‘ಶಕ್ತಿ’ ಯೋಜನೆಯಿಂದ ರಿಕ್ಷಾ ಚಾಲಕರಿಗೆ ಸಮಸ್ಯೆ ಇಲ್ಲ; ಯಾವುದೇ ಚಾಲಕರ ಸಂಘ ದೂರು ನೀಡಿಲ್ಲ: ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು, ಜು.5: ‘ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸುವ ಶಕ್ತಿ ಯೋಜನೆ ಜಾರಿ ಮಾಡಲಾಗಿದೆ. ಈ ಯೋಜನೆಯಿಂದ ಆಟೋರಿಕ್ಷಾ ಚಾಲಕರಿಗೆ ತೊಂದರೆಯಾಗಿದೆ ಎಂದು ಯಾವುದೇ ಚಾಲಕರ ಸಂಘ ದೂರು ನೀಡಿಲ್ಲ. ದೂರು ನೀಡಿದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಬುಧವಾರ ವಿಧಾನ ಪರಿಷತ್ತಿನಲ್ಲಿ ಜೆಡಿಎಸ್ ಸದಸ್ಯ ಬೋಜೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಶಕ್ತಿ ಯೋಜನೆ ಜಾರಿಯಾಗಿ 20 ದಿನಗಳು ಅಷ್ಟೇ ಕಳೆದಿದೆ. ತಿಂಗಳು ಕಳೆಯಲಿ, ಸಾಧಕ-ಬಾಧಕಗಳನ್ನು ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ 5ಲಕ್ಷ ಆಟೋಗಳಿದ್ದು, ಶಕ್ತಿ ಯೋಜನೆಯಿಂದ ತೊಂದರೆಯಾಗಿದೆ ಎಂದು ದೂರು ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಶಕ್ತಿ ಯೋಜನೆ ಜಾರಿಗೆ ತಂದ ನಂತರ ತೊಂದರೆಯಾಗಿರುವ ಬಗ್ಗೆ ನನಗಾಗಲೀ ಅಥವಾ ಅಧಿಕಾರಿಗಳಿಗಾಗಲೀ ಆಟೋ ಚಾಲಕರ ಜತೆಗೆ ಟ್ಯಾಕ್ಸಿ ಚಾಲಕರೂ ಯಾವುದೇ ಮನವಿಯನ್ನು ಸಲ್ಲಿಸಿಲ್ಲ. ಹೀಗಾಗಿ ಯಾವುದೇ ಕ್ರಮ ಕೈಗೊಂಡಿಲ್ಲ. ಮನವಿಗಳು ಬಂದ ನಂತರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.