‘ಶಕ್ತಿ ಯೋಜನೆ’: ಇಲ್ಲಿಯವರೆಗೂ 5 ಸಾವಿರ ಕೋಟಿ ರೂ.ಗೂ ಅಧಿಕ ಮೌಲ್ಯದ ಉಚಿತ ಟಿಕೆಟ್ ವಿತರಣೆ
ಬೆಂಗಳೂರು: ‘ಶಕ್ತಿ ಯೋಜನೆ’ ಜಾರಿಯಾದ ದಿನದಿಂದ ಇಲ್ಲಿಯವರೆಗೂ ರಾಜ್ಯದಲ್ಲಿ 68,48,773 ಮಂದಿ ಮಹಿಳಾ ಪ್ರಯಾಣಿಕರು ಬಿಎಂಟಿಸಿ, ಕೆಎಸ್ಸಾರ್ಟಿಸಿ ಸೇರಿದಂತೆ ಸಾರಿಗೆ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದು, 5,451 ಕೋಟಿ ರೂ.ಮೌಲ್ಯದ ಟಿಕೆಟ್‍ಗಳನ್ನು ಉಚಿತವಾಗಿ ವಿತರಣೆ ಮಾಡಲಾಗಿದೆ.
ಶನಿವಾರದಂದು ಕೆಎಸ್ಸಾರ್ಟಿಸಿ ಮಾಹಿತಿಯನ್ನು ಪ್ರಕಟಿಸಿದ್ದು, ‘ಶಕ್ತಿ ಯೋಜನೆ ಜಾರಿಯಾದ ದಿನದಿಂದ ಪ್ರತಿನಿತ್ಯ ಸರಾಸರಿ 68 ಲಕ್ಷ ಮಹಿಳಾ ಪ್ರಯಾಣಿಕರು ಸಾರಿಗೆ ಇಲಾಖೆಯ ನಾಲ್ಕು ನಿಗಮದ ಬಸ್‍ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಪ್ರತಿನಿತ್ಯ 16ಕೋಟಿ ರೂ.ಗಳಷ್ಟು ಮೌಲ್ಯದ ಟಿಕೆಟ್‍ಗಳನ್ನು ಶಕ್ತಿ ಯೋಜನೆಯಡಿ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದೆ.
ಶಕ್ತಿ ಯೋಜನೆ ಜಾರಿಯಾದ 2023ರ ಜೂ.11ರಿಂದ 2024 ಜೂ.7ರ ವರೆಗೆ ಸಾರಿಗೆ ನಿಗಮಗಳ ಬಸ್‍ಗಳಲ್ಲಿ ಒಟ್ಟು 388 ಕೋಟಿಗೂ ಅಧಿಕ ಮಂದಿ ಪ್ರಯಾಣಿಸಿದ್ದು, ಇದರಲ್ಲಿ 223 ಕೋಟಿಗೂ ಅಧಿಕ ಮಹಿಳಾ ಪ್ರಯಾಣಿಕರಾಗಿದ್ದಾರೆ. ಒಟ್ಟು ಪ್ರಯಾಣಿಕರಲ್ಲಿ ಶೇ.57.64ರಷ್ಟು ಶಕ್ತಿ ಯೋಜನೆಯಡಿ ಉಚಿತವಾಗಿ ಪ್ರಯಾಣಿಸಿದ ಮಹಿಳೆಯರೇ ಆಗಿದ್ದಾರೆ.