ʻಶಕ್ತಿʻ ಯೋಜನೆ ಸ್ಮಾರ್ಟ್ ಕಾರ್ಡ್ ವಿತರಣೆ ಅವಧಿ ಮತ್ತೆ 6 ತಿಂಗಳಿಗೆ ವಿಸ್ತರಣೆ: ಸಂಪುಟ ಸಭೆಯಲ್ಲಿ ತೀರ್ಮಾನ
ಬೆಂಗಳೂರು: ʻಶಕ್ತಿ ಯೋಜನೆ ಸ್ಮಾರ್ಟ್ ಕಾರ್ಡ್ ವಿತರಣೆ ಅವಧಿ ಮತ್ತೆ ಆರು ತಿಂಗಳಿಗೆ ವಿಸ್ತರಣೆ ಮಾಡಲಾಗಿದೆʻ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ʻʻಶಕ್ತಿ ಯೋಜನೆಯಡಿ ಮೂರು ತಿಂಗಳಲ್ಲಿ ಸ್ಮಾರ್ಟ್ ಕಾರ್ಡ್ ವಿತರಿಸಲು ಈ ಹಿಂದೆ ಕೈಗೊಂಡಿದ್ದ ನಿರ್ಣಯಕ್ಕೆ ಘಟೋನೋತ್ತರ ಅನುಮೋದನೆ ನೀಡುವುದರ ಜೊತೆಗೆ, ಈ ಅವಧಿಯನ್ನು ಇನ್ನೂ ಆರು ತಿಂಗಳು ವಿಸ್ತರಿಸಲು ನಿರ್ಧರಿಸಲಾಗಿದೆʻʻ ಎಂದು ಮಾಹಿತಿ ನೀಡಿದರು.
ʻʻಅಲ್ಲದೆ, ಸ್ಮಾರ್ಟ್‍ಕಾರ್ಡ್‍ಗಾಗಿ ಫಲಾನುಭವಿಗಳಿಗೆ ಒದಗಿಸಲಾಗುತ್ತಿರುವ ಪ್ರತಿ ಕಾರ್ಡ್‍ಗೆ 14.16 ರೂ.ಸೇವಾ ಶುಲ್ಕವನ್ನು ನಿಗದಿ ಮಾಡಲಾಗಿದೆʻʻ ಎಂದು ಅವರು ತಿಳಿಸಿದರು.
ʻʻಕೆಎಸ್ಸಾರ್ಟಿಸಿಯಿಂದ 100 ಕೋಟಿ ರೂ.ವೆಚ್ಚದಲ್ಲಿ 250 ಹೊಸ ಬಸ್ಸುಗಳು, ವಾಯುವ್ಯ ರಾಜ್ಯ ರಸ್ತೆ ಸಾರಿಗೆ ನಿಗಮವು 150 ಕೋಟಿ ರೂ.ವೆಚ್ಚದಲ್ಲಿ 375 ಹೊಸ ಬಸ್ಸುಗಳು, ಕೆಕೆಆರ್‍ಟಿಸಿಯಲ್ಲಿ 300 ಕೋಟಿ ರೂ.ವೆಚ್ಚದಲ್ಲಿ 250 ಬಸ್ಸುಗಳು ಹಾಗೂ ಬಿಎಂಟಿಸಿಯಲ್ಲಿ 320 ಎಸಿ ಎಲೆಕ್ಟ್ರಿಕ್ ಬಸ್ಸುಗಳನ್ನು 150 ಕೋಟಿ ರೂ.ಅಂದಾಜು ಮೊತ್ತದಲ್ಲಿ ಖರೀದಿಸಲು ಅನುಮತಿ ನೀಡಲಾಗಿದೆʻʻ ಎಂದು ಎಚ್.ಕೆ.ಪಾಟೀಲ್ ಹೇಳಿದರು.