ಜು.22ರಂದು ಶಿವಮೊಗ್ಗ ವಿವಿ ಘಟಿಕೋತ್ಸವ: ಸದಾನಂದ ಶೆಟ್ಟಿ ಸಹಿತ ಮೂವರಿಗೆ ಗೌರವ ಡಾಕ್ಟರೇಟ್
ಸದಾನಂದ ಶೆಟ್ಟಿ | ಚಂದ್ರಪ್ಪ | ಗುರುಸ್ವಾಮಿ ಕಲಿಕೇರಿ
ಶಿವಮೊಗ್ಗ, ಜು.20: ಕುವೆಂಪು ವಿಶ್ವವಿದ್ಯಾನಿಲಯದ 33ನೇ ಘಟಿಕೋತ್ಸವವು ಜು.22ರಂದು ನಡೆಯಲಿದೆ. ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮೂವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತಿದೆ.
ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರ ಸಾಧಕ ಎ. ಸದಾನಂದ ಶೆಟ್ಟಿ, ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದ ಸಾಧಕ ಪಂಡಿತ್ ರಾಜಗುರು ಗುರುಸ್ವಾಮಿ ಕಲಿಕೇರಿ ಹಾಗೂ ಗ್ರಾಮೀಣಾಭಿವೃದ್ಧಿ ಕ್ಷೇತ್ರದ ಸಾಧಕ ಎಂ.ಚಂದ್ರಪ್ಪ ಈ ಬಾರಿ ಗೌರವ ಡಾಕ್ಟರೇಟ್ ಗೌರವಕ್ಕೆ ಪಾತ್ರರಾಗಲಿದ್ದಾರೆ.
ಸದಾನಂದ ಶೆಟ್ಟಿ
ಮೂಲತಃ ಉಡುಪಿ ಜಿಲ್ಲೆಯವರಾದ ಎ.ಸದಾನಂದ ಶೆಟ್ಟಿ, ಶಿಕ್ಷಣ ತಜ್ಞರು ಮತ್ತು ಕ್ರೀಡಾ ಆಡಳಿತಗಾರರು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಮತ್ತು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಂಯೋಜಿತಯವಾಗಿರುವ ಶ್ರಿದೇವಿ ಸಮೂಹ ಶಿಕ್ಷಣ ಸಂಸ್ಥೆಯ ಸ್ಥಾಪಕರು. ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತಿದೆ.
ಪಂಡಿತ್ ರಾಜಗುರು ಗುರುಸ್ವಾಮಿ ಕಲಿಕೇರಿ
ಮೂಲತಃ ವಿಜಯಪುರ ಜಿಲ್ಲೆಯ ಕಲಿಕೇರಿ ಗ್ರಾಮದವರು. ಗಾನಭಾರತಿ, ಭಾವ ಭಗವದ್ಗೀತೆ ಮತ್ತಿತರ ಕವನ ಸಂಕಲನಗಳು, ಚಿನ್ಮಯ, ಮೌನ ತಪಸ್ವಿ ಕಾದಂಬರಿ, 21 ಷಟ್ಪದಿ ಕಾವ್ಯಗಳನ್ನು ಪ್ರಕಟಿಸಿದ್ದಾರೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಇವರು ಸುಮಾರು ಆರು ಸಾವಿರಕ್ಕೂಅಧಿಕ ಗೀತಗಾಯನ ಕಛೇರಿ ನಡೆಸಿಕೊಟ್ಟಿದ್ದಾರೆ. ಇವರ ಸಾಹಿತ್ಯ, ಮತ್ತು ಸಂಗೀತ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತಿದೆ.
ಎಂ.ಚಂದ್ರಪ್ಪ
ಮೂಲತಃ ದಾವಣಗೆರೆ ಜಿಲ್ಲೆಯ ಇವರು, ರಾಜಕಾರಣಿ ಮತ್ತು ಹಲವು ಶಿಕ್ಷಣ ಸಂಸ್ಥೆಗಳ ಸ್ಥಾಪಕರು. ಚಿತ್ರದುರ್ಗ ಜಿಲ್ಲೆಯ ದೇವರಾಜ್ ಅರಸ್ ಶಿಕ್ಷಣ ಸಮೂಹದ ಸ್ಥಾಪಕರು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಶಾಸಕಾಂಗ ಸಮಿತಿ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಜನಪ್ರತಿನಿಧಿಯಾಗಿ ಗ್ರಾಮೀಣ ಭಾಗದಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿರುತ್ತಾರೆ. ಇವರ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಕೆಲಸಗಳನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಪದವಿ ನೀಡಲಾಗುತ್ತಿದೆ.