ಲೈಂಗಿಕ ದೌರ್ಜನ್ಯ ಪ್ರಕರಣ : ದೂರು ಕೊಟ್ಟವರು ಯಾರೆಂದು ಪ್ರಶ್ನಿಸಿದ ಪ್ರಜ್ವಲ್?
ಪ್ರಜ್ವಲ್ ರೇವಣ್ಣ
ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಎಸ್ಐಟಿ ವಶದಲ್ಲಿರುವ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿಚಾರಣೆ ವೇಳೆ ಅಧಿಕಾರಿಗಳನ್ನೆ ಮರು ಪ್ರಶ್ನೆ ಮಾಡಿದ್ದು, ಪದೇ ಪದೇ ದೂರು ಕೊಟ್ಟವರು ಯಾರೆಂದು ಪ್ರಶ್ನೆ ಕೇಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳು ಕೇಳುತ್ತಿರುವ ಪ್ರಶ್ನೆಗಳಿಗೆ ಪ್ರಜ್ವಲ್ ರೇವಣ್ಣ ಸಮರ್ಪಕ ಉತ್ತರ ಬದಲಾಗಿ, ದೂರು ಕೊಟ್ಟವರು ಯಾರು, ತಾವು ಹೇಳುತ್ತಿರುವ ಮಹಿಳೆಯರ ಕುರಿತು ಮಾಹಿತಿಯೇ ಇಲ್ಲ ಎಂದು ಹೇಳಿಕೆ ನೀಡಿರುವುದಾಗಿ ಹೇಳಲಾಗುತ್ತಿದೆ.
ಇನ್ನೂ, ನಿಮ್ಮ ತಾಯಿ ಇಲ್ಲದ ಸಂದರ್ಭದಲ್ಲಿ ಹೊಳೆನರಸೀಪುರದಲ್ಲಿರುವ ಮನೆಗೆ ಏಕೆ ಹೋಗುತ್ತಿದ್ದಿರಿ?. ಮನೆಯಲ್ಲಿ ಕೆಲಸಗಾರರು ಎಷ್ಟು ಮಂದಿ ಇದ್ದಾರೆ?. ಅವರನ್ನು ಯಾವ ರೀತಿ ನೋಡುತ್ತಿದ್ದಿರಿ? ಎಂದು ಹಲವು ಪ್ರಶ್ನೆಗಳನ್ನು ಪ್ರಜ್ವಲ್ ರೇವಣ್ಣ ಅವರಿಗೆ ಎಸ್ಐಟಿ ತನಿಖಾಧಿಕಾರಿಗಳು ಕೇಳಿದ್ದಾರೆ ಎನ್ನಲಾಗಿದೆ.
ಜತೆಗೆ, ಕೆಲವು ಫೋಟೊಗಳನ್ನು ತೋರಿಸಿ ಇವರು ನಿಮಗೆ ಗೊತ್ತಾ? ಎಂದು ಕೇಳಿದಾಗ ಅದಕ್ಕೆ ಪ್ರಜ್ವಲ್ ರೇವಣ್ಣ ಅವರು ಗೊತ್ತಿಲ್ಲ ಹಾಗೂ ನೆನಪಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಹೊಳೆನರಸೀಪುರ, ಹಾಸನ ತೋಟದ ಮನೆಗಳಲ್ಲಿ ತುಂಬಾ ಜನ ಕೆಲಸದವರಿದ್ದಾರೆ. ಯಾರೆಂಬುದು ಗೊತ್ತಿಲ್ಲ. ಯಾರು ಎಂಬುದು ನೆನಪಿಲ್ಲ ಎಂದೂ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.
ಅದು ಅಲ್ಲದೆ, ನಾನು ಯಾರ ಮೇಲೂ ಲೈಂಗಿದ ದೌರ್ಜನ್ಯವೆಸಗಿಲ್ಲ. ಪೆನ್ಡ್ರೈವ್ ಪ್ರಕರಣಕ್ಕೂ, ನನಗೂ ಯಾವುದೇ ಸಂಬಂಧವಿಲ್ಲ, ವಿನಾಕಾರಣ ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ. ಜತೆಗೆ, ಈಗಾಗಲೇ ಹಲವು ಪ್ರಶ್ನೆಗಳಿಗೆ ವಕೀಲರನ್ನು ಕೇಳಿ ಉತ್ತರಿಸುವುದಾಗಿ ಪ್ರಜ್ವಲ್ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.
ಪುರುಷತ್ವ ಪರೀಕ್ಷೆ: ಪ್ರಜ್ವಲ್ ರೇವಣ್ಣಗೆ ಸದ್ಯದಲ್ಲಿಯೇ ಪುರುಷತ್ವ ಪರೀಕ್ಷೆ ನಡೆಸಲು ಎಸ್ಐಟಿ ಚಿಂತನೆ ನಡೆಸಿದೆ. ಅತ್ಯಾಚಾರ ಪ್ರಕರಣದ ಆರೋಪಿಯು ಸಂತ್ರಸ್ಥ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಸಾಮರ್ಥ್ಯ ಹೊಂದಿದ್ದಾನೆಯೇ ಎಂದು ಖಚಿತಪಡಿಸಿಕೊಳ್ಳಲು ಪುರುಷತ್ವ ಪರೀಕ್ಷೆ ಮಾಡಲಾಗುತ್ತದೆ.ಜತೆಗೆ, ಆರೋಪಿ ತನಿಖೆಗೆ ಸಹಕರಿಸಲು ದೈಹಿಕ-ಮಾನಸಿಕವಾಗಿ ಸಿದ್ಧನಾಗಿದ್ದಾನೆಯೇ ಎಂಬುದನ್ನು ಈ ಪರೀಕ್ಷೆಗಳ ಮೂಲಕ ತಿಳಿದುಕೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.