ಶಿವಮೊಗ್ಗ ಘಟನೆ | ಮೆರವಣಿಗೆ ವೇಳೆ ಕತ್ತಿ ಬಳಕೆ ಬಗ್ಗೆ ಮಾಹಿತಿ ಇಲ್ಲ: ಗೃಹ ಸಚಿವ ಪರಮೇಶ್ವರ್
ಬೆಂಗಳೂರು,ಅ.2: ʼʼಶಿವಮೊಗ್ಗ ನಗರದಲ್ಲಿ ಮಿಲಾದುನ್ನಬಿ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ. ಆದರೆ ಕತ್ತಿ ಬಳಕೆ ಬಗ್ಗೆ ಮಾಹಿತಿ ಇಲ್ಲʼʼ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼʼಶಿವಮೊಗ್ಗ ಘಟನೆಗೆ ಯಾರನ್ನೂ ಹೊರಗಿನಿಂದ ಬರಲು ಬಿಟ್ಟಿಲ್ಲ. ಈ ಹಿಂದೆ ಅಲ್ಲಿ ಏನಾಗಿದೆ ಎಂದು ಗೊತ್ತಿದೆ, ಹೇಳಿಕೆ ಕೊಡುವವರು ಕೊಡುತ್ತಾರೆ. ಶಿವಮೊಗ್ಗದಲ್ಲಿ ಮುಂಜಾಗ್ರತಾ ಕ್ರಮವಾಗಿ ಕಟ್ಟೆಚ್ಚರ ವಹಿಸಿದ್ದೆವು. ರಾಜ್ಯದಲ್ಲಿ ಎಲ್ಲೂ ಅಹಿತಕರ ಘಟನೆ ನಡೆಸಲು ಬಿಡುವುದಿಲ್ಲʼʼ ಎಂದರು.
ʼʼಅಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ ಎಂದು ನಮಗೆ ಮೊದಲೇ ಮಾಹಿತಿಯಿತ್ತು. ಹೀಗಾಗಿ ಮೊದಲೇ ಬಿಗಿ ಪೊಲೀಸ್ ಬಂದೋಬಸ್ತ್ ವಹಿಸಲಾಗಿತ್ತು. ಮೆರವಣಿಗೆ ಹೋಗುವ ಸಂದರ್ಭದಲ್ಲಿ ಯಾವುಗೇ ಅಹಿತಕರ ಘಟನೆ ನೀಡಬಹುದು ಎಂದು ನಮಗೆ ಮೊದಲೇ ಗೊತ್ತಿತ್ತು, ದೊಡ್ಡ ಮಟ್ಟದಲ್ಲಿ ಆಗುವ ಗಲಭೆಯನ್ನು ಸಮರ್ಥರಾಗಿರುವ ನಮ್ಮ ಪೊಲೀಸರು ನಿಯಂತ್ರಣ ಮಾಡಿದ್ದಾರೆ. ಎರಡೂ ಗುಂಪಿನ ಜನರನ್ನು ಬಂಧಿಸಿದ್ದಾರೆʼʼ ಎಂದು ತಿಳಿಸಿದರು.