ಶೀಘ್ರದಲ್ಲಿಯೇ ಪರಿಶಿಷ್ಟರಿಗೆ ಪ್ರತ್ಯೇಕ ಸಚಿವಾಲಯ: ಸಚಿವ ಬಿ.ನಾಗೇಂದ್ರ
ಚಿತ್ರ ಕೃಪೆ- twitter@BNagendraINC
ಬೆಂಗಳೂರು, ಅ.3: ಪರಿಶಿಷ್ಟ ಸಮುದಾಯದ ಏಳಿಗೆಗಾಗಿ ಪ್ರತ್ಯೇಕ ಸಚಿವಾಲಯ ರಚಿಸುವ ಬಗ್ಗೆ ಶೀಘ್ರದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧಾರ ಮಾಡಲಿದ್ದಾರೆ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ಹೇಳಿದ್ದಾರೆ.
ಮಂಗಳವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತ್ಯೇಕ ಸಚಿವಾಲಯ ಬೇಡಿಕೆ ಇದೆ. ಈ ಸಂಬಂಧ ಸಮುದಾಯದ ಹಲವು ಮುಖಂಡರು ಮನವಿಗಳನ್ನು ಮಾಡುತ್ತಾ ಬಂದಿದ್ದು, ಮುಖ್ಯಮಂತ್ರಿಗಳು ಸಹ ಕೆಲವೇ ದಿನಗಳಲ್ಲಿ ಪ್ರತ್ಯೇಕ ಸಚಿವಾಲಯ ರಚಿಸುವ ಭರವಸೆ ಕೊಟ್ಟಿದ್ದಾರೆ ಎಂದರು.
ಇನ್ನೂ, ಪ್ರತಿಯೊಂದು ಜಾತಿಯಲ್ಲೂ ಸಮರ್ಥ ಅಧಿಕಾರಿಗಳಿದ್ದಾರೆ. ಜಾತಿ ಆಧಾರದಲ್ಲಿ ಸರ್ಕಾರ ರಚನೆ ಮಾಡಲು ಆಗಲ್ಲ,ಹೀಗಾಗಿ, ಶಾಸಕ ಶಾಮನೂರು ಶಿವಶಂಕರಪ್ಪ ನೀಡಿರುವ ಹೇಳಿಕೆ ವೈಯಕ್ತಿಕವಾಗಿದೆ ಎಂದ ಅವರು, ಕಾಂಗ್ರೆಸ್ ಸರ್ವರಿಗೂ ಸಮಪಾಲು ಸಮಪಾಲು ನೀಡಿದೆ. ಸರಕಾರದಲ್ಲಿ ಜಾತಿ ಬರಲ್ಲ. ಶಾಮನೂರು ಶಿವಶಂಕರಪ್ಪ ಲಿಂಗಾಯತ ಮಹಾಸಭೆಯ ರಾಷ್ಟ್ರಿಯ ಅಧ್ಯಕ್ಷರಾಗಿ ಹೇಳಿಕೆ ಕೊಡುವುದು ತಪ್ಪಲ್ಲ, ಆದರೆ ಶಾಮನೂರು ಆರೋಪಕ್ಕೆ ಮಾನ್ಯತೆ ಕೊಡಬೇಕೋ ಬೇಡವೋ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.