ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ಶಾಫಿ ಸಅದಿ ರಾಜೀನಾಮೆ

ಬೆಂಗಳೂರು, ಜು.5: ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ಬುಧವಾರ(ಜು.5) ರಾಜೀನಾಮೆ ಸಲ್ಲಿಸಿದ್ದಾರೆ.
ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಇಲಾಖೆಯ ಕಾರ್ಯದರ್ಶಿಗೆ ಶಾಫಿ ಸಅದಿ ರಾಜೀನಾಮೆ ಪತ್ರ ಹಸ್ತಾಂತರ ಮಾಡಿದ್ದು, ವಕ್ಫ್ ಬೋರ್ಡ್‍ಗೆ ನೂತನ ಅಧ್ಯಕ್ಷರ ಆಯ್ಕೆಯಾಗುವವರೆಗೆ ಅವರು ಹಂಗಾಮಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.
ಡಾ.ಮುಹಮ್ಮದ್ ಯೂಸುಫ್ ನಿಧನದ ಬಳಿಕ ಒಂದು ವರ್ಷ ವಕ್ಫ್ ಬೋರ್ಡ್‍ಗೆ ಅಧ್ಯಕ್ಷರ ಆಯ್ಕೆಯಾಗಿರಲಿಲ್ಲ. ಆನಂತರ ಬಿಜೆಪಿ ಸರಕಾರ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಅಧಿಸೂಚನೆ ಹೊರಡಿಸಿತು. ಈ ಚುನಾವಣೆಯಲ್ಲಿ ನಾಮನಿರ್ದೇಶಿತ ಸದಸ್ಯ ಶಾಫಿ ಸಅದಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಕಳೆದ ಸಾಲಿನ ನವೆಂಬರ್ 18ಕ್ಕೆ ಶಾಫಿ ಸಅದಿ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ್ದರು. ನೂತನ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅವರ ನಾಮ ನಿರ್ದೇಶನವನ್ನು ರದ್ದುಗೊಳಿಸಿತ್ತು. ಆದರೆ, ಒಂದೇ ದಿನದಲ್ಲಿ ಆ ಆದೇಶವನ್ನು ಹಿಂಪಡೆಯಲಾಗಿತ್ತು.
ಸುಮಾರು ಎರಡು ಕೋಟಿ ರೂ.ವೆಚ್ಚದಲ್ಲಿ ನವೀಕೃತಗೊಂಡಿರುವ ವಕ್ಫ್ ಬೋರ್ಡ್ ಕಚೇರಿಯ ಕಟ್ಟಡದ ಉದ್ಘಾಟನೆವರೆಗೆ ತಮ್ಮನ್ನು ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲು ಅವಕಾಶ ನೀಡುವಂತೆ ಶಾಫಿ ಸಅದಿ ಮನವಿ ಮಾಡಿದ್ದರು ಎಂದು ತಿಳಿದು ಬಂದಿದೆ. ಅದರಂತೆ, ಜು.3ರಂದು ನವೀಕೃತ ಕಟ್ಟಡ ಉದ್ಘಾಟನೆಯಾಗಿದ್ದು, ಅವರು ಇಂದು ರಾಜೀನಾಮೆ ನೀಡಿದ್ದಾರೆ.
ವಕ್ಫ್ ಬೋರ್ಡ್‍ಗೆ ಕಳೆದ ಸರಕಾರದ ಅವಧಿಯಲ್ಲಿ ತನ್ವೀರ್ ಸೇಠ್ ಹಾಗೂ ಕನೀಝ್ ಫಾತಿಮಾ ಅವರನ್ನು ಶಾಸಕರ ಕೋಟಾದಲ್ಲಿ ನಾಮ ನಿರ್ದೇಶನ ಮಾಡಲಾಗಿತ್ತು. ಇದೀಗ ಹೊಸ ವಿಧಾನಸಭೆ ಅಸ್ತಿತ್ವಕ್ಕೆ ಬಂದಿರುವುದರಿಂದ ವಕ್ಫ್ ಬೋರ್ಡ್‍ಗೆ ಹೊಸದಾಗಿ ಶಾಸಕರನ್ನು ನಾಮ ನಿರ್ದೇಶನ ಮಾಡಬೇಕಿದೆ.
ಅಲ್ಲದೆ, ವಕ್ಫ್ ಬೋರ್ಡ್ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಬೇಕಿದೆ. ನೂತನ ಅಧ್ಯಕ್ಷರ ಆಯ್ಕೆಯಾಗುವವರೆಗೆ ಶಾಫಿ ಸಅದಿ ಹಂಗಾಮಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.