ರಾಜಕೀಯ ಚರ್ಚೆಗೆ ಗ್ರಾಸವಾದ ಹಿರಿಯ ಶಾಸಕ ಬಿ.ಆರ್.ಪಾಟೀಲ್ ಪತ್ರ!
ಬೆಂಗಳೂರು: ‘ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದಿಂದ ನಾನು ಹಣ ಪಡೆದುಕೊಂಡಿದ್ದೇನೆ’ ಎಂಬ ಬಗ್ಗೆ ತನಿಖೆಗೆ ಆದೇಶ ನೀಡಿ ನನ್ನನ್ನು ಆರೋಪ ಮುಕ್ತ ಮಾಡಬೇಕು. ನನ್ನ ಮೇಲಿನ ಆರೋಪ ಸಾಬೀತಾದರೇ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವ ನಿರ್ಧಾರ ಮಾಡಿದ್ದೇನೆ’ಎಂಬ ಆಳಂದ ಕ್ಷೇತ್ರದ ಕಾಂಗ್ರೆಸ್ನ ಹಿರಿಯ ಶಾಸಕ ಬಿ.ಆರ್. ಪಾಟೀಲ್, ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಬರೆದಿರುವ ಪತ್ರ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ‘ಈ ಸರಕಾರದಲ್ಲಿ ಶಾಸಕರಿಗೆ ಎಷ್ಟು ಬೆಲೆ ಇದೆ ಎನ್ನುವುದು ಬಿ.ಆರ್.ಪಾಟೀಲ್ ಪತ್ರದಿಂದಲೇ ಗೊತ್ತಾಗುತ್ತದೆ. ಇದು ನಿರಂತರ ನಡೆಯುತ್ತಿದ್ದು, ಆಡಳಿತ ಪಕ್ಷದಲ್ಲಿ ಏನಾಗುತ್ತದೆ ಎಂಬ ಸರಕಾರ ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ’ ಎಂದು ಸಲಹೆ ನೀಡಿದ್ದಾರೆ. ಆದರೆ, ಸಚಿವ ಎಂ.ಬಿ.ಪಾಟೀಲ್, ‘ಹಿರಿಯರಾದ ಬಿ.ಆರ್.ಪಾಟೀಲ್ ಅವರು ಭಾವನಾತ್ಮಕವಾಗಿ ಸಿಎಂಗೆ ಪತ್ರ ಬರೆದಿದ್ದಾರೆ’ ಎಂದು ಸಮರ್ಥನೆ ನೀಡಿದ್ದಾರೆ.
ಪಾಟೀಲ್ ಏನಿದು ಪತ್ರ: ‘ನಾನು ಈ ಹಿಂದೆ 2013ರಲ್ಲಿ ಶಾಸಕನಾಗಿದ್ದಾಗ ಕ್ಷೇತ್ರದಲ್ಲಿ ಕೆಲ ಕಾಮಗಾರಿಗಳನ್ನು ಕೆಆರ್ ಐಡಿಎಲ್ಗೆ ನೀಡಿದ್ದೆ. ಆದರೆ, ಕಾರಣಾಂತರಗಳಿಂದ 2013ರಲ್ಲಿ ನೀಡಿದ್ದ ಕಾಮಗಾರಿಗಳು ಪೂರ್ಣವಾಗಿಲ್ಲ. ಈ ಬಗ್ಗೆ ನಾನು ಕಳೆದ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದಾಗ ನನ್ನನ್ನೆ ಅನುಮಾನದಿಂದ ನೋಡಲಾಯಿತು.
ಅಂದಿನ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಅನುಪಸ್ಥಿತಿಯಲ್ಲಿ ಸಚಿವ ಕೃಷ್ಣ ಭೈರೇಗೌಡ ನನ್ನ ಮೇಲೆ ಅನುಮಾನ ಬರುವಂತೆ ಸದನದಲ್ಲಿ ಮಾತನಾಡಿದರು. ಕೆಆರ್ ಐಡಿಎಲ್ ಕಡೆಯಿಂದ ನಾನು ಹಣ ಪಡೆದು ಭೂಸೇನೆಗೆ ಕಾಮಗಾರಿ ವಹಿಸಿದ್ದೇನೆಂದು ಸಂಶಯ ಮೂಡುವಂತೆ ಮಾತನಾಡಿದ್ದರು. ಆ ಬಳಿಕ ಪ್ರಿಯಾಂಕ ಖರ್ಗೆ ಕಾಮಗಾರಿಗಳ ಕುರಿತು ಸಭೆ ನಡೆಸಲಿಲ್ಲ.
ನಾನು ಇದೀಗ ಇಂತಹ ಆರೋಪಗಳನ್ನು ಹೊತ್ತುಕೊಂಡು ಬೆಳಗಾವಿ ಅಧಿವೇಶನಕ್ಕೆ ಹಾಜರಾಗುವುದು ಸರಿಯಲ್ಲ. ಆರೋಪಗಳನ್ನು ಹೊತ್ತು ಸದನಕ್ಕೆ ಬಂದರೆ ನಾನು ಆರೋಪ ಒಪ್ಪಿಕೊಂಡಂತಾಗುತ್ತದೆ. ಹೀಗಾಗಿ ನನ್ನ ಮೇಲೆ ಬಂದ ಆರೋಪಗಳ ಕುರಿತು ತನಿಖೆ ನಡೆಸಿ. ಸತ್ಯಾಸತ್ಯತೆ ಹೊರ ಬರಲು ತನಿಖೆಗೆ ಆದೇಶ ನೀಡಿ, ನನ್ನನ್ನು ಆರೋಪ ಮುಕ್ತ ನನ್ನಾಗಿ ಮಾಡಬೇಕು.
ಒಂದು ವೇಳೆ ನನ್ನ ಮೇಲಿನ ಆರೋಪ ಸಾಬೀತಾದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದನಿದ್ದೇನೆ. ಪಂಚ ರಾಜ್ಯ ಚುನಾವಣೆ ಇರುವುದರಿಂದ ಪಕ್ಷದ ಮೇಲೆ ಪ್ರತಿಕೂಲ ಪರಿಣಾಮ ಬೀರಬಾರದೆಂದು ಈಗ ಪತ್ರ ಬರೆಯುತ್ತಿದ್ದೇನೆ. ಕೂಡಲೇ ತನಿಖಾ ಆಯೋಗ ರಚನೆ ಮಾಡಬೇಕು’ ಎಂದು ಶಾಸಕ ಬಿ.ಆರ್.ಪಾಟೀಲ್, ಸಿಎಂಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಭಾವನಾತ್ಮಕ ಪತ್ರ: ‘ಹಿರಿಯ ಶಾಸಕರಾದ ಬಿ.ಆರ್.ಪಾಟೀಲ್ ಸೂಕ್ಷ್ಮ ಸ್ವಭಾವದವರು. ಹೀಗಾಗಿ ಭಾವನಾತ್ಮಕವಾಗಿ ಸಿಎಂ ಸಿದ್ದರಾಮಯ್ಯರಿಗೆ ಪತ್ರ ಬರೆದಿರಬಹುದು. ಅವರು ಸಜ್ಜನ ರಾಜಕಾರಣಿ. ತತ್ವ, ಸಿದ್ದಾಂತದ ಮೇಲೆ ರಾಜಕಾರಣ ಮಾಡಿದವರು. ನಾನು ಚಿಕ್ಕವನಿಂದ ಅವರನ್ನು ನೋಡಿದ್ದೇನೆ. ಅವರ ನೋವನ್ನು ಅವರು ಹೇಳಿಕೊಂಡಿದ್ದಾರೆ’ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿಕ್ರಿಯೆ ನೀಡಿದ ಅವರು, ‘ಅವರ ಮೇಲೆ ಯಾರಾದರೂ ಆರೋಪ ಮಾಡಿದರೆ ಜನ ಒಪ್ಪಲ್ಲ. ರಾಜಕೀಯ ವ್ಯವಸ್ಥೆಯಲ್ಲಿ ಇಂತಹ ಆರೋಪಗಳು ಸಹಜ. ಹೀಗಾಗಿ ಭಾವನಾತ್ಮಕವಾಗಿ ಪತ್ರ ಬರೆದಿರಬಹುದು. ನಾನು ಆ ಪತ್ರ ನೋಡಿಲ್ಲ. ಸಿಎಂ, ಪಾಟೀಲ್ ಜೊತೆ ಚರ್ಚೆ ಮಾಡಲಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪತ್ರ ಬರೆದು ಉತ್ನತ ಮಟ್ಟದ ನೈತಿಕತೆ ಮೆರೆದಿದ್ದಾರೆ. ಪತ್ರ ಬರೆದಿದ್ದಕ್ಕೆ ಪ್ರಶಂಸಿಸಬೇಕು’ಎಂದು ಹೇಳಿದರು.