ಲೈಂಗಿಕ ದೌರ್ಜನ್ಯ ಪ್ರಕರಣ | ಪ್ರಜ್ವಲ್ ರೇವಣ್ಣ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ : ಎಸ್ಐಟಿ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಏನಿದೆ?
ಬೆಂಗಳೂರು : ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಐಡಿಯ ವಿಶೇಷ ತನಿಖಾ ದಳ (ಎಸ್ಐಟಿ) ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೊದಲ ಪ್ರಕರಣದ ಸಂತ್ರಸ್ತೆಗೆ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಅವರು ಲೈಂಗಿಕ ಕಿರುಕುಳ ನೀಡಿರುವುದು ಮತ್ತು ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ನಡೆಸಿ, ವಿಡಿಯೊ ಚಿತ್ರೀಕರಿಸಿಕೊಂಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ಸಿಐಡಿ ವಿಶೇಷ ತನಿಖಾ ದಳ (ಎಸ್ಐಟಿ) ನ್ಯಾಯಾಲಯಕ್ಕೆ ಶುಕ್ರವಾರ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ.
ದೋಷಾರೋಪ ಪಟ್ಟಿ ಸುಮಾರು 2 ಸಾವಿರ ಪುಟಗಳನ್ನು ಒಳಗೊಂಡಿದ್ದು, 123 ಸಾಕ್ಷ್ಯಗಳನ್ನು ಸಂಗ್ರಹಿಸಿ ಸಿದ್ಧಪಡಿಸಲಾಗಿದೆ ಎನ್ನಲಾಗಿದೆ. ಸದ್ಯ 42 ನೇ ಜನಪ್ರತಿನಿಧಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಮುಂದೆ ನ್ಯಾಯಾಲಯದಲ್ಲಿ ವಾದ ನಡೆಯಲಿದ್ದು, ಆ ಬಳಿಕ ತೀರ್ಪು ಬರಲಿದೆ.
‘ಎಚ್.ಡಿ.ರೇವಣ್ಣ ಅವರು ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿರುವುದು ಸಾಬೀತಾಗಿದೆ’ ಎಂದು ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.
ಅಲ್ಲದೆ ಹಲವು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿ ಪ್ರಜ್ವಲ್ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು ಎಂದು ಎಸ್‌ಐಟಿ ಹೇಳಿದೆ. ಇದರೊಂದಿಗೆ, ಪ್ರಜ್ವಲ್ ರೇವಣ್ಣ ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ಹಾಸನ ಪೆನ್ ಡ್ರೈವ್ ಹಗರಣ ಬಯಲಾದ ಬಳಿಕ ಇದೇ ಮೊದಲ ಬಾರಿಗೆ ಅಧಿಕೃತವಾಗಿ ಎಸ್‌ಐಟಿ ಹೇಳಿದೆ.
‘ಹೊಳೆನರಸೀಪುರದಲ್ಲಿ ರೇವಣ್ಣ ಅವರಿಗೆ ಸೇರಿದ ಮನೆಯಿದ್ದು, ಅವರ ಪತ್ನಿ ಭವಾನಿ ರೇವಣ್ಣ ಅವರ ಅನುಮತಿ ಮೇರೆಗೆ ಹಾಸ್ಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು 2019ರಿಂದ 2020ರ ವರೆಗೆ ಕೆಲಸಕ್ಕೆ ನೇಮಿಸಿಕೊಂಡಿದ್ದರು. ಭವಾನಿ ಅವರು ಮನೆಯಲ್ಲಿ ಇಲ್ಲದಿರುವಾಗ ರೇವಣ್ಣ ಸಂತ್ರಸ್ತೆಯನ್ನು ಕೊಠಡಿಗೆ ಆಗಾಗ್ಗೆ ಕರೆಯುತ್ತಿದ್ದರು. ಅಲ್ಲದೇ ಅಲ್ಲಿನ ಕಾರ್ಮಿಕರಿಗೆ ಹಣ್ಣು ವಿತರಣೆ ಮಾಡುತ್ತಿದ್ದರು. ಸಂತ್ರಸ್ತೆಗೆ ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದ ಕೊನೆಯಲ್ಲಿ ಹಣ್ಣು ಕೊಡಲು ಕೊಠಡಿಯಲ್ಲೇ ಇರಿಸಿಕೊಳ್ಳುತ್ತಿದ್ದರು. ಇತರೆ ಕೆಲಸಗಾರರು ಹಣ್ಣು ಪಡೆದು ತೆರಳಿದ ನಂತರ ಸಂತ್ರಸ್ತೆಗೆ ಲೈಂಗಿಕ ಕಿರುಕುಳ ನೀಡಿದ್ದರು’ ಎಂದು ಉಲ್ಲೇಖಿಸಲಾಗಿದೆ.
ಇನ್ನು, ಅದೇ ಮಹಿಳೆಯ ಮೇಲೆ ಬೆಂಗಳೂರಿನ ಬಸವನಗುಡಿಯ ಮನೆಯಲ್ಲಿ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿರುವುದು ಕೂಡ ಸಾಬೀತಾಗಿದೆ. ಆ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು ಮತ್ತೆ ಮತ್ತೆ ಪ್ರಜ್ವಲ್ ಬ್ಲಾಕ್‌ಮೇಲ್ ಮಾಡಿದ್ದಾರೆ ಎಂದು ಚಾರ್ಜ್ ಶೀಟ್‌ನಲ್ಲಿ ತಿಳಿಸಲಾಗಿದೆ. ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಚಿತ್ರೀಕರಿಸಿಕೊಂಡು ಪ್ರಜ್ವಲ್ ಬೆದರಿಕೆ ಹಾಕುತ್ತಿದ್ದರು ಎಂಬ ಸಂಗತಿಯನ್ನು ಆರೋಪ ಪಟ್ಟಿಯಲ್ಲಿ ಎಸ್‌ಐಟಿ ಉಲ್ಲೇಖಿಸಿದೆ.
ಅತ್ಯಾಚಾರ ಪ್ರಕರಣದ ಇಬ್ಬರು ಸಂತ್ರಸ್ತೆಯರು ಮಾತ್ರವಲ್ಲದೆ ಮೂವರು ಸಾಕ್ಷಿಗಳು ಸೇರಿದಂತೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆ ಸಮಯದಲ್ಲಿ ತಾನು ಬಳಸುತ್ತಿದ್ದ ಮೊಬೈಲ್‌ನಲ್ಲಿ ಅದೆಲ್ಲವನ್ನು ಚಿತ್ರೀಕರಿಸಿಕೊಂಡಿದ್ದರು. ಈ ಮಾಹಿತಿ ತಮ್ಮ ಕ್ಷೇತ್ರದ ಜನರಲ್ಲಿ ಹರಡುತ್ತಿದ್ದಂತೆ ಉದ್ದೇಶಪೂರ್ವಕವಾಗಿ ವಿದೇಶಕ್ಕೆ ಪಲಾಯನಗೈದು ಮೊಬೈಲ್ ಸಾಕ್ಷ್ಯ ನಾಶ ಪಡಿಸಿದ್ದಲ್ಲದೇ ಈ ಹಿಂದೆ ತಾವು ಬಳಸಿದ್ದ ಫೋನ್‌ಗಳಲ್ಲಿ ಸಾಕ್ಷಿಗಳನ್ನು ನಾಶಪಡಿಸಿದ ಬಗ್ಗೆ ತನಿಖೆಯಿಂದ ದೃಢಪಟ್ಟದೆ ಎಂದು ಎಸ್‌ಐಟಿ ಹೇಳಿದ್ದಾಗಿ ವರದಿಯಾಗಿದೆ.
ಈಗ ಒಂದು ಅತ್ಯಾಚಾರ ಪ್ರಕರಣದ ತನಿಖೆ ಮುಗಿಸಿ ಎಸ್‌ಐಟಿ ಆರೋಪ ಪಟ್ಟಿ ಸಲ್ಲಿಸಿದೆ. ಇನ್ನುಳಿದ ಪ್ರಕರಣಗಳ ಸಂಬಂಧ ಕೆಲವೇ ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಲಿದೆ ಎಂದು ತಿಳಿದು ಬಂದಿದೆ.
ನಿರೀಕ್ಷಣಾ ಜಾಮೀನು ಅರ್ಜಿ ವಜಾ :
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾ ಮಾಡಿದ್ದು ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಪ್ರಕರಣದ ವಿಸ್ತೃತ ತನಿಖೆಗೆ ಏಪ್ರಿಲ್ 28 ರಂತೆ ಸಿಐಡಿಯ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆಗೆ ಆದೇಶ ಮಾಡಲಾಗಿತ್ತು. ತನಿಖೆಯ ಸಂದರ್ಭದಲ್ಲಿ ಸುಮಾರು 150 ಕ್ಕೂ ಹೆಚ್ಚು ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.