ಶಿವಮೊಗ್ಗ | ‘ಪಾಕಿಸ್ತಾನಕ್ಕೆ ಹೋಗಿ’ ಎಂದು ವಿದ್ಯಾರ್ಥಿಗಳನ್ನು ನಿಂದಿಸಿದ ಆರೋಪ: ಶಿಕ್ಷಕಿ ವಿರುದ್ಧ ಇಲಾಖೆಗೆ ದೂರು
ಸಾಂದರ್ಭಿಕ ಚಿತ್ರ
ಶಿವಮೊಗ್ಗ, ಸೆ.1: ನಗರದ ಟಿಪ್ಪು ನಗರ ಸರಕಾರಿ ಉರ್ದು ಶಾಲೆಯ ಶಿಕ್ಷಕಿಯೊಬ್ಬರು ಗಲಾಟೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ‘ಇದು ನಿಮ್ಮ ದೇಶ ಅಲ್ಲ, ಪಾಕಿಸ್ತಾನಕ್ಕೆ ಹೋಗಿ’ ಎಂದು ಹೇಳಿರುವ ಪ್ರಕರಣ ವರದಿಯಾಗಿದೆ.
ಈ ಸಂಬಂಧ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ನಝ್ರುಲ್ಲಾ ಎಂಬವರು ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಬಳಿಕ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ನಝ್ರುಲ್ಲಾ, ಶಾಲೆಯಲ್ಲಿ ಮಕ್ಕಳು ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಈ ವೇಳೆ ಬುದ್ಧಿ ಹೇಳುವ ಬದಲು ‘ಇದು ನಿಮ್ಮ ದೇಶ ಅಲ್ಲ, ಇದು ಹಿಂದೂಗಳ ದೇಶ. ನೀವು ಪಾಕಿಸ್ತಾನಕ್ಕೆ ಹೋಗಿ. ನೀವು ಯಾವತ್ತಿಗೂ ನಮ್ಮ ಗುಲಾಮರೇ’ ಎಂದು ಹೇಳಿದ್ದು, ಶಿಕ್ಷಕಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ, ಅಧಿಕಾರಿಗಳು ಸಮಯ ಕೇಳಿದ್ದು, ಶಿಕ್ಷಕಿಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ನಝ್ರುಲ್ಲಾ ಮಾಹಿತಿ ನೀಡಿದರು.
ಅಲ್ಲದೆ, ಶಿಕ್ಷಕಿಯನ್ನು ಕೂಡಲೇ ಕೆಲಸದಿಂದ ವಜಾಗೊಳಿಸಬೇಕೆಂದು ಶಾಲೆಯ ಮುಖ್ಯ ಶಿಕ್ಷಕರಿಗೆ ಒತ್ತಾಯಿಸಿದ್ದೇವೆ ಎಂದು ತಿಳಿಸಿದರು.
ʼʼಕಳೆದ 7-8 ವರ್ಷಗಳಿಂದ ಟಿಪ್ಪು ನಗರ ಸರಕಾರಿ ಶಾಲೆಯಲ್ಲಿ ಶಿಕ್ಷಕಿ ಕೆಲಸ ಮಾಡುತ್ತಿದ್ದರು. ಇಷ್ಟು ವರ್ಷಗಳಿಂದ ಯಾವುದೇ ದೂರುಗಳು ಬಂದಿರಲಿಲ್ಲ. ಮಕ್ಕಳು ಮಾತು ಕೇಳಿಲ್ಲ ಅಂತ ಏಕಾಏಕಿ ಗದರಿಸಿದ್ದಾರೆ. ಮಕ್ಕಳು ಕೊಟ್ಟ ಹೇಳಿಕೆ ಆಧಾರದ ಮೇಲೆ ಸ್ವಯಂ ಪ್ರೇರಿತವಾಗಿ ಶಿಕ್ಷಕಿಯನ್ನು ಬೇರೆಡೆಗೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆʼʼ
- ನಾಗರಾಜ್ , ಕ್ಷೇತ್ರ ಶಿಕ್ಷಣಾಧಿಕಾರಿ, ಶಿವಮೊಗ್ಗ