ರಾಜ್ಯಾದ್ಯಂತ ನೂತನವಾಗಿ 150 ಹಾಸ್ಟೆಲ್‍ಗಳನ್ನು ಪ್ರಾರಂಭಿಸಲು ಕ್ರಮ : ಸಚಿವ ಶಿವರಾಜ್ ತಂಗಡಗಿ
ಬೆಂಗಳೂರು : ಬಜೆಟ್‍ನಲ್ಲಿ ಘೋಷಣೆ ಮಾಡಿದಂತೆ ರಾಜ್ಯಾದ್ಯಂತ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗಗಳ 150 ಹಾಸ್ಟೇಲ್‍ಗಳನ್ನು ಶೀಘ್ರದಲ್ಲೇ ಪ್ರಾರಂಭಿಸಲು ಕ್ರಮ ವಹಿಸುತ್ತಿದೆ ಎಂದು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಪರಿಷತ್‍ನಲ್ಲಿ ಬಿಜೆಪಿ ಸದಸ್ಯ ಸಾಬಣ್ಣ ತಳವಾರರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ 75 ಬಾಲಕಿಯರ ಹಾಗೂ 75 ಬಾಲಕರು ಸೇರಿದಂತೆ ಒಟ್ಟು 150 ವಿದ್ಯಾರ್ಥಿನಿಲಯಗಳನ್ನು ತೆರೆಯಲಾಗುವುದು. ಮೈಸೂರು, ಬೆಳಗಾವಿ, ಧಾರವಾಡ ಸೇರಿದಂತೆ ವಿವಿಧ ಶೈಕ್ಷಣಿಕ ಜಿಲ್ಲೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಮೊದಲು ಜಿಲ್ಲಾ ಕೇಂದ್ರಗಳಲ್ಲಿ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಬೇಕು ಎಂಬ ಆಲೋಚನೆ ಇತ್ತು. ಆದರೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ತಾಲ್ಲೂಕು ಮಟ್ಟದಲ್ಲೂ ಪ್ರಾರಂಭಿಸಲು ಸರಕಾರ ಚಿಂತನೆ ನಡೆಸುತ್ತಿದೆ ಎಂದು ಅವರು ತಿಳಿಸಿದರು.
ವಿದ್ಯಾರ್ಥಿನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರಗಳನ್ನು ನೀಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ಮೊದಲು ಮೂರು ತಿಂಗಳಿಗೊಮ್ಮೆ ಆಹಾರ ಪದಾರ್ಥಗಳನ್ನು ಪರೀಕ್ಷೆ ಒಳಪಡಿಸಲಾಗುತ್ತಿತ್ತು. ಇನ್ನು ಮುಂದೆ ಪ್ರತಿ ತಿಂಗಳು ಪರೀಕ್ಷೆಗೆ ಒಳಪಡಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಈವರೆಗೂ ಜಿಲ್ಲಾ ಮಟ್ಟದಲ್ಲಿ ಆಹಾರ ಪದಾರ್ಥಗಳನ್ನು ಖರೀದಿಸಲು ಟೆಂಡರ್ ಕರೆಯಲಾಗುತ್ತಿತ್ತು. ಇದು ಟೆಂಡರ್ ನಲ್ಲಿ ಭಾಗವಹಿಸಿದವರಿಗೆ ಸಿಗುತಿತ್ತು. ಇನ್ನು ಮುಂದೆ ತಾಲ್ಲೂಕು ಮಟ್ಟದಲ್ಲಿ ಟೆಂಡರ್ ಕರೆಯಲಾಗುತ್ತದೆ ಎಂದು ಸಚಿವರು ವಿವರಿಸಿದರು.