾಟವೂ ಅಷ್ಟೇ ಐತಿಹಾಸಿಕವಾಗಿದೆ ಎಂದು ಹೇಳಿದ್ದಾರೆ.
‘ಹೆಣ್ಣು ಮಕ್ಕಳ ಸಮಾನ ಹಕ್ಕುಗಳನ್ನು ತಿರಸ್ಕರಿಸುವ ಮತ್ತು ಶೋಷಿತರ ನೆರಳನ್ನೂ ಕಂಡರೆ ಅಸಹ್ಯ ಪಡುವ ಮನುಸ್ಮೃತಿ ಮತ್ತು ಮೌಢ್ಯವನ್ನೇ ಉಸಿರಾಡುವ ಧಾರ್ಮಿಕ ಗ್ರಂಥಗಳನ್ನು ಆಧರಿಸಿ ರಚಿಸಿರುವ ಸಂವಿಧಾನವು, ಸಂವಿಧಾನದ ಹೆಸರಲ್ಲಿ ರಚಿತಗೊಂಡಿರುವ ಇನ್ನೊಂದು ಮನುಸ್ಮೃತಿ ಆಗಿದ್ದು, ಇದನ್ನು ಬಾಬಾ ಸಾಹೇಬರು ಸುಟ್ಟ ರೀತಿಯಲ್ಲೇ ಮತ್ತೊಮ್ಮೆ ಸುಡಬೇಕಾಗಿರುವುದು ಭಾರತೀಯರಾದ ನಮ್ಮೆಲ್ಲರ ಜವಾಬ್ದಾರಿ ಆಗಿದೆ’
-ಡಾ.ಎಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ
ಜನವರಿ 26 ರ ದಿನಾಂಕದಂದು ದೇಶದೆಲ್ಲೆಡೆ ನಾವು ಸಂವಿಧಾನ ದಿನಾಚರಣೆಯನ್ನು ಆಚರಿಸಿ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬರಿಗೆ ನಮನವನ್ನು ಸಲ್ಲಿಸಿದ್ದೇವೆ.
— Dr H C Mahadevappa(Buddha Basava Ambedkar Parivar) (@CMahadevappa) January 27, 2025
ಇಡೀ ದೇಶವೇ ಎಲ್ಲರ ಹಿತ ಕಾಯುವ ಮತ್ತು ಜನ ಸಾಮಾನ್ಯರ ಸಮಾನವಾದ ಏಳಿಗೆಯನ್ನು ಬಯಸಿದ ದೇಶದ ಸಂವಿಧಾನಕ್ಕೆ ನಮನ ಸಲ್ಲಿಸುತ್ತಿದ್ದರೆ ಅತ್ತ ಭಾರತದ ಭಾಗವೇ ಆಗಿರುವ ಉತ್ತರ ಪ್ರದೇಶದಲ್ಲಿ ಶಾಂಭವಿ… pic.twitter.com/DFJ0EKWafT