‘ಶಕ್ತಿ’ ಯೋಜನೆ ಇನ್ನೂ 10 ವರ್ಷಗಳ ಕಾಲ ಇರಲಿದೆ: ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು, ಆ.4: ಸರಕಾರಿ ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ಕಾಂಗ್ರೆಸ್ ಸರಕಾರದ ‘ಶಕ್ತಿ’ ಯೋಜನೆ ಇನ್ನೂ 10 ವರ್ಷಗಳ ಕಾಲ ಇರುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ.
ಶುಕ್ರವಾರ ಶಾಂತಿನಗರದ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಪಕ್ಷಗಳ ರಾಜಕೀಯ ಅಪಪ್ರಚಾರ ಮೀರಿ ಶಕ್ತಿ ಯೋಜನೆ ಯಶಸ್ಸು ಕಂಡಿದ್ದು, ಈ ಯೋಜನೆ ಇನ್ನೂ 10 ವರ್ಷವಿರಲಿದೆ, ಯಾಕೆಂದರೆ 5 ವರ್ಷ ಮುಗಿದ ಬಳಿಕ ರಾಜ್ಯದಲ್ಲಿ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಶಕ್ತಿ ಯೋಜನೆ ಟೀಕಿಸುತ್ತಿರುವ ಬಿಜೆಪಿಯವರು 35 ಸ್ಥಾನಕ್ಕೆ ಇಳಿಯಲಿದ್ದಾರೆ ಎಂದರು.
ಮುಂಬರುವ 2024ರ ಲೋಕಸಭಾ ಚುನಾವಣೆ ಬಳಿಕ ಶಕ್ತಿ ಯೋಜನೆ ನಿಲ್ಲುತ್ತದೆ ಎಂದು ವಿಪಕ್ಷಗಳು ಟೀಕಿಸುತ್ತಿವೆ. ಆದರೆ ನಾವು ಮತ್ತೆ ಅಧಿಕಾರಕ್ಕೆ ಬಂದು ಈ ಯೋಜನೆಯನ್ನು ಮುಂದುವರೆಸಿಕೊಂಡು ಹೋಗುತ್ತೇವೆ. ಲೋಕಸಭೆಯಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವುದು ನಮ್ಮ ಗುರಿಯಾಗಿದೆ. ಆ ನಿಟ್ಟಿನಲ್ಲಿ ಪಕ್ಷದ ಎಲ್ಲಾ ನಾಯಕರು ಕೆಲಸ ಮಾಡುತ್ತಿದ್ದಾರೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ಇದೇ ಡಿಸೆಂಬರ್ ತಿಂಗಳಿನಲ್ಲಿ ಬಿಬಿಎಂಪಿ ಚುನಾವಣೆ ನಡೆಯಲಿದೆ. ಈ ಬಾರಿ ಕಾಂಗ್ರೆಸ್‍ಗೆ ಬಹುಮತ ದೊರೆಯಲಿದೆ. ಈ ನಿಟ್ಟಿನಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ. ಚುನಾವಣೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈಗಾಗಲೇ ಮಾತನಾಡಿದ್ದಾರೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರ ಅವಧಿಯಲ್ಲಿ ಸಾರಿಗೆ ಇಲಾಖೆ ನೌಕರರಿಗೆ ಪ್ರತಿ ತಿಂಗಳು 25ನೇ ತಾರೀಕಿನವರೆಗೂ ವೇತನ ನೀಡುತ್ತಿರಲಿಲ್ಲ. ನಮ್ಮ ಸರಕಾರದಲ್ಲಿ ಎಲ್ಲಾ ಸಿಬ್ಬಂದಿಗೆ ಆಯಾ ತಿಂಗಳ 1ನೇ ತಾರೀಕಿನಂದೇ ಪೂರ್ತಿ ಸಂಬಳವಾಗುತ್ತಿದೆ. ಇದನ್ನು ಸಹಿಸದ ಬಿಜೆಪಿಯುವರು ನಮ್ಮನ್ನು ಟೀಕಿಸುವ ಭರದಲ್ಲಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಜನರು ಅದಕ್ಕೆಲ್ಲಾ ಕಿವಿಗೊಡುವುದಿಲ್ಲ ಎಂದು ತಿಳಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಪ್ರತಿಕ್ರಿಯಿಸಿದ ಸಚಿವ ರಾಮಲಿಂಗಾರೆಡ್ಡಿ ಅವರು, ಆರಗ ಜ್ಞಾನೇಂದ್ರ ಅವರ ಮಾತು ಮಾತಲ್ಲ, ಇದು ಬಿಜೆಪಿ ಮತ್ತು ಸಂಘದವರ ಮನಸ್ಥಿತಿಯಾಗಿದೆ. ಆರಗ ಜ್ಞಾನೇಂದ್ರ ತಲೆಯಲ್ಲಿ ಕೂದಲು ಇರಬಹುದು, ಆದರೆ ಬುದ್ಧಿನೂ ಇಲ್ಲ, ಮೆದುಳು ಇಲ್ಲ. ಅವರು ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.