ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ: ಎಚ್.ಡಿ.ರೇವಣ್ಣಗೆ ಹೈಕೋರ್ಟ್ ಮಧ್ಯಂತರ ರಿಲೀಫ್
ಬೆಂಗಳೂರು: ಹಾಸನದ ಹೊಳೆನರಸೀಪುರ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್.ಡಿ.ರೇವಣ್ಣಗೆ ಹೈಕೋರ್ಟ್ ಮಧ್ಯಂತರ ರಿಲೀಫ್ ನೀಡಿದೆ.
ಪ್ರಕರಣ ರದ್ದು ಕೋರಿದ್ದ ಎಚ್.ಡಿ.ರೇವಣ್ಣ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಂ.ನಾಗಪ್ರಸನ್ನರಿದ್ದ ಏಕಸದಸ್ಯ ಪೀಠ ಸೆಪ್ಟಂಬರ್ 19ರವರೆಗೆ ಯಾವುದೇ ಪ್ರಕ್ರಿಯೆ ನಡೆಸದಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚನೆ ನೀಡಿದೆ.
ರೇವಣ್ಣ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್, ಕಲಂ 354A, 354D ಅಡಿ ಹಳೆಯ ದೂರುಗಳಿಗೆ ಎಫ್ಐಆರ್ ದಾಖಲಿಸುವಂತಿಲ್ಲ. ನಾಲ್ಕು ವರ್ಷಗಳ ಹಿಂದಿನ ದೂರಿಗೆ ಈಗ ಎಫ್ಐಆರ್ ದಾಖಲಿಸಿದ್ದಾರೆ. ಐಪಿಸಿ 506, 509 ಸೆಕ್ಷನ್ ದೂರಿನಲ್ಲಿರುವ ಅಂಶಗಳಿಗೆ ಅನ್ವಯವಾಗುವುದಿಲ್ಲ. ಹೀಗಾಗಿ ಎಫ್ಐಆರ್ ರದ್ದುಪಡಿಸುವಂತೆ ಮನವಿ ಮಾಡಿದರು.
ಸರಕಾರದ ಪರ ವಾದಿಸಿದ ಎಸ್ ಪಿಪಿ ರವಿವರ್ಮ ಕುಮಾರ್, ಈಗಾಗಲೇ ಆರೋಪಪಟ್ಟಿ ದಾಖಲಿಸಿರುವುದಾಗಿ ಮಾಹಿತಿ ನೀಡಿದರು. ವಾದ-ಪ್ರತಿವಾದ ಆಲಿಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಸೆಪ್ಟಂಬರ್ 19ರವರೆಗೆ ಯಾವುದೇ ಪ್ರಕ್ರಿಯೆ ನಡೆಸದಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚನೆ ನೀಡಿದರು. ಆ ಮೂಲಕ ರೇವಣ್ಣರಿಗೆ ಹೈಕೋರ್ಟ್ ರಿಲೀಫ್ ನೀಡಿದೆ.