ಹಿರಿಯ ಸಾಹಿತಿ, ಚಿಂತಕ ಪ್ರೊ. ಎಂ. ಕರೀಮುದ್ದೀನ್ ನಿಧನ
ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ
ಮಂಡ್ಯ/ಶ್ರೀರಂಗಪಟ್ಟಣ, ಸೆ.2: ಹಿರಿಯ ಸಾಹಿತಿ, ಬಹು ಭಾಷಾ ವಿದ್ವಾಂಸ ಹಾಗೂ ಪ್ರಗತಿಪರ ಚಿಂತಕ ಪ್ರೊ.ಎಂ.ಕರೀಮುದ್ದೀನ್(95) ವಯೋಸಹಜ ಅನಾರೋಗ್ಯದಿಂದ ಶ್ರೀರಂಗಪಟ್ಟಣದ ಗಂಜಾಂನ ತಮ್ಮ ಸ್ವಗೃಹದಲ್ಲಿ ಶನಿವಾರ ಬೆಳಗಿನ ಜಾವ ನಿಧನರಾಗಿದ್ದಾರೆ.
ಅವಿವಾಹಿತರಾಗಿದ್ದ ಕರೀಮುದ್ದೀನ್ ಮೈಸೂರು, ಮಂಡ್ಯ, ಮಡಿಕೇರಿ, ಇತರೆಡೆ ಸರಕಾರಿ ಪದವಿ ಕಾಲೇಜುಗಳಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ನಂತರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಕುವೆಂಪು ಅವರ ವಿದ್ಯಾರ್ಥಿಯಾಗಿದ್ದ ಅವರು ಕನ್ನಡ, ಇಂಗ್ಲೀಷ್, ಉರ್ದು, ಪರ್ಷಿಯನ್, ಅರೇಬಿಕ್ ಮತ್ತು ಸಂಸ್ಕೃತ ಭಾಷೆಗಳನ್ನು ಅಧ್ಯಯನ ಮಾಡಿದ್ದರು.
ಅನಾಥ ಮುಸ್ಲಿಮರು, ಸಂಚಿತ ಚಿಂತನ, ಬಾಳು ಬದುಕು ಸೇರಿದಂತೆ ಹಲವು ಕೃತಿಗಳನ್ನು ಅವರು ಬರೆದಿದ್ದರು. ಆಕಾಶವಾಣಿಯಲ್ಲಿ ಇವರ ಸಾಕಷ್ಟು ಚಿಂತನ ಭಾಷಣಗಳು ಜನಪ್ರಿಯವಾಗಿದ್ದವು. 9ನೇ ತರಗತಿಯ ಉರ್ದು ಮಾಧ್ಯಮದಲ್ಲಿ ಕನ್ನಡವನ್ನು ದ್ವಿತೀಯ ಭಾಷೆಯಾಗಿ ಕಲಿಯುತ್ತಿದ್ದ ವಿದ್ಯಾರ್ಥಿಗಳಿಗೆ ‘ಪ್ರೊ.ಕರಿಮುದ್ದೀನ್ ಅವರ ಜೀವನ ಮತ್ತು ಸಾಹಿತ್ಯ’ ಪಠ್ಯವಾಗಿತ್ತು.
ಉತ್ತಮ ವಾಗ್ಮಿಯಾಗಿದ್ದ ಕರೀಮುದ್ದೀನ್ ರೈತ, ದಲಿತ, ಕನ್ನಡಪರ, ಪ್ರಗತಿಪರ, ಮೌಢ್ಯ ವಿರೋಧಿ ಚಳವಳಿಗಳಲ್ಲಿ ಇಳಿವಯಸ್ಸಿನಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇವರ ಪೂರ್ವಿಕರು ಟಿಪ್ಪು ಸುಲ್ತಾನ್ ಸಂಬಂಧಿಗಳಾಗಿದ್ದರು.
ಮೈಸೂರಿನ ಮಹರಾಜ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿದ್ದ ಕರೀಮುದ್ದೀನ್ ಕನ್ನಡ ವ್ಯಾಕರಣ, ಹಳಗನ್ನಡ ಮತ್ತು ಹೊಸಗನ್ನಡ ಸಾಹಿತ್ಯದಲ್ಲಿ ಸಾಕಷ್ಟು ಪರಿಣಿತಿ ಹೊಂದಿದ್ದರು. ಇದರ ಜೊತೆಗೆ ಟಿಪ್ಪು ಸುಲ್ತಾನ್ ಕುರಿತು ಸಾಕಷ್ಟು ಸಂಶೋಧನೆ ಮಾಡಿದ್ದರು.ಟಿಪ್ಪು ಸುಲ್ತಾನ್ ಇತಿಹಾಸದ ಬಗ್ಗೆ ಸಾಕಷ್ಟು ಸಂಗ್ರಹ ಕೃತಿಗಳನ್ನು ಬರೆದಿದ್ದರು ಎನ್ನಲಾಗಿದೆ.
ಇವರ ನಿಧನ ಕನ್ನಡ ನಾಡಿಗೆ ಅಪಾರ ನಷ್ಟವನ್ನುಂಟು ಮಾಡಿದೆ ಎಂದು ಇವರ ಸ್ನೇಹಿತ ಪ್ರೊ.ನಂಜರಾಜ ಅರಸು ಸಂತಾಪ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಂತಾಪ
ʼಹಿರಿಯ ಸಾಹಿತಿ ಮತ್ತು ಜನಪ್ರಿಯ ಪ್ರಾಧ್ಯಾಪಕರಾಗಿದ್ದ ಪ್ರೊ.ಎಂ.ಕರಿಮುದ್ದೀನ್ ಅವರ ಸಾವಿನ ಸುದ್ದಿ ತಿಳಿದು ದು:ಖವಾಯಿತು. ಸರಳ ಸಜ್ಜನರಾಗಿದ್ದ ಪ್ರೊ. ಕರಿಮುದ್ದೀನ್ ಅವರು ಬಡವರ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿದ್ದರು. ಅವರ ಕುಟುಂಬ ವರ್ಗದ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆʼ
- ಮುಖ್ಯಮಂತ್ರಿ ಸಿದ್ದರಾಮಯ್ಯ