ಓಲಾ ಚಾಲಕನಿಂದ ಲೈಂಗಿಕ ದೌರ್ಜನ್ಯ ಪ್ರಕರಣ : ಸಂತ್ರಸ್ತೆಗೆ 5 ಲಕ್ಷ ರೂ. ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶ
ಬೆಂಗಳೂರು : ಪ್ರಯಾಣದ ವೇಳೆ ಓಲಾ ಕ್ಯಾಬ್ ಚಾಲಕನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಯುವತಿಗೆ ಪರಿಹಾರವಾಗಿ 5 ಲಕ್ಷ ರೂ ನೀಡುವಂತೆ ಓಲಾ ಕ್ಯಾಬ್‌ನ ಮಾತೃ ಸಂಸ್ಥೆ ಎಎನ್‌ಐ ಟೆಕ್ನಾಲಜೀಸ್ ಪ್ರೆವೆಟ್ ಲಿಮಿಟೆಡ್‌ಗೆ ಹೈಕೋರ್ಟ್ ನಿರ್ದೇಶಿಸಿದೆ.
ಪ್ರಕರಣ ಸಂಬಂಧ ತಾನು ನೀಡಿರುವ ದೂರಿನ ಕುರಿತು ತನಿಖೆ ನಡೆಸಲು ಕಂಪೆನಿಯ ಆಂತರಿಕ ದೂರು ಸಮಿತಿಗೆ ನಿರ್ದೇಶಿಸಬೇಕು ಎಂದು ಕೋರಿ ಸಂತ್ರಸ್ತ ಯುವತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ, ಕಾಯ್ದಿರಿಸಿದ ತೀರ್ಪನ್ನು ನ್ಯಾಯಮೂರ್ತಿ ಎಂ.ಜಿ ಎಸ್ ಕಮಲ್ ಅವರಿದ್ದ ಏಕಸದಸ್ಯ ಪೀಠ ಪ್ರಕಟಿಸಿದೆ.
ವಾದ- ಪ್ರತಿವಾದ ಆಲಿಸಿದ ನ್ಯಾಯಪೀಠ 2013ರ ಮಹಿಳೆಯರಿಗೆ ಲೈಂಗಿಕ ಕಿರುಕುಳ ನಿಷೇಧ, ತಡೆ ಮತ್ತು ಪರಿಹಾರ ಕಾಯ್ದೆಯ ವಿವಿಧ ಕಲಂಗಳ ಅನ್ವಯ ದೂರಿನ ಕುರಿತು ತನಿಖೆ ನಡೆಸುವಂತೆ ಕಂಪನಿಯ ಆಂತರಿಕ ದೂರುಗಳ ಸಮಿತಿಗೆ ನಿರ್ದೇಶನ ನೀಡಿದೆ.
ಮಾತ್ರವಲ್ಲದೆ, 90 ದಿನಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು ತಿಳಿಸಿದೆ. ಮುಂದುವರಿದು ಕಾಯ್ದೆಯ ಸೆಕ್ಷನ್ 16ರ ಅನುಸಾರ ಈ ಪ್ರಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಗುರುತನ್ನು ಬಹಿರಂಗಪಡಿಸದಂತೆ ನೋಡಿಕೊಳ್ಳಲು ಮಧ್ಯಸ್ಥಿಕೆದಾರರಿಗೆ ನ್ಯಾಯಾಲಯವು ಎಚ್ಚರಿಕೆ ನೀಡಿದೆ.
ಜತೆಗೆ ಅರ್ಜಿದಾರರಿಗೆ ವ್ಯಾಜ್ಯ ವೆಚ್ಚವಾಗಿ ಹೆಚ್ಚುವರಿ 50 ಸಾವಿರ ರೂ.ಗಳನ್ನು ಪಾವತಿಸುವಂತೆ ಸೂಚಿಸಲಾಗಿದೆ. ಅರ್ಜಿದಾರರು 2019ರಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರು ಮತ್ತು ಚಾಲಕನ ವಿರುದ್ಧ ಕ್ರಮ ಕೋರಿ ಎಎನ್‌ಐ ಟೆಕ್ನಾಲಜೀಸ್‌ಗೆ ನೀಡಿದ ದೂರನ್ನು ಸಂಸ್ಥೆ ಪರಿಗಣಿಸಲಿಲ್ಲ. ಆಂತರಿಕ ದೂರುಗಳ ಸಮಿತಿಯು ಈ ವಿಷಯದ ಬಗ್ಗೆ ವಿಚಾರಣೆ ನಡೆಸುವ ಅಧಿಕಾರವನ್ನು ಹೊಂದಿಲ್ಲ ಎಂದು ಬಾಹ್ಯ ಕಾನೂನು ಸಲಹೆಗಾರ ಹೇಳಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು.