ಬೆಂಗಳೂರಿಗೆ ಪ್ರತ್ಯೇಕ ಚಿರತೆ ಕಾರ್ಯಪಡೆ: ಸಚಿವ ಈಶ್ವರ ಖಂಡ್ರೆ
(FILE PHOTO | PTI)
ಬೆಂಗಳೂರು, ನ.6: ಬೆಂಗಳೂರು ನಗರದ ವಸತಿ ಪ್ರದೇಶಗಳಲ್ಲಿ ಪದೇ ಪದೇ ಚಿರತೆಗಳು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಗರಕ್ಕೆ ಪ್ರತ್ಯೇಕ ಸಮರ್ಪಿತ ಕ್ಷಿಪ್ರ ಚಿರತೆ ಕಾರ್ಯಪಡೆ ರಚಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.
ಈ ಬಾರಿ ಮಳೆಯ ಅಭಾವ ಇರುವ ಹಿನ್ನೆಲೆಯಲ್ಲಿ ಆಹಾರ ಹುಡುಕಿಕೊಂಡು ವನ್ಯ ಮೃಗಗಳು ಕಾಡಿನಿಂದ ನಾಡಿಗೆ ಹೆಚ್ಚಾಗಿ ಬರುತ್ತಿವೆ. ಅದರಲ್ಲೂ ಬೆಂಗಳೂರು ನಗರದ ಹೊರವಲಯದಲ್ಲಿ ಕಾಡು ಮತ್ತು ಬೆಟ್ಟಗುಡ್ಡ ಇರುವ ಪ್ರದೇಶದಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಜನರಲ್ಲಿ ಆತಂಕ ಮೂಡಿದೆ. ಕೂಡಲೇ ಬೆಂಗಳೂರಿನಲ್ಲಿ ಒಂದು ಕ್ಷಿಪ್ರ ಚಿರತೆ ಕಾರ್ಯಪಡೆ ರಚಿಸಿ, ವನ್ಯಮೃಗಗಳು ನಾಡಿಗೆ ಬಂದರೆ ಕೂಡಲೇ ಸೆರೆ ಹಿಡಿದು ಕಾಡಿಗೆ ಅಥವಾ ಪುನರ್ವಸತಿ ಕೇಂದ್ರಕ್ಕೆ ಕಳುಹಿಸುವ ಕಾರ್ಯವನ್ನು ತ್ವರಿತವಾಗಿ ಮಾಡುವಂತೆ ಸೂಚನೆ ನೀಡಿದ್ದಾರೆ.
ಈಗಾಗಲೇ ಹಾಲಿ ಇದ್ದ 5 ಆನೆ ಕ್ಷಿಪ್ರಕಾರ್ಯಪಡೆಗಳ ಜೊತೆಗೆ ಬೆಂಗಳೂರು (ಬನ್ನೇರುಘಟ್ಟ) ಮತ್ತು ರಾಮನಗರದಲ್ಲಿ ತಲಾ ಒಂದರಂತೆ 2 ಕಾರ್ಯಪಡೆಯನ್ನು ಹೆಚ್ಚುವರಿಯಾಗಿ ರಚಿಸಲಾಗಿದೆ. ಅದೇ ರೀತಿ ಹೆಚ್ಚು ಕಾಡಿರುವ ಮತ್ತು ಚಿರತೆಗಳು, ಕರಡಿಗಳು ಇರುವ ಬೆಟ್ಟಗುಡ್ಡದ ಪ್ರದೇಶದಲ್ಲಿ ಕನಿಷ್ಠ 3 ಜಿಲ್ಲೆಗೆ ಒಂದರಂತೆ ಕ್ಷಿಪ್ರ ಕಾರ್ಯಪಡೆ ರಚಿಸಿ, ಅತ್ಯಾಧುನಿಕ ಸಲಕರಣೆಗಳನ್ನು ಒದಗಿಸಲು ಸೂಚಿಸಿದ್ದಾರೆ.
ಚಿರತೆ ಕಾರ್ಯಪಡೆಯ ಸಿಬ್ಬಂದಿಗೆ ಸೂಕ್ತ ತರಬೇತಿ ಕೊಡಿಸುವಂತೆ ಮತ್ತು ಅಣಕು ಕಾರ್ಯಾಚರಣೆಗಳನ್ನೂ ನಡೆಸಿ ಸಿಬ್ಬಂದಿಯನ್ನು ಸಜ್ಜುಗೊಳಿಸುವಂತೆ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.