ಶಿವಮೊಗ್ಗ: ಒಂದು ಗಂಟೆಗೆ ಪೊಲೀಸ್ ಅಧಿಕಾರಿಯಾದ ಎಂಟರ ಪೋರ ಆಝಾನ್ ಖಾನ್!
ಶಿವಮೊಗ್ಗ: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕನೊಬ್ಬನು ಪೊಲೀಸ್ ಅಧಿಕಾರಿಯಾಗಬೇಕು ಎಂಬ ಆಸೆಯನ್ನು ಮಾನವೀಯ ನೆಲೆಗಟ್ಟಿನಲ್ಲಿ ನೆರವೇರಿಸಿದ ಅಪರೂಪದ ಕ್ಷಣಕ್ಕೆ ಶಿವಮೊಗ್ಗ ಇಲಾಖೆ ಸಾಕ್ಷಿಯಾಯಿತು.
ಶಿವಮೊಗ್ಗ ನಗರದ ಸೂಳೆಬೈಲು ನಿವಾಸಿ ತಬ್ರೇಝ್ ಖಾನ್ ಅವರ ಪುತ್ರ ಆಝಾನ್ ಖಾನ್ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಬಾಲಕ.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಬಾಲಕ ಆಝಾನ್ ಖಾನ್ ಗೆ ಪೊಲೀಸ್ ಅಧಿಕಾರಿಯಾಗಬೇಕು ಎಂಬ ಆಸೆ ಇತ್ತು.ಈ ಹಿನ್ನಲೆಯಲ್ಲಿ ಬುಧವಾರ ದೊಡ್ಡಪೇಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿ ಒಂದು ಗಂಟೆ ಜವಾಬ್ದಾರಿ ನಿಭಾಯಿಸಿದ. ಈ ವಿಶೇಷ ಸಂದರ್ಭಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಸಾಕ್ಷಿಯಾಯಿತು.
ಆಝಾನ್ ಖಾನ್ ದೊಡ್ಡವನಾದ ಮೇಲೆ ಪೊಲೀಸ್ ಆಗಬೇಕು ಅನ್ನುವುದು ಆತನ ಆಸೆಯಾಗಿತ್ತಂತೆ. ಇದೇ ಕಾರಣಕ್ಕೆ ಪೋಷಕರು ಮಗನ ಆಸೆ ಈಡೇರಿಸುವಂತೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರಿಗೆ ಮನವಿ ಮಾಡಿದ್ದರು. ವಿಶೇಷ ಪ್ರಕರಣ ಎಂದು ಪರಿಗಣಿಸಿ ಪೊಲೀಸ್ ಇಲಾಖೆ ವತಿಯಿಂದ ಆಝಾನ್ ಖಾನ್‌ನನ್ನು ದೊಡ್ಡಪೇಟೆ ಠಾಣೆ ಇನ್ಸ್‌ಪೆಕ್ಟರ್ ಆಗಿ ನಿಯೋಜಿಸಲಾಗಿತ್ತು.
ಬಾಲಕನ ಆಸೆ ಈಡೇರಿಸಲು ಪೊಲೀಸ್ ಇಲಾಖೆ ಎಲ್ಲ ಸಿದ್ಧತೆ ಮಾಡಿಕೊಂಡಿತ್ತು. ಪೊಲೀಸ್ ಜೀಪಿನಲ್ಲಿಯೇ ಆಝಾನ್ ಖಾನ್‌ನನ್ನು ಠಾಣೆಗೆ ಕರೆತರಲಾಯಿತು. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ ಭೂಮರೆಡ್ಡಿ, ಇನ್ಸ್‌ಪೆಕ್ಟರ್ ಆಜಾನ್ ಖಾನ್‌ನನ್ನು ಸ್ವಾಗತಿಸಿದರು. ಹಿರಿಯ ಅಧಿಕಾರಿಗಳಿಗೆ ಸಲ್ಯೂಟ್ ಮಾಡಿದ ಆಜಾನ್ ಖಾನ್ ಇನ್ಸ್‌ಪೆಕ್ಟರ್ ಆಗಿ ಅಧಿಕಾರ ಸ್ವೀಕರಿಸಿದ.
ಅಧಿಕಾರ ಸ್ವೀಕರಿಸುತ್ತಿದ್ದಂತೆ ಇನ್ಸ್‌ಪೆಕ್ಟರ್ ಆಝಾನ್ ಖಾನ್, ಸಿಬ್ಬಂದಿಗಳನ್ನು ಕರೆದು ಎಲ್ಲರು ಚೆನ್ನಾಗಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದ. ಸಿಬ್ಬಂದಿಯೊಬ್ಬರು ರಜೆ ಬೇಕು ಎಂದು ಮನವಿ ಮಾಡಿದರು. ಕಾರಣ ಕೇಳಿದ ಆಝಾನ್ ಖಾನ್, ರಜೆಗೆ ಅನುಮತಿ ನೀಡಿದ. ಇನ್ನು, ಇದೇ ವೇಳೆ ಪೊಲೀಸರು ಕಳ್ಳನನ್ನು ಹಿಡಿದು ತಂದು ನಿಲ್ಲಿಸಿದಾಗ, ಇನ್ಮುಂದೆ ಕಳ್ಳತನ ಮಾಡಬಾರದು ಎಂದು ಖಡಕ್ ಎಚ್ಚರಿಕೆ ನೀಡಿದ.
ಸಂಜೆ 6.30ರಿಂದ ಒಂದು ಗಂಟೆ ಕಾಲ ಆಝಾನ್ ಖಾನ್ ದೊಡ್ಡಪೇಟೆ ಠಾನೆ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿಭಾಯಿಸಿದ. ಪೊಲೀಸ್ ಇನ್ಸ್‌ಪೆಕ್ಟರ್ ಆಗಿದ್ದಕ್ಕೆ ಬಾಲಕ ಖುಷಿ ಪಟ್ಟ. ಬಾಲಕನ ಆಸೆ ಈಡೇರಿಸಿದ ಖುಷಿ ಪೊಲೀಸರ ಮೊಗದಲಿತ್ತು.
''ದೊಡ್ಡವನಾದ ಮೇಲೆ ನಾನು ಎಸ್‌ಪಿ ಆಗಬೇಕು ಅಂದುಕೊಂಡಿದ್ದೇನೆ. ನಾನು ಪೊಲೀಸ್ ಆಗಬೇಕು ಎಂದು ಅಪ್ಪನಿಗೆ ಹೇಳಿದೆ. ಈಗ ನನಗೆ ಖುಷಿಯಾಗಿದೆ. ಎಸ್‌ಪಿ ಸರ್ ಬಂದಿದ್ದರು. ಇಲ್ಲಿ ಬಂದಾಗ ಸ್ಟೇಷನ್ ತೋರಿಸಿದರು''
- ಆಝಾನ್ ಖಾನ್
---------------------------------------
''ನನ್ನ ಮಗನಿಗೆ ಹುಟ್ಟಿನಿಂದ ಹೃದಯ ಸಂಬಂಧಿ ಕಾಯಿಲೆ ಇದೆ. ಎಷ್ಟೋ ಲಕ್ಷ ಮಕ್ಕಳಲ್ಲಿ ಒಬ್ಬರಿಗೆ ಇಂತಹ ಕಾಯಿಲೆ ಬರಲಿದೆಯಂತೆ. ಆತನ ಹೃದಯ ಬೆಳೆದಿಲ್ಲ. ವೈದ್ಯರು, ತಜ್ಞರ ಬಳಿ ತೋರಿಸಿದಾಗ ಶಸ್ತ್ರಚಿಕಿತ್ಸೆ ಮಾಡಲು ಆಗುವುದಿಲ್ಲ ಎಂದರು. ಹೃದಯ ಮತ್ತು ಶಾಸ್ವಕೋಶದ ಕಸಿ ಮಾಡಬೇಕು ಎಂದಿದ್ದಾರೆ. ಆತನಿಗೆ ಪೊಲೀಸ್ ಆಗಬೇಕು ಅನ್ನುವ ಆಸೆ ಇದೆ''
- ತಬ್ರೇಝ್ ಖಾನ್, ಬಾಲಕನ ತಂದೆ
----------------------------------------
''ಒಂದು ದಿನ ಪೊಲೀಸ್ ಆಗಬೇಕು ಎಂದು ಬಾಲಕನಿಗೆ ಆಸೆ ಇತ್ತು. ಈ ಕುರಿತು ಅವರ ತಂದೆ ಮನವಿ ಮಾಡಿದ್ದರು. ಈ ಹಿನ್ನೆಲೆ ಡಿವೈಎಸ್‌ಪಿ ಅವರಿಗೆ ತಿಳಿಸಿ ದೊಡ್ಡಪೇಟೆ ಠಾಣೆ ಇನ್ಸ್‌ಪೆಕ್ಟರ್ ಮಾಡಲಾಗಿದೆ. ಮಾನವೀಯ ನೆಲೆಯಲ್ಲಿ ಬಾಲಕನನ್ನು ಇನ್ಸ್‌ಪೆಕ್ಟರ್ ಮಾಡಿದ್ದೇವೆ. ಬಾಲಕ ತುಂಬ ಖುಷಿ ಪಟ್ಟಿದ್ದಾನೆ''
- ಮಿಥುನ್ ಕುಮಾರ್, ಎಸ್ಪಿ
--------------------------------
''ಮಾನವೀಯ ನೆಲೆಯಲ್ಲಿ ಆ ಮಗುವನ್ನು ಒಂದು ಗಂಟೆ ಇನ್ಸ್‌ಪೆಕ್ಟರ್ ಮಾಡುತ್ತೇವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದರು. ಬಹಳ ಖುಷಿಯಿಂದ ಒಂದು ಗಂಟೆ ಕಾಲ ಆ ಮಗುವಿನ ನನ್ನ ಸ್ಥಾನ ಬಿಟ್ಟುಕೊಟ್ಟಿದ್ದೇನೆ. ಠಾಣೆಯ ಸಿಬ್ಬಂದಿಯನ್ನು ಕರೆದು ರೋಲ್ ಕಾಲ್ ಮಾಡಿದ. ಒಬ್ಬ ಸಿಬ್ಬಂದಿ ಒಂದು ದಿನ ರಜೆ ಕೇಳಿದರೆ ಎರಡು ದಿನ ರಜೆಯನ್ನು ಕೊಟ್ಟಿದ್ದಾನೆ. ಮಗುವಿನ ಖುಷಿ ಕಂಡು ನಮಗೆ ಖುಷಿಯಾಯಿತು''
- ಅಂಜನ್ ಕುಮಾರ್, ಇನ್ಸ್ ಪೆಕ್ಟರ್, ದೊಡ್ಡ ಪೇಟೆ ಠಾಣೆ